Match Fixing Case: ಮ್ಯಾಚ್ ಫಿಕ್ಸಿಂಗ್ ಪ್ರಕರಣದಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಮೂವರು ಆಟಗಾರರನ್ನು ಬಂಧಿಸಲಾಗಿದೆ. 2015-16ರ ರಾಮ್ ಸ್ಲಾಮ್ ಚಾಲೆಂಜ್ ಟಿ20 ಲೀಗ್ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದ್ದ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೆ ಪ್ರಾಯಾರಿಟಿ ಕ್ರೈಮ್ ಇನ್ವೆಸ್ಟಿಗೇಷನ್ ಡೈರೆಕ್ಟರೇಟ್ (ಡಿಪಿಸಿಐ) ಪ್ರಕರಣದ ತನಿಖೆ ನಡೆಸಿತ್ತು. ಇದರಲ್ಲಿ ಮೂವರು ಆಟಗಾರರು ಭಾಗಿಯಾಗಿರುವುದಾಗಿ ಸಾಭಿತಾಗಿದೆ ಈ ಸಂಬಂಧ ಬಂಧಿಸಲಾಗಿದೆ. ಇದರಲ್ಲಿ 2014ರ ಟಿ20 ವಿಶ್ವಕಪ್ನ ಭಾಗವಾಗಿದ್ದ ಓರ್ವ ದಿಗ್ಗಜ ಬೌಲರ್ ಕೂಡ ಸೇರಿದ್ದಾರೆ.
ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಮಾಜಿ ಆಟಗಾರರಾದ, ಲೋನ್ವಾಬೊ ತ್ಸೊಟ್ಸೊಬೆ, ಥಾಮಿ ತ್ಸೊಲೆಕಿಲೆ ಮತ್ತು ಎಥಿ ಎಂಬಾಲತಿ ಅವರನ್ನು ಭ್ರಷ್ಟಾಚಾರ ಚಟುವಟಿಕೆಗಳ ತಡೆ ಮತ್ತು ಹೋರಾಟ ಕಾಯಿದೆ, 2004ರ ಸೆಕ್ಷನ್ 15ರ ಅಡಿಯಲ್ಲಿ ಬಂಧಿಸಲಾಗಿದೆ. ಲೀಗ್ ಪಂದ್ಯದ ವೇಳೆ ಈ ಮೂವರು ಫಲಿತಾಂಶವನ್ನು ಬದಲಾಯಿಸುವುದಾಗಿ ಫಿಕ್ಸಿಂಗ್ ಮಾಡಿಕೊಂಡಿದ್ದರು. ದೇಶಿಯ ಲೀಗ್ನ ಒಟ್ಟು 3 ಟಿ20 ಪಂದ್ಯಗಳನ್ನು ಫಿಕ್ಸ್ ಮಾಡುವುದಾಗಿ ಬುಕ್ಕಿಗಳೊಂದಿಗೆ ಫಿಕ್ಸಿಂಗ್ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ.
2016 ಮತ್ತು 2017ರ T20 ಪಂದ್ಯಾವಳಿಯಲ್ಲಿ ಫಿಕ್ಸಿಂಗ್ ನಡೆಸಿದ್ದ ಕಾರಣ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಒಟ್ಟು 7 ಆಟಗಾರರ ಮೇಲೆ ನಿಷೇಧ ಹೇರಿತ್ತು. ಈ ಪಟ್ಟಿಯಲ್ಲಿ ಲೋನ್ವಾಬೊ ತ್ಸೊಟ್ಸೊಬೆ, ಥಾಮಿ ತ್ಸೊಲೆಕಿಲೆ ಮತ್ತು ಎಥಿ ಎಂಬಾಲಾಟಿ ಸೇರಿದ್ದಾರೆ. 7 ಆಟಗಾರರ ಪೈಕಿ ಗುಲಾಂ ಬೋಡಿ ಈಗಾಗಲೇ ಜೈಲು ಸೇರಿದ್ದಾರೆ. ಜೀನ್ ಸಿಮ್ಸ್ ಮತ್ತು ಪುಮಿ ಮತ್ಶಿಕ್ವೆ ತಪ್ಪೊಪ್ಪಿಕೊಂಡಿದ್ದು ಅವರಿಗೆ ನಿಷೇಧದ ಶಿಕ್ಷೆ ವಿಧಿಸಲಾಗಿದೆ.
ತ್ಸೊತ್ಸೊಬೆ ದಾಖಲೆ: ಲೊನ್ವಾಬೊ ತ್ಸೊತ್ಸೊಬೆ ದಕ್ಷಿಣ ಆಫ್ರಿಕಾ ಪರ 89 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದಾರೆ. ಈ ಅವಧಿಯಲ್ಲಿ ಎಡಗೈ ವೇಗಿ 100ಕ್ಕೂ ಹೆಚ್ಚು ವಿಕೆಟ್ ಪಡೆದಿದ್ದಾರೆ. 2009ರಲ್ಲಿ ODIಗೆ ಪಾದಾರ್ಪಣೆ ಮಾಡಿದ್ದ ಇವರು 2013 ರಲ್ಲಿ ಭಾರತದ ವಿರುದ್ಧ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಆಫ್ರಿಕಾ ಪರ ಲೊನ್ವಾಬೊ ಟೆಸ್ಟ್‌ನಲ್ಲಿ 9 ವಿಕೆಟ್, ಏಕದಿನದಲ್ಲಿ 94 ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 18 ವಿಕೆಟ್ ಪಡೆದಿದ್ದಾರೆ. ತ್ಸೊತ್ಸೊಬೆ ಈ ಹಿಂದೆ ವಿಶ್ವದ ನಂಬರ್ 1 ಬೌಲರ್ ಆಗಿದ್ದರು.
ಇದನ್ನೂ ಓದಿ: ಅಚ್ಚರಿ..! ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಟೀಂ ಇಂಡಿಯಾ ವೇಗದ ಬೌಲರ್!