ಸೇಂಟ್ ಲೂಸಿಯಾ: ಕ್ವಿಂಟನ್ ಡಿ ಕಾಕ್ ಅರ್ಧಶತಕ (65) ಹಾಗೂ ಬೌಲರ್ಗಳ ಸಂಘಟಿತ ದಾಳಿಯ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 7 ರನ್ ಅಂತರದ ಗೆಲುವಿನ ನಗೆ ಬೀರಿತು. ಇಲ್ಲಿನ ಡರೆನ್ ಸಮಿ ರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಗುರುವಾರ ನಡೆದ ಹಣಾಹಣಿಯಲ್ಲಿ ಆಂಗ್ಲರು ಗೆಲುವಿನ ಸಮೀಪ ಬಂದು ಎಡವಿದರು.
ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಹರಿಣಗಳನ್ನು ಬ್ಯಾಟಿಂಗ್ಗೆ ಆಹ್ವಾನಿಸಿದರು. ಕ್ರೀಸ್ಗಿಳಿದ ದಕ್ಷಿಣ ಆಫ್ರಿಕಾ ತಂಡವು ಅದ್ಭುತ ಆರಂಭ ಪಡೆಯಿತು. ಕ್ವಿಂಟನ್ ಡಿ ಕಾಕ್ ಹಾಗೂ ರೀಝಾ ಹೆನ್ರಿಕ್ಸ್ ಮೊದಲ ವಿಕೆಟ್ಗೆ 9.5 ಓವರ್ಗಳಲ್ಲಿ 86 ರನ್ ಬಾರಿಸಿದರು. 19 ರನ್ ಗಳಿಸಿದ್ದ ಹೆನ್ರಿಕ್ಸ್ ಮೊದಲಿಗರಾಗಿ ಔಟಾದರು. ಇದರ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ದಿಢೀರ್ ಕುಸಿತದ ಹಾದಿ ಹಿಡಿಯಿತು. 113 ರನ್ ಆಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡು, ರನ್ಗತಿ ಇಳಿಮುಖವಾಯಿತು.
ಕ್ವಿಂಟನ್ ಡಿ ಕಾಕ್ 65, ಹೆನ್ರಿಚ್ ಕ್ಲಾಸೆನ್ 8, ನಾಯಕ ಐಡೆನ್ ಮಾರ್ಕ್ರಮ್ 1 ರನ್ಗೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಆಕ್ರಮಣಕಾರಿ ಆಟವಾಡಿದ ಡೇವಿಡ್ ಮಿಲ್ಲರ್ ಅಮೂಲ್ಯ 43 ರನ್ ಕಾಣಿಕೆ ನೀಡಿದರು. ಟ್ರಿಸ್ಟನ್ ಸ್ಟಬ್ಸ್ 12* ಹಾಗೂ ಕೇಶವ್ ಮಹಾರಾಜ್ 5 ರನ್ ಗಳಿಸುವುದರೊಂದಿಗೆ, ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 6 ವಿಕೆಟ್ಗೆ 163 ರನ್ ಪೇರಿಸಿತು. ಇಂಗ್ಲೆಂಡ್ ಪರ ಜೋಫ್ರಾ ಆರ್ಚರ್ 40 ರನ್ಗೆ 3 ವಿಕೆಟ್ ಪಡೆದರು.
ಇಂಗ್ಲೆಂಡ್ ಚೇಸಿಂಗ್: 164 ರನ್ ಬೆನ್ನಟ್ಟಿದ ಇಂಗ್ಲೆಂಡ್ ಆರಂಭದಿಂದಲೂ ನಿಧಾನಗತಿಯ ಬ್ಯಾಟಿಂಗ್ ನಡೆಸಿತು. ಫಿಲಿಪ್ ಸಾಲ್ಟ್ 11 ರನ್ಗೆ ಔಟಾಗುವ ಮೂಲಕ 15 ರನ್ ಆಗುವಷ್ಟರಲ್ಲಿ ಮೊದಲ ವಿಕೆಟ್ ಪತನಗೊಂಡಿತು. ಬಳಿಕ ನಾಯಕ ಬಟ್ಲರ್ (17) ಹಾಗೂ ಜಾನಿ ಬೈರ್ಸ್ಟೋ (16) 28 ರನ್ ಜೊತೆಯಾಟವಾಡಿದರೂ ಕೂಡ ವೇಗವಾಗಿ ಆಡುವಲ್ಲಿ ವಿಫಲರಾದರು. ಬಳಿಕ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಕೆಟ್ ಒಪ್ಪಿಸಿದರು. ಈ ನಡುವೆ 9 ರನ್ ಗಳಿಸಿದ್ದ ಮೋಯಿನ್ ಅಲಿ ಬಾರ್ಟ್ಮನ್ ಬೌಲಿಂಗ್ನಲ್ಲಿ ಔಟಾದರು. ಹೀಗಾಗಿ, 64 ರನ್ಗೆ 4 ವಿಕೆಟ್ ಕಳೆದುಕೊಂಡ ಆಂಗ್ಲರು ಸಂಕಷ್ಟಕ್ಕೆ ಸಿಲುಕಿದ್ದರು.
ಇದನ್ನೂ ಓದಿ: ಈ ಬಾರಿಯ ಟಿ-20 ವಿಶ್ವಕಪ್ನಲ್ಲಿ ಮೊದಲ ಹ್ಯಾಟ್ರಿಕ್ ದಾಖಲೆ ಬರೆದ ಆಸೀಸ್ ವೇಗಿ! - First Hat Trick at T20 World Cup
ಬ್ರೂಕ್ - ಲಿವಿಂಗ್ಸ್ಟೋನ್ ಜೊತೆಯಾಟ: ಈ ಹಂತದಲ್ಲಿ ಒಂದಾದ ಹ್ಯಾರಿ ಬ್ರೂಕ್ ಅರ್ಧಶತಕ (53) ಹಾಗೂ ಲಿಯಾಮ್ ಲಿವಿಂಗ್ಸ್ಟೋನ್ 33 ರನ್ ಬಾರಿಸಿ ಇಂಗ್ಲೆಂಡ್ಗೆ ಗೆಲುವಿನ ಆಸೆ ಮೂಡಿಸಿದರು. 5ನೇ ವಿಕೆಟ್ಗೆ 78 ರನ್ ಜೊತೆಯಾಟವಾಡಿದ ಈ ಜೋಡಿ, 17ನೇ ಓವರ್ ಅಂತ್ಯಕ್ಕೆ ತಂಡದ ಮೊತ್ತವನ್ನು 139ಕ್ಕೆ ಕೊಂಡೊಯ್ದಿತ್ತು. ಅಂತಿಮ 3 ಓವರ್ಗಳಲ್ಲಿ ಗೆಲುವಿಗೆ 34 ರನ್ ಅಗತ್ಯವಿತ್ತು. ಆದರೆ, ರಬಾಡ ಎಸೆದ 18ನೇ ಓವರ್ನಲ್ಲಿ ಎರಡನೇ ಬಾಲ್ನಲ್ಲಿ ಲಿವಿಂಗ್ಸ್ಟೋನ್ ಔಟಾದರು. ಬಳಿಕದ ಎರಡು ಓವರ್ಗಳಲ್ಲಿ ಬೌಂಡರಿ ಗಳಿಸುವಲ್ಲಿ ವಿಫಲರಾದ ಆಂಗ್ಲರು ಒತ್ತಡಕ್ಕೆ ಸಿಲುಕಿದರು.
ಕೊನೆಯ ಓವರ್ನಲ್ಲಿ ಇಂಗ್ಲೆಂಡ್ ಗೆಲುವಿಗೆ 14 ರನ್ ಅಗತ್ಯವಿತ್ತು. ಬೌಲಿಂಗ್ಗಿಳಿದ ನೋಕಿಯಾ ಮೊದಲ ಎಸೆತದಲ್ಲೇ ಬ್ರೂಕ್ ವಿಕೆಟ್ ಕಿತ್ತರು. 2ನೇ ಎಸೆತದಲ್ಲಿ ಆರ್ಚರ್ ಒಂದು ರನ್ ಗಳಿಸಿದ್ದು, ಬಳಿಕ ಸ್ಯಾಮ್ ಕರನ್ ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ರನ್ ಗಳಿಸುವಲ್ಲಿ ವಿಫಲರಾದ ಕರನ್ 5ನೇ ಎಸೆತದಲ್ಲಿ ಕೇವಲ 1 ರನ್ ಬಾರಿಸಿದರು. ಇದರಿಂದಾಗಿ ಕೊನೆಯ ಬಾಲ್ಗೆ 7 ರನ್ ಅಗತ್ಯವಿತ್ತು. ಆದರೆ ಆರ್ಚರ್ ದೊಡ್ಡ ಹೊಡೆತಕ್ಕೆ ಯತ್ನಿಸಿ ವಿಫಲರಾದರು.
ಅಂತಿಮವಾಗಿ 6 ವಿಕೆಟ್ಗೆ 156 ರನ್ ಗಳಿಸಿದ ಇಂಗ್ಲೆಂಡ್ 7 ರನ್ಗಳ ಸೋಲುಂಡಿತು. ಹರಿಣಗಳ ಪರ ರಬಾಡ 32ಕ್ಕೆ 2 ಹಾಗೂ ಕೇಶವ್ ಮಹಾರಾಜ್ 25ಕ್ಕೆ 2 ವಿಕೆಟ್ ಕಬಳಿಸಿ ತಂಡದ ಮೇಲುಗೈಗೆ ಪ್ರಮುಖ ಕಾರಣರಾದರು.
ಇದನ್ನೂ ಓದಿ: ದ್ರಾವಿಡ್ ಕೈಯಿಂದ 'ಬೆಸ್ಟ್ ಫೀಲ್ಡರ್' ಮೆಡಲ್ ಪಡೆದ ಆಟಗಾರ ಯಾರು ಗೊತ್ತಾ? - Fielder Of The Match Medal