ನವದೆಹಲಿ: ಟಿ-20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿರುವ ಭಾರತ ಕ್ರಿಕೆಟ್ ತಂಡಕ್ಕೆ 125 ಕೋಟಿ ರೂಪಾಯಿಗಳ ಬಹುಮಾನವನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಿಸಿದ್ದಾರೆ. ಇಡೀ ಟೀಂ ಇಂಡಿಯಾದ ಆಟಗಾರರು ಹಾಗೂ ಸಿಬ್ಬಂದಿಯನ್ನೂ ಅವರು ಹಾಡಿ ಹೊಗಳಿದ್ದಾರೆ.
ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಶನಿವಾರ ನಡೆದ ಟಿ-20 ವಿಶ್ವಕಪ್ ಫೈನಲ್‌ನಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಏಳು ರನ್‌ಗಳಿಂದ ಸೋಲಿಸಿದೆ. ಈ ಮೂಲಕ ಟಿ-20 ವಿಶ್ವಕಪ್ನ ಎರಡನೇ ಪ್ರಶಸ್ತಿಗೆ ಮುತ್ತಿಕ್ಕಿದೆ. ಟೀಂ ಇಂಡಿಯಾದ ಸಾಧನೆಯನ್ನು ಶ್ಲಾಘಿಸಿರುವ ಜಯ್ ಶಾ, ಐಸಿಸಿ ಪುರುಷರ ಟಿ-20 ವಿಶ್ವಕಪ್ 2024 ಗೆದ್ದ ಟೀಂ ಇಂಡಿಯಾಗೆ 125 ಕೋಟಿಗಳ ಬಹುಮಾನದ ನಗದು ಹಣವನ್ನು ಘೋಷಿಸಲು ನನಗೆ ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.
I am pleased to announce prize money of INR 125 Crores for Team India for winning the ICC Men’s T20 World Cup 2024. The team has showcased exceptional talent, determination, and sportsmanship throughout the tournament. Congratulations to all the players, coaches, and support… pic.twitter.com/KINRLSexsD
— Jay Shah (@JayShah) June 30, 2024
ತಂಡವು ಪಂದ್ಯಾವಳಿಯ ಉದ್ದಕ್ಕೂ ಅಸಾಧಾರಣ ಪ್ರತಿಭೆ, ದೃಢತೆ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದೆ. ಈ ಅತ್ಯುತ್ತಮ ಸಾಧನೆಗಾಗಿ ಎಲ್ಲ ಆಟಗಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ಅಭಿನಂದನೆಗಳು ಎಂದು ಬಿಸಿಸಿಐ ಕಾರ್ಯದರ್ಶಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಟೀಕಾಕಾರರನ್ನು ಮೌನಗೊಳಿಸಿದ್ದಾರೆ: ಅಲ್ಲದೇ, ರೋಹಿತ್ ಶರ್ಮಾ ಅವರ ಅಸಾಧಾರಣ ನಾಯಕತ್ವದಲ್ಲಿ ಈ ತಂಡವು ಗಮನಾರ್ಹವಾದ ಸಂಕಲ್ಪ ಮತ್ತು ಸ್ಥಿತಿಸ್ಥಾಪಕತ್ವವನ್ನು ತೋರಿಸಿದೆ. ಐಸಿಸಿ ಟಿ-20 ವಿಶ್ವಕಪ್ ಇತಿಹಾಸದಲ್ಲಿ ಪಂದ್ಯಾವಳಿಯನ್ನು ಅಜೇಯವಾಗಿ ಗೆದ್ದ ಮೊದಲ ತಂಡವಾಗಿದೆ. ಪದೇ ಪದೇ ವಿಮರ್ಶೆ ಮಾಡುತ್ತಿದ್ದವರನ್ನು ತಮ್ಮ ಮಿಂಚಿನ ಪ್ರದರ್ಶನಗಳೊಂದಿಗೆ ಎದುರಿಸಿದ್ದಾರೆ ಮತ್ತು ಮೌನಗೊಳಿಸಿದ್ದಾರೆ ಎಂದು ಜಯ್ ಶಾ ಹೇಳಿದ್ದಾರೆ.
ತಂಡದ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಮಣಿಯದ ಮನೋಭಾವದಿಂದ ನಮಗೆಲ್ಲರಿಗೂ ಹೆಮ್ಮೆ ತಂದಿದೆ. ರೋಹಿತ್ ಶರ್ಮಾ ನೇತೃತ್ವದಲ್ಲಿ ಮತ್ತು ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ ಮತ್ತು ಇತರರಿಂದ ಸಮರ್ಥವಾಗಿ ಇವರು 1.4 ಶತಕೋಟಿ ಭಾರತೀಯರ ಕನಸುಗಳು ಮತ್ತು ಆಶಯಗಳನ್ನು ಈಡೇರಿಸಿದ್ದಾರೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸತತ 17 ವರ್ಷಗಳಿಂದ ಪ್ರಶಸ್ತಿ ಬರ ಅನುಭವಿಸಿದ್ದ ಟೀಂ ಇಂಡಿಯಾ ರೋಹಿತ್ ಶರ್ಮಾ ನಾಯಕತ್ವದಲ್ಲಿ ಶನಿವಾರ ಮತ್ತೆ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಅಜೇಯವಾಗಿ ವಿಶ್ವಕಪ್ ಜಯಿಸಿದ ತಂಡವನ್ನು ದೇಶವೇ ಹಾಡಿ ಹೊಗಳುತ್ತಿದೆ. ವಿಶ್ವಕಪ್ ಗೆದ್ದ ಬೆನ್ನಲ್ಲೇ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ.
ಇದನ್ನೂ ಓದಿ: ಕೊಹ್ಲಿ- ರೋಹಿತ್ ಶರ್ಮಾ ಬೆನ್ನಲ್ಲೇ ಟಿ20ಗೆ ಆಲ್ ರೌಂಡರ್ ರವೀಂದ್ರ ಜಡೇಜಾ ವಿದಾಯ