ಕಾನ್ಪುರ (ಉತ್ತರಪ್ರದೇಶ): ಭಾರತದ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ನಡುವೆಯೇ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಘೋಷಿಸಿದ್ದಾರೆ. ಟಿ-20 ಮತ್ತು ಟೆಸ್ಟ್ ಕ್ರಿಕೆಟ್ನಿಂದ ದೂರ ಉಳಿಯುವುದಾಗಿ ಅವರು ತಿಳಿಸಿದ್ದಾರೆ.
ಶುಕ್ರವಾರದಿಂದ ಭಾರತ ವಿರುದ್ಧ 2ನೇ ಟೆಸ್ಟ್ ಆರಂಭವಾಗಲಿದ್ದು, ಅದಕ್ಕೂ ಮೊದಲು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಕೀಬ್, ಟಿ-20 ವಿಶ್ವಕಪ್‌ನಲ್ಲಿ ನನ್ನ ಕೊನೆಯ ಪಂದ್ಯವನ್ನು ಆಡಿದ್ದೇನೆ. ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಡೆಯುವ ಸರಣಿಯಲ್ಲಿ ಅವಕಾಶ ಸಿಗದೇ ಇದ್ದಲ್ಲಿ ಭಾರತ ವಿರುದ್ಧದ ಕೊನೆಯ ಪಂದ್ಯ ನನ್ನ ವೃತ್ತಿ ಜೀವನದ ಅಂತಿಮ ಪಂದ್ಯವಾಗಲಿದೆ ಎಂದು ಹೇಳಿದರು.
2026 ರ ವಿಶ್ವಕಪ್ಗೂ ಮೊದಲು ತಂಡ ಹೊಸ ಆಟಗಾರರ ಶೋಧ ನಡೆಸಬೇಕಿದ. ಹೀಗಾಗಿ ನಾನು ತಂಡದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ. ಈ ಬಗ್ಗೆ ನಾನು ಬಾಂಗ್ಲಾದೇಶ ಕ್ರಿಕೆಟ್ ಸಮಿತಿ (ಬಿಸಿಬಿ) ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದು ತಿಳಿಸಿದರು. ಯುಎಇ ಮತ್ತು ಪಾಕಿಸ್ತಾನದಲ್ಲಿ ನಡೆಯುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಪರವಾಗಿ ಏಕದಿನದಲ್ಲಿ ಆಡಲಿದ್ದಾರೆ. ಇದು ಅವರ ಅಂತಿಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೂ ಆಗಲಿದೆ.
ಶಕೀಬ್ ಕ್ರಿಕೆಟ್ ಸಾಧನೆ: ಬಾಂಗ್ಲಾದೇಶದ ಪರವಾಗಿ ಶಕೀಬ್ ಅಲ್ ಹಸನ್ 70 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 128 ಇನಿಂಗ್ಸ್ಗಳಿಂದ 4,600 ರನ್ ಗಳಿಸಿದ್ದಾರೆ. 5 ಶತಕ, 1 ದ್ವಿಶತಕ, 31 ಅರ್ಧಶತಗಳು ಇದರಲ್ಲಿವೆ. ಜೊತೆಗೆ 119 ಇನಿಂಗ್ಸ್ನಲ್ಲಿ ಬೌಲಿಂಗ್ ಮಾಡಿದ್ದು, 242 ವಿಕೆಟ್ ಸಂಪಾದಿಸಿದ್ದಾರೆ. ಇನ್ನೂ 129 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ ಆಡಿರುವ ಶಕೀಬ್ 149 ವಿಕೆಟ್ ಕಿತ್ತರೆ, 2551 ರನ್ಗಳನ್ನು ಬಾರಿಸಿದ್ದಾರೆ.
ಶಕೀಬ್ ಮೇಲಿದೆ ಕೊಲೆ ಕೇಸ್: ಬಾಂಗ್ಲಾದೇಶದ ಸಂಸದರಾಗಿರುವ ಶಕೀಬ್ ಅಲ್ ಹಸನ್ ಕೊಲೆ ಕೇಸ್ನಲ್ಲಿ ಆರೋಪಿಯಾಗಿದ್ದಾರೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿರುದ್ಧ ನಡೆದ ಹೋರಾಟದಲ್ಲಿ ಉಂಟಾದ ಗಲಭೆಯಲ್ಲಿ ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿ ಎಂದು ಗುರುತಿಸಲಾಗಿದೆ. ಶಕೀಬ್ ಅವರು ಅವಾಮಿ ಲೀಗ್‌ನಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ: ಡೋಪಿಂಗ್ ಪರೀಕ್ಷೆಗೆ ಗೈರು: ಕುಸ್ತಿಪಟು ವಿನೇಶ್ ಪೋಗಟ್ಗೆ ನಾಡಾ ನೋಟಿಸ್, ಉತ್ತರಕ್ಕೆ 14 ದಿನಗಳ ಗಡುವು - Vinesh Phogat