ಡರ್ಬನ್, ದಕ್ಷಿಣ ಆಫ್ರಿಕಾ: ಕಿಂಗ್ಸ್‌ಮೀಡ್‌ನಲ್ಲಿ ನಡೆದ ದ್ವಿಪಕ್ಷೀಯ ಸರಣಿಯ ಮೊದಲ ಟಿ - 20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನ 11 ರನ್‌ಗಳ ಸೋಲು ಅನುಭವಿಸಿದೆ. ಪಾಕಿಸ್ತಾನ ತಂಡ ಈ ಪಂದ್ಯದಲ್ಲಿ ಪರಾಜಯ ಹೊಂದಿದ್ದರೂ ಎಡಗೈ ವೇಗಿ ಶಾಹೀನ್ ಅಫ್ರಿದಿ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 24ನೇ ವಯಸ್ಸಿನಲ್ಲೇ ಎಲ್ಲ ಮಾದರಿಗಳಲ್ಲಿ 100 ವಿಕೆಟ್ ಪಡೆಯುವ ಮೂಲಕ ವಿಶ್ವದ ಅತ್ಯಂತ ಕಿರಿಯ ಬೌಲರ್ ಎನಿಸಿಕೊಂಡಿದ್ದಾರೆ.
ಈ ಇಬ್ಬರನ್ನು ಹಿಂದಿಕ್ಕಿದ ಪಾಕ್ ಬೌಲರ್: ನ್ಯೂಜಿಲೆಂಡ್ ವೇಗಿ ಟಿಮ್ ಸೌಥಿ ಅವರು 32 ವರ್ಷ ಮತ್ತು 319 ದಿನಗಳಲ್ಲಿ ಕ್ರಿಕೆಟ್ನ ಮೂರೂ ಸ್ವರೂಪಗಳಲ್ಲಿ 100 ವಿಕೆಟ್‌ಗಳನ್ನು ಪಡೆಯುವ ಮೂಲಕ ದಾಖಲೆ ಬರೆದಿದ್ದರು. ಅವರ ದಾಖಲೆಯನ್ನು ಶಾಹೀನ್ ಅಫ್ರಿದಿ ಪುಡಿಗಟ್ಟಿದ್ದಾರೆ. ಸೌಥಿ ಹೊರತುಪಡಿಸಿ ಉಳಿದ ಇಬ್ಬರು ಬೌಲರ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 34 ವರ್ಷ ಮತ್ತು 319 ದಿನಗಳಿದ್ದಾಗ ಈ ಸಾಧನೆ ಮಾಡಿದ್ದರು. ಅವರನ್ನು ಹೊರತು ಪಡಿಸಿ ಶ್ರೀಲಂಕಾದ ಲಸಿತ್ ಮಾಲಿಂಗ ಅವರು 36 ವರ್ಷ ಮತ್ತು ಒಂಬತ್ತು ದಿನಗಳಿದ್ದಾಗ ಎಲ್ಲ ಮಾದರಿಗಳಲ್ಲಿ 100 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದಿದ್ದರು.
ಸರಣಿಯ ಮೊದಲ ಪಂದ್ಯದಲ್ಲಿ ಶಾಹೀನ್ ಅವರು ಬೌಲ್ ಮಾಡಿದ ಮೂರನೇ ಎಸೆತದಲ್ಲಿ ಬ್ಯಾಟರ್ ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರ ವಿಕೆಟ್ ಕಬಳಿಸಿದರು. ಎಡಗೈ ಸೀಮರ್ ನಂತರ 14ನೇ ಓವರ್‌ನಲ್ಲಿ ಡೇವಿಡ್ ಮಿಲ್ಲರ್ ಅವರನ್ನು ಔಟ್ ಮಾಡಿದರು. 16ನೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ನ್ಕಾಬಯೋಮ್ಜಿ ಪೀಟರ್ ಅವರ ಔಟ್ ಆಗುವುದರೊಂದಿಗೆ T20I ನಲ್ಲಿ 100 ವಿಕೆಟ್‌ಗಳನ್ನು ಕಬಳಿಸಿದ ಪಟ್ಟಿಯಲ್ಲಿ ಸೇರ್ಪಡೆಗೊಂಡರು.
ಜೊತೆಗೆ ಪಾಕಿಸ್ತಾನದ ಪರ ಟಿ20 ಮಾದರಿಯಲ್ಲಿ ಅತ್ಯಂತ ವೇಗವಾಗಿ 100 ವಿಕೆಟ್ ಮೈಲಿಗಲ್ಲು ತಲುಪಿದ ಎರಡನೇ ಪಾಕ್ ಬೌಲರ್ ಎಂಬ ಶ್ರೇಯಕ್ಕೂ ಭಾಜನರಾಗಿದ್ದಾರೆ. ಬಲಗೈ ಮಧ್ಯಮ ವೇಗಿ ಹ್ಯಾರಿಸ್ ರೌಫ್ ಅವರು 71 ಪಂದ್ಯಗಳಲ್ಲಿ ಈ ಮೈಲಿಗಲ್ಲು ದಾಟಿದ್ದರು.
ಅಲ್ಲದೇ ಚುಟುಕು ಕ್ರಿಕೆಟ್ನಲ್ಲಿ 100 ವಿಕೆಟ್ ಪಡೆದ ಪಾಕಿಸ್ತಾನದ ಮೂರನೇ ಬೌಲರ್ ಎನಿಸಿಕೊಂಡರು. ಶಾದಾಬ್ ಖಾನ್ (107 ವಿಕೆಟ್) ಮತ್ತು ಹ್ಯಾರಿಸ್ ರೌಫ್ (110 ವಿಕೆಟ್) ಪಡೆದು ಇವರಿಗಿಂತ ಮುಂದಿದ್ದಾರೆ.
ಇದನ್ನು ಓದಿ: ಟಿ20ಯಲ್ಲಿ 4ನೇ ಅತ್ಯಂತ ನಿಧಾನಗತಿಯ ಅರ್ಧಶತಕ ಗಳಿಸಿದ ಪಾಕ್ ಕ್ರಿಕೆಟಿಗ