ಮುಂಬೈ(ಮಹಾರಾಷ್ಟ್ರ): ಭಾರತದ ಸಾರ್ವಕಾಲಿಕ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಇಂದು (ಜುಲೈ 7) 43ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ರಾಷ್ಟ್ರೀಯ ತಂಡದ ಮಾಜಿ ನಾಯಕರಾದ ಧೋನಿ ಮಧ್ಯರಾತ್ರಿಯೇ ತಮ್ಮ ಪತ್ನಿ ಸಾಕ್ಷಿ ಸಿಂಗ್ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಜನ್ಮದಿನಾಚರಿಸಿ ಸಂಭ್ರಮಿಸಿದರು.
ಮುಂಬೈನಲ್ಲಿ 'ಕೂಲ್ ಕ್ಯಾಪ್ಟನ್' ಖ್ಯಾತಿಯ ವಿಕೆಟ್ ಕೀಪರ್, ಬಲಗೈ ಬ್ಯಾಟರ್ ಎಂಎಸ್ಡಿ, ತಮ್ಮ ಆಪ್ತ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಬರ್ತ್ಡೇ ಸೆಲೆಬ್ರೇಶನ್ ಮಾಡಿದ್ದಾರೆ. ಪತ್ನಿ ಸಾಕ್ಷಿ ಸಿಂಗ್ ಪತಿಗೆ ಕೇಕ್ ತಿನ್ನಿಸಿ ಶುಭ ಹಾರೈಸಿದರು. ಇದೇ ವೇಳೆ, ಪತಿಯ ಪಾದ ಸ್ಪರ್ಶಿಸಿ ನಮಸ್ಕರಿಸಿದ್ದಾರೆ. ಇದರ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿವೆ. ಈ ವಿಡಿಯೋ ಅಭಿಮಾನಿಗಳ ಗಮನ ಸೆಳೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಹ್ಯಾಪಿ ಬರ್ತ್ಡೇ ಕ್ಯಾಪ್ಟನ್ ಸಾಹಬ್! - ಸಲ್ಮಾನ್: ಜನ್ಮದಿನಾಚರಣೆ ಸಂದರ್ಭದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ಭಾಗಿಯಾಗಿದ್ದರು. ಸಲ್ಮಾನ್ ತಮ್ಮ ಇನ್ಸ್ಟಾಗ್ರಾಮ್, 'ಎಕ್ಸ್' ಖಾತೆಯಲ್ಲಿ ಧೋನಿ ಫೋಟೋ ಹಂಚಿಕೊಂಡಿದ್ದು, 'ಹ್ಯಾಪಿ ಬರ್ತ್ಡೇ ಕ್ಯಾಪ್ಟನ್ ಸಾಹಬ್!' ಎಂದು ಶುಭ ಕೋರಿದ್ದಾರೆ. ಧೋನಿ ಹಾಗೂ ಸಲ್ಮಾನ್ ಅವರ ಅಪಾರ ಅಭಿಮಾನಿಗಳು ಫೋಟೋಗಳನ್ನು ಹಂಚಿಕೊಂಡಿದ್ದಾರೆ. 'ಒಂದೇ ಫ್ರೇಮ್ನಲ್ಲಿ ಬಾಲಿವುಡ್‌ನ ಬಾಪ್ ಮತ್ತು ಕ್ರಿಕೆಟ್‌ನ ಬಾಪ್' ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ರಾಂಚಿ ಮನೆ ಮುಂದೆ ಅಭಿಮಾನಿಗಳ ಸಂಭ್ರಮ: ಜಾರ್ಖಂಡ್ನ ರಾಂಚಿಯಲ್ಲಿರುವ ಧೋನಿ ನಿವಾಸದ ಬಳಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿನ ಜನ್ಮದಿನ ಆಚರಿಸಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಅಲ್ಲದೇ, ದೇಶದ ವಿವಿಧ ಭಾಗದಲ್ಲೂ ಅಭಿಮಾನಿಗಳು ಧೋನಿ ಹುಟ್ಟುಹಬ್ಬದ ಆಚರಣೆಯಲ್ಲಿ ತೊಡಗಿದ್ಧಾರೆ. ಅನೇಕ ಕ್ರಿಕೆಟಿಗರು ಹಾಗೂ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.
ಕ್ರಿಕೆಟ್ನಲ್ಲಿ ಎಂಎಸ್ಡಿ ಸಾಧನೆ: ಧೋನಿ ನಾಯಕತ್ವದಲ್ಲಿ ಟೀ ಇಂಡಿಯಾ 2011ರಲ್ಲಿ ಏಕದಿನ ವಿಶ್ವಕಪ್ ಮತ್ತು 2007ರಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದಿತ್ತು. ಅಲ್ಲದೇ, ತಂಡ 2009ರ ಡಿಸೆಂಬರ್‌ನಿಂದ 18 ತಿಂಗಳುಗಳ ಕಾಲ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಪಡೆದಿತ್ತು. 90 ಟೆಸ್ಟ್ ಪಂದ್ಯಗಳನ್ನು ಆಡಿರುವ ಧೋನಿ, 38.09ರ ಸರಾಸರಿಯಲ್ಲಿ 6 ಶತಕಗಳು ಮತ್ತು 33 ಅರ್ಧ ಶತಕಗಳ ಸಮೇತ 4,876 ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ 14ನೇ ಅತಿ ಹೆಚ್ಚು ಸ್ಕೋರರ್ ಆಗಿದ್ದಾರೆ. 350 ಏಕದಿನ ಪಂದ್ಯಗಳಲ್ಲಿ 10,773 ರನ್ ಗಳಿಸಿದ್ದಾರೆ. ಇದರಲ್ಲಿ 10 ಶತಕ ಹಾಗೂ 73 ಅರ್ಧಶತಕಗಳು ಸೇರಿವೆ. ಭಾರತದ ಪರವಾಗಿ 98 ಟಿ-20 ಪಂದ್ಯಗಳನ್ನಾಡಿ 1,617 ರನ್ ಬಾರಿಸಿದ್ದಾರೆ.
ಇದನ್ನೂ ಓದಿ: ಕಿರಣ್ ರಾಜ್ಗೆ ಹುಟ್ಟುಹಬ್ಬದ ಸಂಭ್ರಮ: 'ರಾನಿ' ಚಿತ್ರತಂಡದಿಂದ ವಿಶೇಷ ಗಿಫ್ಟ್