ನವದೆಹಲಿ: ''ಎಂಎಸ್ ಧೋನಿ ಜೊತೆಗೆ ನನ್ನನ್ನು ಹೋಲಿಸಿಕೊಳ್ಳುವುದು ನನಗೆ ಯಾವಾಗಲೂ ಕಷ್ಟ ಮತ್ತು ಸವಾಲು ಅನ್ನಿಸುತ್ತದೆ. ಆದರೆ, ನಮ್ಮೊಂದಿಗೆ ಮುಕ್ತವಾಗಿ ಮಾತನಾಡಬಹುದಾದ ಕೆಲವು ಜನರು ಇದ್ದೇ ಇರುತ್ತಾರೆ. ಹಾಗೆಯೇ ನಾನು ಧೋನಿ ಅವರೊಂದಿಗೆ ಎಲ್ಲವನ್ನೂ ಬಹಿರಂಗವಾಗಿ ಚರ್ಚಿಸುತ್ತೇನೆ. ಅದು ಈಗಲೂ ಕೂಡ'' ಎಂದು ಭಾರತೀಯ ಕ್ರಿಕೆಟ್ ತಂಡದ ಪಟು ರಿಷಭ್ ಪಂತ್ ಹೇಳಿದ್ದಾರೆ.
ಸಂದರ್ಶನವೊಂದರಲ್ಲಿ ತಂಡದ ಮಾಜಿ ನಾಯಕ ಎಂಎಸ್ ಧೋನಿ ಹಾಗೂ ತಮ್ಮ ನಡುವಿನ ಸ್ನೇಹದ ಬಗ್ಗೆ ಮಾತನಾಡಿದ ರಿಷಭ್ ಪಂತ್, ''ಅವರಿಂದ ನಾನು ತುಂಬಾ ಕಲಿತಿದ್ದೇನೆ. ನಾನು ಯಾರೊಂದಿಗೂ ಚರ್ಚಿಸದ ವಿಷಯಗಳನ್ನು ನಾನು ಅವರೊಂದಿಗೆ ಚರ್ಚಿಸುತ್ತೇನೆ. ಅದು ಅವರ ಜೊತೆಗಿನ ಸಂಬಂಧ'' ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದಾಗ ತಾವು ಅನುಭವಿಸಿದ ಕಿರಿಕಿರಿಯನ್ನು ಸಹ ಇದೇ ವೇಳೆ ಬಹಿರಂಗಪಡಿಸಿದ್ದಾರೆ.
''ಅಂತಾರಾಷ್ಟ್ರೀಯ ಕ್ರಿಕೆಟ್ನ ಆರಂಭಿಕ ದಿನಗಳಲ್ಲಿ ಜನರು ತನ್ನನ್ನು ಮಹೇಂದ್ರ ಸಿಂಗ್ ಧೋನಿ ಜತೆಗೆ ಹೋಲಿಕೆ ಮಾಡುತ್ತಿದ್ದರಿಂದ ನಾನು ಬಹಳಷ್ಟು ಕಿರಿಕಿರಿ ಅನುಭವಿಸುತ್ತಿದ್ದೆ. ಧೋನಿ ಅವರೊಂದಿಗಿನ ನಿರಂತರ ಹೋಲಿಕೆಗಳು ಮಾನಸಿಕವಾಗಿ ಕುಸಿತಕ್ಕೆ ತಳ್ಳಿದ್ದವು. ಈ ಬಗ್ಗೆ ನಾನು ಸಾಕಷ್ಟು ನೊಂದಿದ್ದೇನೆ. ನಾನು ಆಗಷ್ಟೇ ತಂಡಕ್ಕೆ ಸೇರಿಕೊಂಡಿದ್ದೆ. ಆದರೆ, ಅಷ್ಟರಲ್ಲೇ ಜನರು ಬದಲಿ ಆಟಗಾರನ್ನು ಕಾಣುತ್ತಿದ್ದರು. ಯುವಕರಲ್ಲಿ ಜನರು ಏಕೆ ಇಂತಹ ಪ್ರಶ್ನೆಗಳನ್ನು ಎತ್ತುತ್ತೀದಿರಿ? ಏಕೆ ಹೋಲಿಕೆ ಮಾಡುತ್ತೀದ್ದೀರಿ? ಎಂಬ ಕೀಳು ಭಾವನೆ ಇತ್ತು. ಆದರೆ, ಯಾವುದೇ ರೀತಿಯ ಹೋಲಿಕೆ ಇರಬಾರದು. ಕಾರಣ ಕೆಲವರು ಐದು ಪಂದ್ಯಗಳನ್ನು ಆಡಿದ್ದಾರೆ ಮತ್ತು ಮತ್ತೊಬ್ಬರು 500 ಪಂದ್ಯಗಳನ್ನು ಆಡಿದ್ದಾರೆ.
ಕ್ರಿಕೆಟ್ ಒಂದು ಸುದೀರ್ಘ ಪ್ರಯಾಣ ಇದ್ದಂತೆ. ಆಟಗಾರ ಆದವನು ಹಲವು ಏರಿಳಿತಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಒಬ್ಬರನ್ನು ಇನ್ನೊಬ್ಬರಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಂದು ಧೋನಿ ಜತೆಗೆ ಹೋಲಿಕೆ ಮಾಡುತ್ತಿರುವುದನ್ನು ಕಂಡು ಒಬ್ಬನೇ ಅಳುತ್ತಿದ್ದೆ. 20-21 ವರ್ಷ ವಯಸ್ಸಿನವನಾದ ನಾನು ಒತ್ತಡದಲ್ಲಿ, ಉಸಿರಾಡಲು ಸಹ ಸಾಧ್ಯವಾಗುತ್ತಿರಲಿಲ್ಲ. ಏನು ಮಾಡಬೇಕು ಎಂಬುವುದೇ ನನಗೆ ತಿಳಿದಿರಲಿಲ್ಲ. ಮೊಹಾಲಿಯಲ್ಲಿ ನಾನು ಸ್ಟಂಪಿಂಗ್ ತಪ್ಪಿಸಿದಾಗಿ ಪ್ರೇಕ್ಷಕರು 'ಧೋನಿ-ಧೋನಿ' ಎಂದು ಜಪಿಸಲು ಪ್ರಾರಂಭಿಸಿದರು. ಇದು ನನಗೆ ಬಹಳಷ್ಟು ಕಿರಿಕಿರಿ ತರಿಸಿತು'' ಎಂದು ಪಂತ್ ಕೆಲವು ಘಟನೆಗಳನ್ನು ಮೆಲುಕು ಹಾಕಿದ್ದಾರೆ.
''ಯುವರಾಜ್ ಸಿಂಗ್ ಮತ್ತು ಧೋನಿಯಂತಹ ಹಿರಿಯ ಆಟಗಾರರ ಬೆಂಬಲವನ್ನು ಸ್ಮರಿಸಿದ ಪಂತ್, ''ಆರಂಭದಲ್ಲಿ, ಆಗ ಬಹಳಷ್ಟು ಹಿರಿಯ ಆಟಗಾರರಿದ್ದರು. ನಾನು ತುಂಬಾ ಚಿಕ್ಕವನು. ಯುವರಾಜ್ ಸಿಂಗ್, ಎಂಎಸ್ ಧೋನಿ ಸೇರಿದಂತೆ ಹಲವು ಹಿರಿಯ ಆಟಗಾರರು ತಂಡದಲ್ಲಿದ್ದರು. ಅವರೊಂದಿಗೆ ಹೊಂದಿಕೊಳ್ಳಲು ಸ್ವಲ್ಪ ಕಾಲ ಹಿಡಿಯಿತು. ಕ್ರಮೇಣ ಅವರೆಲ್ಲ ಆತ್ಮೀಯರಾದರು. ಆದರೆ, ಧೋನಿಯೊಂದಿಗಿನ ನನ್ನ ಸಂಬಂಧವನ್ನು ವಿವರಿಸಲು ನನಗೆ ಕಷ್ಟ'' ಎಂದು ಅವರು ಹೇಳಿಕೊಂಡಿದ್ದಾರೆ. ಇದೇ ವೇಳೆ 13 ತಿಂಗಳ ಹಿಂದೆ ನಡೆದ ಅಪಘಾತ ಮತ್ತು ತಾವು ಬದುಕುಳಿದ ಬಂದ ಪ್ರಸಂಗವನ್ನು ಸಹ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: 'ನನ್ನನ್ನು ಅದೇನೋ ರಕ್ಷಿಸಿತು': ಮೃತ್ಯುವಿಗೆ ಹತ್ತಿರವಾದ ಕ್ಷಣದ ಬಗ್ಗೆ ರಿಷಭ್ ಪಂತ್ ಮನದಾಳ