ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ಮತ್ತು ವಿಕೆಟ್‌ಕೀಪರ್ ರಿಷಭ್ ಪಂತ್ ಅವರು ಕಾರು ಅಪಘಾತಕ್ಕೊಳಗಾಗಿ ವರ್ಷ ಕಳೆದಿದೆ. ಡಿಸೆಂಬರ್ 2022ರಿಂದ ಈವರೆಗೆ ಎಲ್ಲಿಯೂ ಅಪಘಾತದ ಬಗ್ಗೆ ಮಾತನಾಡದ ಪಂತ್ ಇದೀಗ ಮೌನ ಮುರಿದಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ ವಾಹಿನಿ ಪ್ರಸ್ತುತಪಡಿಸುತ್ತಿರುವ 'ಬಿಲೀವ್' ಎಂಬ ಸೀರಿಸ್ನಲ್ಲಿ ಅಪಘಾತದ ನೋವಿನ ಕ್ಷಣಗಳನ್ನು ನೆನೆದು ಪಂತ್ ಭಾವುಕರಾದರು.
ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಮಾತನಾಡಿರುವ ಪಂತ್, "ಅಪಘಾತ ಸಂಭವಿಸಿದಾಗ ಈ ಜಗತ್ತಿನಲ್ಲಿ ನನ್ನ ಸಮಯ ಮುಗಿಯಿತು ಎಂದು ಭಾವಿಸಿದೆ. ನನಗೆ ಗಾಯಗಳ ಬಗ್ಗೆ ಅರಿವಿತ್ತು. ಅಪಘಾತದ ನಂತರ ನಾನು ಜೀವಂತವಾಗಿರುವುದು ಮತ್ತು ಎರಡನೇ ಜೀವನ ಸಿಕ್ಕಿದ್ದು ನನ್ನ ಅದೃಷ್ಟ. ಎಲ್ಲರಿಗೂ ಎರಡನೇ ಜೀವನ ಸಿಗಲಾರದು. ನನ್ನನ್ನು ಅದೇನೋ ರಕ್ಷಿಸಿತು" ಎಂದರು.
"ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ನಾನು ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ವೈದ್ಯರನ್ನು ಕೇಳಿದ್ದೆ. ಅವರು 16ರಿಂದ 18 ತಿಂಗಳು ಬೇಕಾಗಬಹುದು ಎಂದು ಹೇಳಿದ್ದರು. ಈ ಚೇತರಿಕೆಯ ಸಮಯವನ್ನು ಕಡಿತಗೊಳಿಸಲು ಕಷ್ಟಪಟ್ಟು ಅಭ್ಯಾಸ ಮಾಡಬೇಕೆಂದು ನಿರ್ಧಾರ ಮಾಡಿದೆ" ಎಂದು ಹೇಳಿದರು.
ಭೀಕರ ಅಪಘಾತ: 2022ರ ಡಿಸೆಂಬರ್ 31ರ ರಾತ್ರಿ ತನ್ನ ತಾಯಿಗೆ ಹೊಸ ವರ್ಷದ ಸರ್ಪ್ರೈಸ್ ನೀಡಲು ರಿಷಬ್ ಪಂತ್ ದೆಹಲಿಯಿಂದ ತಮ್ಮ ನಿವಾಸವಿರುವ ಉತ್ತರಾಖಂಡದ ರೂರ್ಕಿಗೆ ತೆರಳುತ್ತಿದ್ದರು. ಏಕಾಂಗಿಯಾಗಿ ಕಾರು ಚಲಾಯಿಸಿಕೊಂಡು ಬೆಳಗಿನ ಜಾವದ ವೇಳೆ ಸಂಚರಿಸುತ್ತಿದ್ದಾಗ 5.20ರ ಸುಮಾರಿಗೆ ಡಿವೈಡರ್ಗೆ ಗುದ್ದಿ ಭೀಕರ ಅಪಘಾತ ಸಂಭವಿಸಿತ್ತು. ಕಾರು ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿತ್ತು. ಗಾಜು ಒಡೆದು ಹೊರಬಿದ್ದ ಪಂತ್ ಜೀವ ಉಳಿಸಿಕೊಂಡಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ಪಂತ್ ಅತ್ಯಂತ ನಿತ್ರಾಣ ಸ್ಥಿತಿಯಲ್ಲಿದ್ದರು. ಅದೇ ಮಾರ್ಗವಾಗಿ ಹೋಗುತ್ತಿದ್ದ ಬಸ್ ಚಾಲಕ ಮತ್ತು ನಿರ್ವಾಹಕ, ಅಪಘಾತವನ್ನು ಗಮನಿಸಿ ತಕ್ಷಣ ನೆರವಿಗೆ ಧಾವಿಸಿದ್ದರು. ಆಂಬ್ಯುಲೆನ್ಸ್ಗೆ ಕರೆ ಮಾಡಿ ಪಂತ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಡೆಹ್ರಾಡೂನ್ನ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಇದಾದ ನಂತರ ಪಂತ್ ಕ್ರಿಕೆಟ್‌ನಿಂದ ದೂರ ಉಳಿದುಬಿಟ್ಟರು. ಪ್ರಮುಖ ಟೂರ್ನಿಗಳಲ್ಲಿ ಟೀಮ್ ಇಂಡಿಯಾ ಸೋತಾಗಲಂತೂ ಅಭಿಮಾನಿಗಳು "ಪಂತ್ ಇರಬೇಕಿತ್ತು" ಎಂದು ನೆನೆದಿರುವ ಉದಾಹರಣೆಗಳು ಸಾಕಷ್ಟಿವೆ. ಇದೀಗ ತಂಡಕ್ಕೆ ಮರಳುವುದನ್ನು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಪಂತ್ ಕೂಡ ಮೈದಾನದಲ್ಲಿ ತನ್ನ ಹಳೆ ಆಟವನ್ನು ಪ್ರದರ್ಶಿಸಲು ನೆಟ್ನಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ.
ಮೂಲಗಳ ಪ್ರಕಾರ, ಮಾರ್ಚ್ 22ರಿಂದ ಮೇ 26ರವರೆಗೆ ನಡೆಯಲಿರುವ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (ಐಪಿಎಲ್) ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಪಂತ್ ಮರಳಲಿದ್ದಾರೆ ಎನ್ನಲಾಗಿದೆ. ಆದರೆ ಸಂಪೂರ್ಣವಾಗಿ ಫಿಟ್ ಆಗಿರುವ ಬಗ್ಗೆ ಅವರು ಇನ್ನೂ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ಗೆ ಜಡೇಜಾ, ಕೆ ಎಲ್ ರಾಹುಲ್ ಔಟ್: ಸರ್ಫರಾಜ್ ಖಾನ್ ಸೇರಿ ಮೂವರಿಗೆ ಸ್ಥಾನ