Rishabh Pant IPL Auction: ಮುಂದಿನ ವರ್ಷ ನಡೆಯಲಿರುವ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಕ್ಕೂ ಮೊದಲೇ ಭಾರೀ ಕುತೂಹಲ ಕೆರಳಿಸಿದೆ. ಕಾರಣ ಕೆಲ ಸ್ಟಾರ್ ಆಟಗಾರರು ಈ ಬಾರಿ ತಮ್ಮ ಹಾಲಿ ತಂಡಗಳನ್ನು ತೊರೆದು ಹೊಸ ತಂಡಕ್ಕೆ ಸೇರಲಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ರಿಷಭ್ ಪಂತ್ ಹೆಸರು ಭಾರೀ ಟ್ರೆಂಡಿಂಗ್ನಲ್ಲಿದೆ.
ಕಿವೀಸ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅದ್ಬುತ ಪ್ರದರ್ಶನ ತೋರುತ್ತಿರುವ ಪಂತ್ ಈ ಬಾರಿ ಐಪಿಎಲ್ ಮೆಗಾ ಹರಾಜಿಗೆ ಎಂಟ್ರಿ ಕೊಡಲಿದ್ದಾರೆ ಎಂದು ವರದಿಗಳಾಗಿವೆ. ಅಲ್ಲದೇ ಅವರಿಗೆ ಈಗಾಗಲೇ ಕೆಲ ಫ್ರಾಂಚೈಸಿಗಳು ತಮ್ಮ ತಂಡಕ್ಕೆ ಸೇರುವಂತೆ ಆಫರ್ ಕೂಡ ನೀಡಿವೆ ಎಂದು ಸುದ್ದಿ ಹರಿದಾಡಲಾರಂಭಿಸಿದೆ.
ಮತ್ತೊಂದೆಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೂಡ ಈ ಬಾರಿ ಸಾಕಷ್ಟು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಈ ಹಿನ್ನೆಲೆ ತಂಡಕ್ಕೆ ಹೊಸ ನಿರ್ದೇಶಕ ಹಾಗೂ ಮುಖ್ಯ ಕೋಚ್ ಅನ್ನು ನೇಮಕ ಮಾಡಿಕೊಂಡಿದೆ. ಇದರ ಜೊತೆ ನಾಯಕತ್ವ ಬದಲಾವಣೆಗೂ ಚಿಂತನೆ ನಡೆಸಿದ್ದು ರಿಷಬ್ ಪಂತ್ ಅವರನ್ನು ನಾಯಕತ್ವದ ಕೆಳಗಿಳಿಸಿ ಮತ್ತು ಹೊಸ ನಾಯಕನನ್ನು ನೇಮಿಸಲು ಫ್ರಾಂಚೈಸಿ ಯೋಜಿಸುತ್ತಿದೆ ಎಂದು ವರದಿಗಳಾಗಿವೆ. ಈ ಹಿನ್ನೆಲೆ ಪಂತ್ ತಂಡ ತೊರೆಯಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಮೊಟ್ಟ ಮೊದಲ IPL ವಿಕೆಟ್ ಪಡೆದ ಬೌಲರ್ ಯಾರು?: ಆರ್‌ಸಿಬಿ ಹೆಸರಲ್ಲಿದೆ ಈ ದಾಖಲೆ
ಆರ್‌ಸಿಬಿ ಕಣ್ಣು: ಏತನ್ಮಧ್ಯೆ ಪಂತ್ ಮೇಲೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಕಣ್ಣಿಟ್ಟಿದೆ. ಹರಾಜಿನಲ್ಲಿ ಬಂದರೆ ಹೇಗಾದರೂ ಮಾಡಿ ತಮ್ಮ ತಂಡಕ್ಕೆ ಸೇರಿಸಿಕೊಳ್ಳಬೇಕೆಂದು ಆರ್‌ಸಿಬಿ ನಿರ್ಧರಿಸಿದೆ ಎಂದು ವರದಿಯಾಗಿದೆ. ಆದರೆ ಈ ಮೂರು ಕಾರಣಗಳಿಗಾಗಿ ಆರ್‌ಸಿಬಿ ಪಂತ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಬಯಸಿದೆ ಎಂದು ವರದಿಯಾಗಿದೆ. ಆ ಮೂರು ಕಾರಣಗಳು ಯಾವುವು ಗೊತ್ತಾ?
ನಾಯಕತ್ವ: ಪಂತ್ ಅವರನ್ನು ತಂಡಕ್ಕೆ ತೆಗೆದುಕೊಳ್ಳಲು ಪ್ರಮುಖ ಕಾರಣ ನಾಯಕತ್ವ. ಐಪಿಎಲ್‌ನಲ್ಲಿ ತಂಡವನ್ನು ಮುನ್ನಡೆಸಿದ ಅನುಭವ ಪಂತ್‌ಗೆ ಇದೆ. ಅವರು ಹಲವು ಋತುಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದರು. ಒತ್ತಡದಲ್ಲಿಯೂ ತಂಡವನ್ನು ಸಮರ್ಥವಾಗಿ ನಡೆಸಬಲ್ಲರು.
ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್: ಆರ್‌ಸಿಬಿಗೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ಸ್‌ಮನ್‌ಗಳ ಕೊರತೆ ವರ್ಷಗಳಿಂದ ಕಾಡುತ್ತಿದೆ. ಆಸೀಸ್ ಬ್ಯಾಟರ್ ಗ್ಲೆನ್ ಮ್ಯಾಕ್ಸ್ ವೆಲ್ ಮತ್ತು ಕ್ಯಾಮರೂನ್ ಗ್ರೀನ್ ಖರೀದಿಸಿದರೂ ತಂಡಕ್ಕೆ ದೊಡ್ಡ ಫಲಿತಾಂಶ ಕಂಡು ಬಂದಿಲ್ಲ. ಆದರೆ ಪಂತ್ ಮಧ್ಯಮ ಕ್ರಮಾಂಕದಲ್ಲಿ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಬಲ್ಲರು. ಅವರು ಹಲವಾರು ವರ್ಷಗಳಿಂದ ಐಪಿಎಲ್‌ನಲ್ಲಿ ನಾಲ್ಕು ಮತ್ತು ಐದು ಸ್ಥಾನಗಳಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ಕೂಡ ಕಾರಣವಾಗಿದೆ.
ವಿಕೆಟ್ ಕೀಪಿಂಗ್: ದಿನೇಶ್ ಕಾರ್ತಿಕ್ ನಿವೃತ್ತಿಯ ನಂತರ ಆರ್‌ಸಿಬಿಯಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಸ್ಥಾನ ಖಾಲಿಯಾಗಿದೆ. ಇದರೊಂದಿಗೆ ಆ ಸ್ಥಾನವನ್ನು ತುಂಬುವ ಸಾಮರ್ಥ್ಯ ಪಂತ್‌ಗೆ ಇದೆ ಎಂದು ಆರ್‌ಸಿಬಿ ಆಶಿಸಿದೆ. ಹಾಗಾಗಿ ಇವರನ್ನು ತಂಡಕ್ಕೆ ಸೇರಿಸಿಕೊಂಡರೆ ಮೂರು ರೀತಿಯಲ್ಲಿ ತಂಡ ಬಲಗೊಳಿಸಬಹುದು ಎಂದು ಆರ್‌ಸಿಬಿ ಆಸಕ್ತಿ ತೋರಿದೆ.
ಇದನ್ನೂ ಓದಿ: w,w,w,w,w,w,w ; ವಾರೆವ್ಹಾ! 7 ವಿಕೆಟ್ ಪಡೆದ ವಾಷಿಂಗ್ಟನ್ ಸುಂದರ್: 259ಕ್ಕೆ ಕಿವೀಸ್ ಆಲೌಟ್!!