ಬೆಂಗಳೂರು : ಆರ್‌ಸಿಬಿಯ ಹೆಸರಿನಲ್ಲಿದ್ದ ಬ್ಯಾಂಗಲೂರ್ ಅನ್ನು ಫ್ರಾಂಚೈಸಿ ಬದಲಾಯಿಸಿದ್ದು, ಇನ್ನು ಮುಂದೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಕರೆಯಲ್ಪಡಲಿದೆ. ಈ ಮೂಲಕ ಕೋಟ್ಯಂತರ ಆರ್‌ಸಿಬಿ ಅಭಿಮಾನಿಗಳ ಬಹುದಿನಗಳ ಕನಸು ಈಡೇರಿದಂತಾಗಿದೆ. ಮತ್ತೊಂದೆಡೆ ಆರ್‌ಸಿಬಿಯ ಲಕ್ ಈಗದ್ರೂ ಚೇಂಜ್ ಆಗುತ್ತಾ ಎಂದು ಈ ಬಾರಿಯ ಐಪಿಎಲ್ಯಲ್ಲಿ ತಿಳಿಯಲಿದೆ.
ಆರ್‌ಸಿಬಿ ತಂಡದ ತವರು ಮೈದಾನವಾದ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ 2024 ರ ಕಾರ್ಯಕ್ರಮದಲ್ಲಿ 2008 ರಿಂದಲೂ ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್ ಎಂದೇ ಕರೆಸಿಕೊಳ್ಳುತ್ತಿದ್ದ ಆರ್‌ಸಿಬಿ ಫ್ರಾಂಚೈಸಿ ತನ್ನ ಹೆಸರಿನ ಕೊನೆಯಲ್ಲಿದ್ದ ಬ್ಯಾಂಗಲೂರ್ ಅನ್ನು ಬೆಂಗಳೂರು ಆಗಿ ಅಧಿಕೃತವಾಗಿ ಬದಲಾಯಿಸಿದೆ.
ಆರ್‌ಸಿಬಿ ಪುರುಷರ ತಂಡದ ನಾಯಕ ಫಾಫ್ ಡು ಪ್ಲೆಸಿಸ್, ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಮತ್ತು ಬ್ಯಾಟಿಂಗ್ ಐಕಾನ್ ವಿರಾಟ್ ಕೊಹ್ಲಿ ಆರ್‌ಸಿಬಿಯ ಹೊಸ ಜೆರ್ಸಿ ಮತ್ತು ಲೋಗೋವನ್ನು ಅನಾವರಣಗೊಳಿಸಿದರು. ನೂತನ ಜರ್ಸಿಯು ಅಭಿಮಾನಿಗಳೊಂದಿಗೆ ತಂಡದ ಸಂಪರ್ಕ ಬಲಪಡಿಸುತ್ತದೆ ಮತ್ತು ಲೋಗೋದ ನಿಖರವಾದ ಮತ್ತು ಚಿಂತನಶೀಲ ವಿನ್ಯಾಸವು ಫ್ರಾಂಚೈಸ್‌ನ ದೃಷ್ಟಿ, ಮೌಲ್ಯಗಳು ಮತ್ತು ಆಟದ ದಿಟ್ಟ ತತ್ತ್ವಶಾಸ್ತ್ರವನ್ನು ಪ್ರತಿ ಬಿಂಬಿಸುತ್ತದೆ ಎಂದು ವಿವರಿಸಲಾಯಿತು.
ನಗರದ ಶ್ರೀಮಂತ ಇತಿಹಾಸ ಮತ್ತು ಸಂಪ್ರದಾಯಕ್ಕೆ ಗೌರವ ಸಲ್ಲಿಸುವ ಮೂಲಕ ತಂಡಕ್ಕೆ ರಾಯಲ್ ಚಾಲೆಂಜರ್ಸ್ 'ಬೆಂಗಳೂರು' ಎಂಬ ಪರಿಷ್ಕೃತ ಹೆಸರು ಮತ್ತು ನೂತನ ಲೋಗೋ ಅನಾವರಣಗೊಳಿಸಲಾಯಿತು. ಮಹಿಳಾ ಪ್ರೀಮಿಯರ್ ಲೀಗ್ 2024ರಲ್ಲಿ ಚಾಂಪಿಯನ್ ಆದ ಆರ್‌ಸಿಬಿ ಇಂದು ಮೊದಲ ಬಾರಿಗೆ ವಿಶ್ವದಲ್ಲೇ ಅತ್ಯಂತ ಕ್ರೇಜಿ ಫ್ಯಾನ್ಸ್ ಬಳಗಗಳಲ್ಲಿ ಒಂದು ಎನಿಸಿರುವ ತನ್ನ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು.
ಈ ಸಂಧರ್ಭದಲ್ಲಿ ಕಿಂಗ್ ಕೊಹ್ಲಿ, ಡು ಪ್ಲೆಸಿಸ್, ಮೊಹಮ್ಮದ್ ಸಿರಾಜ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಮೈದಾನ ಪ್ರವೇಶಿಸಿದಾಗ, ಕಿಕ್ಕಿರಿದ ಅಭಿಮಾನಗಳ ಕರತಾಡನ ಮುಗಿಲು ಮುಟ್ಟಿತ್ತು. ಅಲ್ಲದೇ ಈ ವಾರದ ಆರಂಭದಲ್ಲಿ ಮಹಿಳಾ ಪ್ರಿಮಿಯರ್ ಲೀಗ್ 2024ರ ಕಿರೀಟವನ್ನು ಮುಡಿಗೇರಿಸಿಕೊಂಡ ಮಂಧಾನ ನೇತೃತ್ವದ ವಿಜಯಶಾಲಿ ಮಹಿಳಾ ತಂಡವು ಅಭಿಮಾನಿಗಳ ಭಾರೀ ಚಪ್ಪಾಳೆಗಳ ನಡುವೆ ಪುರುಷರ ತಂಡದಿಂದ ವಿಶೇಷ ಗೌರವಾನ್ವಿತ ಗೌರವ ಸ್ವೀಕರಿಸಿತು.
ಭಾರತದ ಮಾಜಿ ವೇಗಿ ಮತ್ತು ಆರ್‌ಸಿಬಿ ಸ್ಟಾರ್ ಆರ್ ವಿನಯ್ ಕುಮಾರ್ ಅವರು ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಬಳಿಕ ಆರ್‌ಸಿಬಿಯ ಹಾಲ್ ಆಫ್ ಫೇಮ್ ಗೌರವಕ್ಕೆ ಸೇರ್ಪಡೆಗೊಂಡರು. ವಿನಯ್ ಕುಮಾರ್ ಆರ್‌ಸಿಬಿ ಪರ ಅತಿ ಹೆಚ್ಚು ವಿಕೆಟ್ ಪಡೆದ ಮೂರನೇ ಬೌಲರ್ ಆಗಿದ್ದಾರೆ. ಅದ್ಧೂರಿ ಕಾರ್ಯಕ್ರಮದಲ್ಲಿ ವಿಶ್ವದ ಖ್ಯಾತ ಡಿಜೆ ಅಲನ್ ವಾಕರ್ ಸೇರಿದಂತೆ ರಘು ದೀಕ್ಷಿತ್, ನೀತಿ ಮೋಹನ್, ಬ್ರೋದಾ ವಿ, ಜೋರ್ಡಿಂಡಿಯನ್ ಅವರ ಮನರಂಜನಾ ಸಂಗೀತ ಸಂಜೆಗೆ ಮೆರುಗು ನೀಡಿದರು.
ಇದನ್ನೂ ಓದಿ : ಟ್ರೋಫಿ ಜೊತೆಗೆ ಆರೆಂಜ್, ಪರ್ಪಲ್ ಕ್ಯಾಪ್ ಸೇರಿ ಹಲವು ಪ್ರಶಸ್ತಿ ಗೆದ್ದ ಆರ್‌ಸಿಬಿ!