ನವದೆಹಲಿ: ನಿನ್ನೆ (ಜೂ.29) ಟಿ20 ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾವನ್ನು 7 ರನ್‌ಗಳಿಂದ ಸೋಲಿಸುವ ಮೂಲಕ ಐತಿಹಾಸಿಕ ಗೆಲುವು ದಾಖಲಿಸಿದೆ. ವಿಶ್ವಕಪ್ ಗೆದ್ದ ಸಂಭ್ರಮದಲ್ಲಿದ್ದ ಭಾರತೀಯರಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ ನಿವೃತ್ತಿ ಘೋಷಿಸಿ ಶಾಕ್ ನೀಡಿದ್ದರು. ಇದೀಗ ಇವರ ಬೆನ್ನೆಲ್ಲೇ ಭಾರತದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ ಕೂಡ ಅಂತಾರಾಷ್ಟ್ರೀಯ ಟಿ20 ಮಾದರಿಗೆ ನಿವೃತ್ತಿ ಘೋಷಿಸಿದ್ದಾರೆ.
ಜಡೇಜಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟಿ20 ವಿಶ್ವಕಪ್ನೊಂದಿಗಿನ ಫೋಟೋವನ್ನು ಹಂಚಿಕೊಳ್ಳುವ ಮೂಲಕ ನಿವೃತ್ತಿ ಬಗ್ಗೆ ಬರೆದುಕೊಂಡಿದ್ದಾರೆ. ಈ ಬಗ್ಗೆ ಇನ್ಸ್ಟಾ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿರುವ ಜಡೇಜಾ, ಕೃತಜ್ಞತೆಯೊಂದಿಗೆ ತುಂಬಿದ ಹೃದಯದಿಂದ ನಾನು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿದ್ದೇನೆ. ನಾನು ನನ್ನ ದೇಶಕ್ಕಾಗಿ ಅತ್ಯುತ್ತಮವಾದದನ್ನು ನೀಡಲು ಪ್ರಯತ್ನಿಸಿದ್ದೇನೆ. ಈಗ ನನ್ನ ಈ ಪ್ರದರ್ಶನ ಇತರ ಸ್ವರೂಪಗಳಲ್ಲಿ ಮುಂದುವರಿಯಲಿದೆ.
ಅಂತು ಟಿ20 ವಿಶ್ವಕಪ್ ಗೆಲ್ಲುವ ಕನಸು ಸಾಕಾರಗೊಂಡಿದೆ ಮತ್ತು ಇದು ನನ್ನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಅತಿ ದೊಡ್ಡ ವಿಜಯದ ಶಿಖರವಾಗಿದೆ. ಈ ಅದ್ಭುತ ನೆನಪುಗಳು, ಪ್ರಶಂಸೆಗಳು ಮತ್ತು ನಿರಂತರ ನಿಮ್ಮ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳು.. ಜೈ ಹಿಂದ್ ಎಂದು ಜಡೇಜಾ ಬರೆದುಕೊಂಡಿದ್ದಾರೆ.
2009ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ಮೂಲಕ ಜಡೇಜಾ ಅಂತಾರಾಷ್ಟ್ರೀಯ ಟಿ20ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೂ 74 ಟಿ20 ಪಂದ್ಯಗಳನ್ನು ಆಡಿರುವ 35 ವರ್ಷದ ಜಡೇಜಾ 515 ರನ್ ಗಳಿಸಿದ್ದಾರೆ. ಜತೆಗೆ 54 ವಿಕೆಟ್ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ: ಟಿ20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ನಿವೃತ್ತಿ ಘೋಷಿಸಿದ ರೋಹಿತ್ - ಕೊಹ್ಲಿ! - Kohli Rohit retire from T20I