ಗುವಾಹಟಿ (ಅಸ್ಸೋಂ): ಆರಂಭಿಕ 9 ಪಂದ್ಯಗಳಲ್ಲಿ 1 ರಲ್ಲಿ ಮಾತ್ರ ಸೋತು 17ನೇ ಆವೃತ್ತಿಯ ಐಪಿಎಲ್ ಟ್ರೋಫಿ ಗೆಲ್ಲುವ ಹಾಟ್ ಫೇವರೇಟ್ ತಂಡವಾಗಿದ್ದ ರಾಜಸ್ಥಾನ ರಾಯಲ್ಸ್ ಅದ್ಯಾಕೋ ಕಳೆದ 4 ಪಂದ್ಯಗಳಲ್ಲಿ ಹಳಿ ತಪ್ಪಿದೆ. ಸತತ ಮೂರು ಪಂದ್ಯಗಳನ್ನು ಸೋತಿದ್ದು, ಪಂಜಾಬ್ ವಿರುದ್ಧ ಬುಧವಾರ ನಡೆಯುತ್ತಿರುವ ಪಂದ್ಯದಲ್ಲಿ 9 ವಿಕೆಟ್ಗೆ 144 ರನ್ಗಳ ಅಲ್ಪಮೊತ್ತ ಗಳಿಸಿದೆ.
ಪ್ಲೇಆಫ್ ಅರ್ಹತೆ ಪಡೆದಿದ್ದರೂ, ಮುಂದಿನ ಪಂದ್ಯಗಳಿಗೆ ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವ ಮತ್ತು ಬ್ಯಾಟಿಂಗ್, ಬೌಲಿಂಗ್ ಪಡೆಯನ್ನು ಚುರುಕುಗೊಳಿಸಲು ಬಳಸಿಕೊಳ್ಳಬೇಕಿದ್ದ ಪಂದ್ಯದಲ್ಲಿ ರಾಯಲ್ಸ್ ನೀರಸ ಆಟವಾಡಿತು.
ಜಾಸ್ ಬಟ್ಲರ್ ಅನುಪಸ್ಥಿತಿಯಲ್ಲಿ ಅವಕಾಶ ಪಡೆದ ಟಾಮ್ ಕೊಹ್ಲರ್ ಕಾಡ್ಮೋರ್ 18, ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾದ ಆರಂಭಿಕ ಸ್ಥಾನ ತುಂಬಬೇಕಿರುವ ಯಶಸ್ವಿ ಜೈಸ್ವಾಲ್ 4 ರನ್ಗೆ ವಿಕೆಟ್ ನೀಡಿದರು. ನಾಯಕ ಸಂಜು ಸ್ಯಾಮ್ಸನ್ 18 ರನ್ಗೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು. ಧ್ರುವ್ ಜುರೆಲ್ 0, ರೋವ್ಮನ್ ಪೊವೆಲ್ 4, ದೊನಾವನ್ ಫೆರಾರ್ರಿಯಾ 7 ಒಂದಂಕಿಗೆ ಸುಸ್ತಾದರು.
ರಿಯಾನ್ ಪರಾಗ್- ಅಶ್ವಿನ್ ಹೋರಾಟ; ವಿಕೆಟ್ ಹಿಂದೆ ವಿಕೆಟ್ ಬೀಳುತ್ತಿದ್ದ ಸಮಯದಲ್ಲಿ ಒಂದಾದ ರಿಯಾನ್ ಪರಾಗ್ ಮತ್ತು ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ತಂಡವನ್ನು ಆಧರಿಸಿದರು. ಈ ಟೂರ್ನಿಯಲ್ಲಿ ಉತ್ತಮ ಲಯದಲ್ಲಿರುವ ಪರಾಗ್ ಅರ್ಧಶತಕ ಹೊಸ್ತಿಲಲ್ಲಿ ಮತ್ತೆ ಎಡವಿ 48 ರನ್ಗೆ ವಿಕೆಟ್ ನೀಡಿದರು. ಅಶ್ವಿನ್ 28 ರನ್ ಗಳಿಸಿದರು. ಬೌಲರ್ ಟ್ರೆಂಟ್ ಬೌಲ್ಟ್ 12 ರನ್ ಮಾಡಿದರು.
ಶಿಸ್ತಿನ ಬೌಲಿಂಗ್ ದಾಳಿ: ಟೂರ್ನಿಯಿಂದ ಎಲಿಮಿನೇಟ್ ಆಗಿರುವ ಪಂಜಾಬ್ ಕಿಂಗ್ಸ್ನ ಬೌಲಿಂಗ್ ಪಡೆ ಸಂಘಟಿತ ದಾಳಿ ನಡೆಸಿತು. ನಾಯಕ ಸ್ಯಾಮ್ ಕರ್ರನ್, ರಾಹುಲ್ ಚಹರ್, ಹರ್ಷಲ್ ಪಟೇಲ್ ತಲಾ 2 ವಿಕೆಟ್ ಕಿತ್ತರೆ, ಅರ್ಷದೀಪ್ ಸಿಂಗ್, ನಾಥನ್ ಎಲ್ಲಿಸ್ ತಲಾ 1 ವಿಕೆಟ್ ಪಡೆದರು. ರಾಜಸ್ಥಾನ ಆಟಗಾರರು ದೊಡ್ಡ ಮೊತ್ತ ಗಳಿಸಲು ಯಾವುದೇ ಬೌಲರ್ಗಳು ಅವಕಾಶ ನೀಡಲಿಲ್ಲ.
ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರಾನ್ ಸಿಂಗ್, ಜಾನಿ ಬೈರ್‌ಸ್ಟೋವ್, ರಿಲೀ ರೊಸೊವ್, ಶಶಾಂಕ್ ಸಿಂಗ್, ಜಿತೇಶ್ ಶರ್ಮಾ, ಸ್ಯಾಮ್ ಕುರಾನ್(ನಾಯಕ), ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ನಾಥನ್ ಎಲ್ಲಿಸ್, ರಾಹುಲ್ ಚಹರ್, ಅರ್ಷದೀಪ್ ಸಿಂಗ್
ರಾಜಸ್ಥಾನ್ ರಾಯಲ್ಸ್ : ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್ ಕ್ಯಾಡ್ಮೋರ್, ಸಂಜು ಸ್ಯಾಮ್ಸನ್, ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ಯಜುವೇಂದ್ರ ಚಹಲ್.