ಬೆಂಗಳೂರು: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಹಣಾಹಣಿಯ ಆರಂಭದ ದಿನದಾಟಕ್ಕೆ ಮಳೆ ಅಡ್ಡಿಯಾಗಿದೆ. ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿರುವ ಮೊದಲ ಪಂದ್ಯದ ಟಾಸ್ ಪ್ರಕ್ರಿಯೆ ಮಳೆಯ ಕಾರಣದಿಂದ ವಿಳಂಬವಾಗಿದೆ.
ಮತ್ತೊಂದೆಡೆ, ಬೆಂಗಳೂರಿನಲ್ಲಿ ಕಳೆದ 2-3 ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಪಂದ್ಯಕ್ಕೆ ಅವಕಾಶ ನೀಡುವುದೇ ಎಂಬ ಪ್ರಶ್ನೆ ಉದ್ಭವವಾಗಿದೆ. ಎರಡೂವರೆ ವರ್ಷಗಳ ಬಳಿಕ ಟೆಸ್ಟ್ ಪಂದ್ಯಕ್ಕೆ ಬೆಂಗಳೂರು ಆತಿಥ್ಯ ವಹಿಸುತ್ತಿದ್ದು, ಮಳೆಯ ಆತಂಕದ ನಡುವೆಯೂ ಚಿನ್ನಸ್ವಾಮಿ ಕ್ರೀಡಾಂಗಣದ ಮುಂದೆ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಿದ್ದಾರೆ. ಈಗಾಗಲೇ ಪಂದ್ಯದ ಐದೂ ದಿನದ ಟಿಕೆಟ್‌ಗಳು ಭಾಗಶಃ ಬಿಕರಿಯಾಗಿದ್ದವು, ಆದರೆ, ವರುಣನ ಅವಕೃಪೆ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದೆ.
ಇತ್ತೀಚೆಗೆ, ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 2-0 ಸೋಲಿನ ಬಳಿಕ ನ್ಯೂಜಿಲೆಂಡ್ ತಂಡವೀಗ ಭಾರತ ಪ್ರವಾಸ ಕೈಗೊಂಡಿದೆ. ತಂಡದ ನಾಯಕ ಬದಲಾವಣೆಯಾಗಿದ್ದು, ಜವಾಬ್ದಾರಿಯಿಂದ ಟಿಮ್ ಸೌಥಿ ಕೆಳಗಿಳಿದ ಹಿನ್ನೆಲೆಯಲ್ಲಿ ಟಾಮ್ ಲ್ಯಾಥಮ್ ನೂತನ ಮುಂದಾಳುವಾಗಿದ್ದಾರೆ. ಇನ್ನೊಂದೆಡೆ, ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಗಾಯದ ಹಿನ್ನೆಲೆಯಲ್ಲಿ ಮೊದಲ ಟೆಸ್ಟ್ನಿಂದ ದೂರವಿದ್ದಾರೆ. ಇನ್ನೊಂದೆಡೆ, ಭಾರತ ತಂಡ ಬಾಂಗ್ಲಾದೇಶದ ವಿರುದ್ಧ ಭರ್ಜರಿ 2-0 ಸರಣಿ ಗೆಲುವಿನ ವಿಶ್ವಾಸದ ಅಲೆಯಲ್ಲಿದೆ.
Hello from Bengaluru 👋
— BCCI (@BCCI) October 16, 2024
Toss for the 1st #INDvNZ Test has been delayed due to rain.
Stay tuned for further updates.#TeamIndia | @IDFCFIRSTBank
ಇದನ್ನೂ ಓದಿ: ಬ್ಯಾಟರ್ 1000 ರನ್ ಗಳಿಸಿದರೂ ಪಂದ್ಯ ಗೆಲ್ಲುವ ಭರವಸೆ ಇಲ್ಲ, ಆದ್ರೆ ಬೌಲರ್ ಹೆಚ್ಚು ವಿಕೆಟ್ ಪಡೆದರೆ ಜಯ ಖಚಿತ: ಗಂಭೀರ್
ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಬೆಂಗಳೂರಿನಲ್ಲಿದ್ದರೆ, ಎರಡು ಹಾಗೂ ಮೂರನೇ ಟೆಸ್ಟ್ ಪಂದ್ಯಗಳು ಪುಣೆ ಹಾಗೂ ಮುಂಬೈನಲ್ಲಿ ನಿಗದಿಯಾಗಿವೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಿನ್ನೆಲೆಯಲ್ಲಿ ಉಭಯ ತಂಡಗಳಿಗೆ ಈ ಸರಣಿಯು ಮಹತ್ವಪೂರ್ಣವಾಗಿದೆ.
ಇದನ್ನೂ ಓದಿ: ಭಾರತ ನ್ಯೂಜಿಲೆಂಡ್ ಟೆಸ್ಟ್ ಸರಣಿ: ಈ ಮೂರು ದಾಖಲೆ ಬರೆಯಲು ಹಿಟ್ಮ್ಯಾನ್ ಸಜ್ಜು!