ನವದೆಹಲಿ: ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರಿಗೆ ಸೆಪ್ಟೆಂಬರ್ 4 ರಂದು ರೈಲ್ವೆ ಇಲಾಖೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂಬ ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳನ್ನು ಗಮನಿಸಿ, 10 ದಿನಗಳೊಳಗೆ ಉತ್ತರಿಸುವಂತೆ ರೈಲ್ವೆ ಇಲಾಖೆ ತಿಳಿಸಿದೆ.
ಶುಕ್ರವಾರ (ಸೆ. 6) ಫೋಗಟ್ ಮತ್ತು ಪೂನಿಯಾ ಹರಿಯಾಣದಲ್ಲಿ ವಿಧಾನಸಭೆ ಚುನಾವಣೆಗೆ ಮುನ್ನ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಇವರಿಬ್ಬರೂ ರೈಲ್ವೆ ಇಲಾಖೆಯಲ್ಲಿನ ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು.
90 ಸದಸ್ಯ ಬಲದ ಹರಿಯಾಣ ವಿಧಾನಸಭೆಗೆ ಅಕ್ಟೋಬರ್ 5 ರಂದು ಚುನಾವಣೆ ನಡೆಯಲಿದ್ದು, ಅಕ್ಟೋಬರ್ 8 ರಂದು ಜಮ್ಮು ಮತ್ತು ಕಾಶ್ಮೀರದೊಂದಿಗೆ ಮತ ಎಣಿಕೆ ನಡೆಯುವ ನಿರೀಕ್ಷೆಯಿದೆ.
"ಸೆಪ್ಟೆಂಬರ್ 4 ರಂದು, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಇಬ್ಬರೂ ರಾಜಕೀಯ ಪಕ್ಷಕ್ಕೆ ಸೇರುತ್ತಾರೆ ಎಂದು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳನ್ನು ಗಮನಿಸಿದ ನಂತರ ಅವರಿಗೆ ಶೋಕಾಸ್ ನೋಟಿಸ್ ನೀಡಲಾಯಿತು. 10 ದಿನಗಳಲ್ಲಿ ತಮ್ಮ ಪ್ರತಿಕ್ರಿಯೆಯನ್ನು ನೀಡುವಂತೆ ಕೇಳಲಾಯಿತು," ಉತ್ತರ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (CPRO) ಹಿಮಾಂಶು ಶೇಖರ್ ಉಪಾಧ್ಯಾಯ ಈಟಿವಿ ಭಾರತ್‌ಗೆ ತಿಳಿಸಿದರು.
ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ತಮ್ಮ ನಿಲುವನ್ನು ವಿವರಿಸಲು ಇಬ್ಬರಿಗೆ ಶೋಕಾಸ್ ನೋಟಿಸ್ ಮಾತ್ರ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು. ನಾವು ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶೇಖರ್ ತಿಳಿಸಿದರು.
ಹಿಂದಿನ ದಿನದಲ್ಲಿ, ಕಾಂಗ್ರೆಸ್‌ಗೆ ಸೇರುವ ಮೊದಲು, ಫೋಗಟ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ರೈಲ್ವೆ ಇಲಾಖೆಗೆ ತಿಳಿಸಲಾದ ರಾಜೀನಾಮೆಯ ಪ್ರತಿಯನ್ನು ಹಂಚಿಕೊಂಡಿದ್ದರು ಮತ್ತು ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಇಲಾಖೆಗೆ ಕೃತಜ್ಞತೆ ಸಲ್ಲಿಸಿದ್ದರು.
ಫೋಗಟ್ ಮತ್ತು ಪುನಿಯಾ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ, ಕಾಂಗ್ರೆಸ್ ಸಂಘಟನಾ ಪ್ರಧಾನ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಶೋಕಾಸ್ ನೋಟಿಸ್‌ಗಳ ಕುರಿತು ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು.
ವಿನೇಶ್ಗೆ ಟಿಕೆಟ್: ಹರಿಯಾಣ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆಗೊಳಿಸಿದ್ದು, ಸ್ಟಾರ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಜುಲಾನಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ.
ಹರಿಯಾಣದ 31 ಕ್ಷೇತ್ರಗಳಿಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ವಿನೇಶ್ ಫೋಗಟ್ ಮಣೆ ಹಾಕಲಾಗಿದ್ದು, ರಾಜಕೀಯ ಅಖಾಡ ರಂಗೇರಿದೆ.