ಹೈದರಾಬಾದ್: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಅಂತಿಮ ಘಟಕ್ಕೆ ತಲುಪಿದೆ. ಈಗಾಗಲೇ ನಾಲ್ಕು ತಂಡಗಳು (ಕೆಕೆಆರ್, ಎಸ್ಆರ್ಹೆಚ್, ಆರ್ಆರ್, ಆರ್ಸಿಬಿ) ಪ್ಲೇ ಆಫ್ಗೆ ತಲುಪಿ ಮುಂದಿನ ಸುತ್ತಿನಲ್ಲಿ ಪ್ರಶಸ್ತಿಗಾಗಿ ಸೆಣಸಲಿವೆ.
ಇಂದು ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ತಂಡಗಳ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ನೇರವಾಗಿ ಫೈನಲ್ಗೆ ಪ್ರವೇಶಿಸಲಿದ್ದು, ಸೋತ ತಂಡಕ್ಕೆ 2ನೇ ಕ್ವಾಲಿಫೈಯರ್ ಆಡುವ ಅವಕಾಶ ಇರಲಿದೆ. ಹಾಗಾಗಿ ಇಂದಿನ ಪಂದ್ಯ ಗೆದ್ದು ಫೈನಲ್ಗೇರಲು ಎರಡೂ ತಂಡಗಳು ಹವಣಿಸುತ್ತಿವೆ. ಆದರೆ ದೇಶದಲ್ಲಿ ಮುಂಗಾರು ಪೂರ್ವ ಮಳೆ ಚುರುಕುಗೊಂಡಿದ್ದರಿಂದ ಇಂದಿನ ಪಂದ್ಯ ಮಳೆಯಿಂದ ರದ್ದಾದರೆ ಏನಾಗುತ್ತದೆ ಎಂಬ ಭಯ ಅಭಿಮಾನಿಗಳಲ್ಲಿ ಮೂಡಿದೆ.
ಕ್ವಾಲಿಫೈಯರ್ ಪಂದ್ಯ: ಐಪಿಎಲ್‌ನ ನಿಯಮದ ಪ್ರಕಾರ, ಕ್ವಾಲಿಫೈಯರ್-1 ಪಂದ್ಯದ ವೇಳೆ ಮಳೆ ಬಂದರೆ, ಕನಿಷ್ಠ 5 ಓವರ್‌ಗಳ ಪಂದ್ಯವನ್ನಾದರೂ ಆಡಿಸಲು ಪ್ರಯತ್ನಿಸಲಾಗುತ್ತದೆ. ಅದೂ ಸಾಧ್ಯವಾಗದಿದ್ದರೆ ಸೂಪರ್ ಓವರ್ ಮೂಲಕ ಫಲಿತಾಂಶ ಪಡೆಯಲು ಪ್ರಯತ್ನಿಸಲಾಗುವುದು. ಒಂದು ವೇಳೆ ಸೂಪರ್ ಓವರ್ ಕೂಡ ಸಾಧ್ಯವಾಗದಿದ್ದರೆ ಪಂದ್ಯ ರದ್ದಾಗಲಿದೆ.
ಅಂತಹ ಪರಿಸ್ಥಿತಿಯಲ್ಲಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡವನ್ನು ವಿಜೇತ ತಂಡವಾಗಿ ಘೋಷಿಸಲಾಗುತ್ತದೆ. ಸದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಅಗ್ರಸ್ಥಾನದಲ್ಲಿರುವ ಕಾರಣ ವಿಜೇತ ತಂಡವಾಗಿ ಫೈನಲ್ ಪ್ರವೇಶಿಸಲಿದೆ. ಹೈದರಾಬಾದ್ಗೆ ಮತ್ತೊಂದು ಅವಕಾಶ ಇರಲಿದ್ದು 2ನೇ ಕ್ವಾಲಿಫೈರ್ ಪಂದ್ಯ ಆಡಲಿದೆ. ಒಂದು ವೇಳೆ ಎಲಿಮಿನೇಟರ್ ಮತ್ತು ಕ್ವಾಲಿಫೈಯರ್-2ರಲ್ಲೂ ಮಳೆ ಬಂದರೆ ಅದೇ ನಿಯಮದಡಿ ವಿಜೇತರನ್ನು ನಿರ್ಧರಿಸಲಾಗುತ್ತದೆ. ಆದರೆ ಫೈನಲ್ ಪಂದ್ಯದ ನಿಯಮಗಳು ಸ್ವಲ್ಪ ವಿಭಿನ್ನವಾಗಿರಲಿವೆ.
ಫೈನಲ್ ಪಂದ್ಯ: ಪ್ರತಿಸಲ ಫೈನಲ್ ಪಂದ್ಯಕ್ಕಾಗಿ ಮೀಸಲು ದಿನಗಳನ್ನು ಕಾಯ್ದಿರಿಸಲಾಗುತ್ತದೆ. ಆದರೆ ಈ ಬಾರಿಯ ಫೈನಲ್ ಪಂದ್ಯಕ್ಕೆ ಮೀಸಲು ದಿನವಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಕಳೆದ ವರ್ಷ ಫೈನಲ್ ಪಂದ್ಯ ಮೀಸಲು ದಿನ ತಲುಪಿತ್ತು. ಬಹುಶಃ ಈ ಬಾರಿಯೂ ಮಳೆಯಿಂದಾಗಿ ಪಂದ್ಯ ರದ್ದಾದರೇ ಮೀಸಲು ದಿನವನ್ನೇ ಬಳಸಿಕೊಳ್ಳು ಸಾಧ್ಯತೆ ಇದೆ. ಸದ್ಯ ಐಪಿಎಲ್ 2024ರ ಅಂತಿಮ ಪಂದ್ಯವು ಮೇ 26 ರಂದು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ.
ಅಂದು ಫಲಿತಾಂಶ ಪ್ರಕಟವಾಗದಿದ್ದರೆ ಮೇ 27ರಂದು ಫೈನಲ್ ನಡೆಸಬಹುದು. ಮೀಸಲು ದಿನದಂದು ಪಂದ್ಯ ಎಲ್ಲಿಗೆ ರದ್ದಾಗಿರುತ್ತದೋ ಅಲ್ಲಿಂದಲೇ ಶುರು ಮಾಡಲಾಗುತ್ತದೆ. ಒಂದು ವೇಳೆ ಮೀಸಲು ದಿನದಂದು ಮಳೆ ಅಡ್ಡಿಪಡಿಸಿದರೆ ಮತ್ತು ನಿಯಮಿತ ಸಮಯದಲ್ಲಿ ಕನಿಷ್ಠ 5 ಓವರ್‌ಗಳನ್ನು ಆಡಲು ಸಾಧ್ಯವಾಗದಿದ್ದರೆ, ಸೂಪರ್ ಓವರ್ ಆಡಿಸಲಾಗುತ್ತದೆ. ಸೂಪರ್ ಓವರ್ ಆಡಿಸಲೂ ಸಾಧ್ಯವಾಗದಿದ್ದರೆ ಇಲ್ಲಿಯೂ ಪಾಯಿಂಟ್ ಪಟ್ಟಿಯ ಆಧಾರದ ಮೇಲೆ ವಿಜೇತರನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ: ಫೈನಲ್ ತಲುಪುವ ತಂಡ ಯಾವುದು?: ಹೈದರಾಬಾದ್ v/s ಕೋಲ್ಕತ್ತಾ ಮಧ್ಯೆ ಮೊದಲ ಕ್ವಾಲಿಫೈಯರ್ ಫೈಟ್ - first qualifier