ನವದಹೆಲಿ: ಪ್ಯಾರಿಸ್ ಒಲಿಂಪಿಕ್ಸ್ 2024 ಸಮಾರೋಪ ಸಮಾರಂಭದೊಂದಿಗೆ ಮುಕ್ತಾಯಗೊಂಡಿದೆ. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭಾರತೀಯ ಆಟಗಾರರನ್ನು ಪ್ರಶಂಸಿಸಿದ್ದಾರೆ. ಪ್ರಧಾನಿ ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ, 'ಪ್ಯಾರಿಸ್ ಒಲಿಂಪಿಕ್ನ ಕ್ರೀಡಾಕೂಟದಲ್ಲಿ ಭಾಗವಹಿಸಿದ ಭಾರತೀಯ ಕ್ರೀಡಾಪಟುಗಳ ಪ್ರಯತ್ನವನ್ನು ನಾನು ಪ್ರಶಂಸಿಸುತ್ತೇನೆ. ಎಲ್ಲಾ ಅಥ್ಲೀಟ್‌ಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ ಮತ್ತು ಪ್ರತಿಯೊಬ್ಬ ಭಾರತೀಯರು ಅವರ ಬಗ್ಗೆ ಹೆಮ್ಮೆಪಡುತ್ತಾರೆ. ನಮ್ಮ ಕ್ರೀಡಾ ವೀರರಿಗೆ ಮುಂಬರುವ ಕ್ರೀಡೆಗಳಿಗೆ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ವೇಳೆಯೂ ಮೋದಿ ಅವರು ದೇಶಕ್ಕಾಗಿ ಪದಕ ಗೆದ್ದ ಭಾರತೀಯ ಅಥ್ಲೀಟ್‌ಗಳಿಗೆ ಕರೆ ಮಾಡಿ ಅವರ ಶ್ರಮವನ್ನು ಶ್ಲಾಘಿಸಿ ಅಭಿನಂದಿಸಿದ್ದರು. ಈ ಆಟಗಾರರಲ್ಲಿ ಭಾರತೀಯ ಮಹಿಳಾ ಶೂಟರ್ ಮನು ಭಾಕರ್, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಾಲೆ, ನೀರಜ್ ಚೋಪ್ರಾ, ಅಮನ್ ಸೆಹ್ರಾವತ್ ಮತ್ತು ಭಾರತೀಯ ಹಾಕಿ ತಂಡ ಸೇರಿದೆ.
ಭಾರತವು ಈ ವರ್ಷ ಪ್ಯಾರಿಸ್ ಒಲಿಂಪಿಕ್ನಲ್ಲಿ 6 ಪದಕಗಳನ್ನು ಗೆದ್ದುಕೊಂಡಿದೆ. ಒಟ್ಟು 117 ಆಟಗಾರರೊಂದಿಗೆ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದ ಭಾರತ, ಇದರಲ್ಲಿ ಕೇವಲ ನಾಲ್ವರು ಆಟಗಾರರು ಮಾತ್ರ ವೈಯಕ್ತಿಕ ವಿಭಾಗದಲ್ಲಿ ಪದಕಗಳನ್ನು ಪಡೆಯಲು ಸಾಧ್ಯವಾಯಿತು. ಮನು ಭಾಕರ್ ಅವರು ಎರಡು ಪದಕಗಳನ್ನು ಗೆದ್ದಿರುವುದರ ಜೊತೆಗ ಭಾರತೀಯ ಹಾಕಿ ತಂಡವು ಕಂಚಿನ ಪದಕವನ್ನು ಜಯಿಸಿದೆ.
As the Paris #Olympics conclude, I appreciate the efforts of the entire Indian contingent through the games. All the athletes have given their best and every Indian is proud of them. Wishing our sporting heroes the best for their upcoming endeavours.
— Narendra Modi (@narendramodi) August 11, 2024
ಮನು ಭಾಕರ್, ಪಿಆರ್ ಶ್ರೀಜೇಶ್ ಧ್ವಜದಾರಿಗಳು: ಪ್ಯಾರಿಸ್ ಒಲಿಂಪಿಕ್ ಉದ್ಘಾಟನಾ ಸಮಾರಂಭದಲ್ಲಿ ಪಿವಿ ಸಿಂಧು ಮತ್ತು ಶರತ್ ಕಮಲ್ ಭಾರತದ ಧ್ವಜಧಾರಿಗಳಾಗಿದ್ದರೆ, ಸಮಾರೋಪ ಸಮಾರಂಭದಲ್ಲಿ ಮನು ಭಾಕರ್ ಮತ್ತು ಪಿಆರ್ ಶ್ರೀಜೇಶ್ ಧ್ವಜವನ್ನು ಹಿಡಿದಿದ್ದರು. ಸಮಾರೋಪ ಸಮಾರಂಭದಲ್ಲಿ ಅಮೆರಿಕನ್ ನಟ ಮತ್ತು ಚಲನಚಿತ್ರ ನಿರ್ಮಾಪಕ ಟಾಮ್ ಕ್ರೂಸ್ ಸಾಹಸಗಳನ್ನು ಪ್ರದರ್ಶಿಸಿದರು. ಇದರೊಂದಿಗೆ ಅಮೆರಿಕದ ಗ್ಯಾಬ್ರಿಯೆಲಾ ಸರ್ಮಿಯೆಂಟೊ ವಿಲ್ಸನ್, ಪಾಪ್ ಗಾಯಕಿ ಬಿಲ್ಲಿ ಎಲಿಶ್ ಮತ್ತು ರಾಪರ್ ಸ್ನೂಪ್ ಡಾಗ್ ಅವರು ರಾಪ್ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಹುರಿದುಂಬಿಸಿದರು.
ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಗೆ ವರ್ಣರಂಜಿತ ತೆರೆ: ಪರೇಡ್ನಲ್ಲಿ ಮನು ಭಾಕರ್, ಶ್ರೀಜೇಶ್ ಇತರರು ಭಾಗಿ - Paris Olympics 2024