ಕೋಲ್ಕತ್ತಾ (ಪಶ್ಚಿಮ ಬಂಗಾಳ): ಇಂಗ್ಲೆಂಡ್ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ 'ಬಾಜ್ಬಾಲ್' ಮಾದರಿ ಪರಿಚಯಿಸಿ, ಹೊಸ ಭಾಷ್ಯ ಬರೆದಿದೆ. ಹೇಳಿಕೇಳಿ ಟಿ20 ಕ್ರಿಕೆಟ್ ಹೊಡಿ ಬಡಿ ಆಟ. ಇಲ್ಲಿ ಬ್ಯಾಟರ್ಗಳದ್ದೇ ದರ್ಬಾರ್. ಐಪಿಎಲ್ನಲ್ಲಿ ರಾಶಿ ರಾಶಿ ರನ್ಗಳು ಹರಿದು ಬರುತ್ತಿವೆ. ಇದು ಕ್ರಿಕೆಟ್ ಆಟವೋ ಅಥವಾ ಬೇಸ್ಬಾಲ್ ಕ್ರೀಡೆಯೋ ಎಂಬ ಅನುಮಾನ ಮೂಡಿಸುತ್ತಿದೆ.
ಇದಕ್ಕೆ ಉದಾಹರಣೆಯಾಗಿ ಶುಕ್ರವಾರ ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯ. ಉಭಯ ತಂಡಗಳು ಸೇರಿ ಬರೋಬ್ಬರಿ 523 ರನ್ ಕಲೆ ಹಾಕಿವೆ. ಅದರಲ್ಲೂ ಪಂಜಾಬ್ 261 ರನ್ ಅಸಾಧ್ಯ ಗುರಿಯನ್ನು ಬೆನ್ನಟ್ಟಿ ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ಸಂಭ್ರಮಾಚರಣೆ ಮಾಡಿದೆ.
ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೊದಲ ಬಾರಿಗೆ ಸಂಭವಿಸಿದ ವಿದ್ಯಮಾನವಾಗಿದೆ. ಈವರೆಗೂ ಯಾವುದೇ ತಂಡಗಳು ಇಷ್ಟು ದೊಡ್ಡ ಪ್ರಮಾಣದ ಮೊತ್ತವನ್ನು ಚೇಸ್ ಮಾಡಿ ಗೆದ್ದ ಉದಾಹರಣೆಯೇ ಇರಲಿಲ್ಲ. ಅದನ್ನು ಪಂಜಾಬ್ ಕಿಂಗ್ಸ್ ಸಾಧಿಸಿ ತೋರಿಸಿತು. ತಂಡದ ಈ ಸಾಧನೆ ಎಲ್ಲರಲ್ಲೂ ಅಚ್ಚರಿಯ ಮೂಡಿಸಿದ್ದರೆ, ಖುದ್ದು ತಂಡದ ನಾಯಕ ಸ್ಯಾಮ್ ಕರ್ರನ್ ಕೂಡ ಒಂದು ರೀತಿಯ ಶಾಕ್ಗೆ ಒಳಗಾಗಿದ್ದಾರೆ.
ಕ್ರಿಕೆಟ್ ಸ್ವರೂಪ ಬದಲು: ಪಂದ್ಯ ಮುಗಿದ ಬಳಿಕ ಮಾತನಾಡಿದ ಅವರು, ನಮ್ಮ ತಂಡ ಕೋಲ್ಕತ್ತಾ ವಿರುದ್ಧ ಆಡಿದ್ದು ನೋಡಿದರೆ ಕ್ರಿಕೆಟ್ ನಿಧಾನವಾಗಿ ಬೇಸ್ಬಾಲ್ ಕ್ರೀಡೆಯಾಗಿ ಪರಿವರ್ತನೆಯಾಗುತ್ತಿದೆ. ಇಲ್ಲಿ ಹೊಡೆಬಡಿಯೊಂದೇ ಗುರಿ. ಚೆಂಡು ಕಂಡರೆ ದಂಡಿಸಬೇಕು ಎನ್ನುವ ಮಟ್ಟಿಗೆ ಕ್ರಿಕೆಟ್ ಬದಲಾಗುತ್ತಿದೆ ಎಂದು ಅಭಿಪ್ರಾಪಟ್ಟರು.
ಕ್ರಿಕೆಟ್ ಜೆಂಟಲ್ಮನ್ ಗೇಮ್. ಈಗ ಅದರ ಸ್ವರೂಪವೇ ಬದಲಾಗಿದೆ. ಅದರಲ್ಲೂ ಚುಟುಕು ಮಾದರಿಯ ಕ್ರಿಕೆಟ್ ಗೇಮ್ ಪ್ಲಾನ್ಗಳೇ ಬೇರೆಯಾಗಿವೆ. ಇಲ್ಲೇನಿದ್ದರೂ ಬ್ಯಾಟರ್ಗಳದ್ದೇ ಕಾರುಬಾರು. ಬೌಲರ್ಗಳು ಎಷ್ಟೇ ಪ್ರಯತ್ನಿಸಿದರೂ ಕೊನೆಗೆ ಬ್ಯಾಟರ್ಗಳೇ ಯಶ ಸಾಧಿಸುತ್ತಾರೆ ಎಂದು ಹೇಳಿದರು.
ತಂಡ ಸತತ ಸೋಲಿನ ಬಳಿಕ ಗೆಲುವಿನ ನಗೆ ಬೀರಿದೆ. ಇದು ಸಂತೋಷದ ವಿಚಾರ. ನಾವು ಕೆಲವು ಕಠಿಣ ವಾರಗಳನ್ನು ಎದುರಿಸಿದ್ದೇವೆ. ತಂಡದ ಸದಸ್ಯರಲ್ಲಿರುವ ಆತ್ಮವಿಶ್ವಾಸ, ಕೌಶಲ್ಯ, ತರಬೇತುದಾರರ ಸಲಹೆ ಎಲ್ಲವೂ ಕೂಡಿ ಗೆಲುವಿನ ಫಲಿತಾಂಶ ಸಿಕ್ಕಿದೆ ಎಂದರು.
ವಿಶ್ವದಾಖಲೆಯ ಗೆಲುವು: ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿಶ್ವದಾಖಲೆಯ ಗೆಲುವು ದಾಖಲಿಸಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ 261 ರನ್ಗಳ ಗುರಿಯನ್ನು 18.4 ಓವರ್ಗಳಲ್ಲಿ ದಾಟಿತು. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲೇ ಮೊದಲಾಗಿದೆ. ಕೋಲ್ಕತ್ತಾ ಪರ ಸುನಿಲ್ ನರೈನ್ 71, ಫಿಲಿಪ್ ಸಾಲ್ಟ್ 75 ರನ್ ಗಳಿಸಿದರೆ, ಪಂಜಾಬ್ನ ಜಾನಿ ಬೈರ್‌ಸ್ಟೋವ್ 108, ಶಶಾಂಕ್ ಸಿಂಗ್ 68 ರನ್ ನೆರವಿನಿಂದ 8 ವಿಕೆಟ್ಗಳ ಗೆಲುವು ದಾಖಲಿಸಿತು.