ನವದೆಹಲಿ: ನೆರೆಯ ರಾಷ್ಟ್ರ ಪಾಕಿಸ್ತಾನವು ಪ್ರಸ್ತುತ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿದೆ. ಹಣದುಬ್ಬರದಿಂದ ಅಲ್ಲಿಯ ಜನಜೀವನ ದುಸ್ತರವಾಗಿದ್ದು, ಸರ್ಕಾರ ಲಕ್ಷಾಂತರ ಕೋಟಿ ಸಾಲದಲ್ಲಿ ಮುಳುಗಿದೆ. ಪಾಕಿಸ್ತಾನದ ದುಸ್ಥಿತಿಗೆ ಮತ್ತೊಂದು ನಿದರ್ಶನವೊಂದು ಬೆಳಕಿಗೆ ಬಂದಿದೆ. ವರದಿಗಳ ಪ್ರಕಾರ, ಪಾಕಿಸ್ತಾನ ಹಾಕಿ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2024ರಲ್ಲಿ ಭಾಗವಹಿಸಲು ಚೀನಾಗೆ ತೆರಳಲು, ವಿಮಾನ ಟಿಕೆಟ್ಗಾಗಿ ಸಾಲ ಪಡೆದುಕೊಂಡಿದೆ.
ಏಷ್ಯನ್ ಚಾಂಪಿಯನ್ಸ್ ಟ್ರೋಫಿಗಾಗಿ ಚೀನಾಗೆ ತೆರಳಲು ಪಾಕಿಸ್ತಾನ ತಂಡ ಸಾಲ ತೆಗೆದುಕೊಂಡಿರುವುದಾಗಿ ಬಯಲಾಗಿದೆ. ಈ ಬಗ್ಗೆ ಪಾಕಿಸ್ತಾನ ಹಾಕಿ ಫೆಡರೇಶನ್ (ಪಿಎಚ್‌ಎಫ್) ಅಧ್ಯಕ್ಷ ತಾರಿಕ್ ಬುಗ್ತಿ ಅವರು ಬಿಬಿಸಿಗೆ ಈ ಬಗ್ಗೆ ದೃಢಪಡಿಸಿದ್ದು, ತಂಡವು ಸಾಲದ ಹಣದಲ್ಲಿ ಚೀನಾಗೆ ಪ್ರಯಾಣಿಸುತ್ತಿದೆ ಎಂದಿದ್ದಾರೆ. ಶೀಘ್ರದಲ್ಲೇ ಹಣ ಬರುವ ನಿರೀಕ್ಷೆಯಿದೆ. ಹಾಕಿ ಕ್ರೀಡೆಗೆ ಆರ್ಥಿಕ ಬೆಂಬಲ ನೀಡುವಂತೆ ಪ್ರಧಾನಿ ಶಹಬಾಜ್ ಷರೀಫ್ ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಬುಗ್ತಿ ಮನವಿ ಮಾಡಿದ್ದಾರೆ.
ಫ್ರೀ ಪ್ರೆಸ್ ಜರ್ನಲ್‌ನಲ್ಲಿನ ವರದಿಯ ಪ್ರಕಾರ, ಪಾಕಿಸ್ತಾನ ಸ್ಪೋರ್ಟ್ಸ್ ಬೋರ್ಡ್ ಪಾಕಿಸ್ತಾನ ಹಾಕಿ ಫೆಡರೇಷನ್ ಸಾಲ ನೀಡುವುದಾಗಿ ತಿಳಿಸಿದೆ. ಇತ್ತೀಚೆಗೆ ಪಾಕಿಸ್ತಾನದ ಅಂಡರ್-18 ಬೇಸ್‌ಬಾಲ್ ತಂಡದ ತರಬೇತಿ ಶಿಬಿರಕ್ಕೆ ಹಣಕಾಸಿನ ನೆರವನ್ನು ನಿರಾಕರಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಒಂದಾನೊಂದು ಕಾಲದಲ್ಲಿ ವಿಶ್ವ ಹಾಕಿಯಲ್ಲಿ ಅತ್ಯುತ್ತಮ ತಂಡಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟ ಪಾಕಿಸ್ತಾನವು ಇತ್ತೀಚಿನ ವರ್ಷಗಳಲ್ಲಿ ಕಳಪೆ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದೆ. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಸೆಪ್ಟೆಂಬರ್ 8 ರಿಂದ ಪ್ರಾರಂಭವಾಗಲಿದ್ದು, ಫೈನಲ್ ಪಂದ್ಯ ಸೆಪ್ಟೆಂಬರ್ 17ಕ್ಕೆ ನಡೆಯಲಿದೆ.