ಫ್ಲೋರಿಡಾ (ಯುಎಸ್‌ಎ): ಇಲ್ಲಿನ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಮೈದಾನದಲ್ಲಿ ಭಾನುವಾರ ಐರ್ಲೆಂಡ್ ವಿರುದ್ಧ ಮೂರು ವಿಕೆಟ್‌ಗಳ ಪ್ರಯಾಸದ ಜಯದೊಂದಿಗೆ ಪಾಕಿಸ್ತಾನ ತಂಡವು ಟಿ20 ವಿಶ್ವಕಪ್ ಟೂರ್ನಿಯಿಂದ ನಿರ್ಗಮಿಸಿತು. 2009ರ ಚಾಂಪಿಯನ್ ಪಾಕಿಸ್ತಾನವು ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದ್ದು, ಔಪಚಾರಿಕ ಪಂದ್ಯದಲ್ಲಿ ಜಯ ಕಂಡಿತು. ಡಿ ಗ್ರೂಪ್ ಪಂದ್ಯಗಳಲ್ಲಿ ಭಾರತ ಮತ್ತು ಯುಎಸ್ ವಿರುದ್ಧ ಸೋತ ಬಳಿಕ ಪಾಕ್ ಸೂಪರ್-8 ಕನಸು ಕಮರಿತ್ತು.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಎದುರಾಳಿಯನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು. ಆದರೆ ಶಾಹೀನ್ ಶಾ ಆಫ್ರಿದಿ (22/3) ಹಾಗೂ ಇಮಾದ್ ವಾಸಿಂ (8/3) ಮಾರಕ ಬೌಲಿಂಗ್ ದಾಳಿಗೆ ಸಿಲುಕಿದ ಐರ್ಲೆಂಡ್ 9 ವಿಕೆಟ್‌ಗೆ 106 ಮಾತ್ರ ಗಳಿಸಲು ಶಕ್ತವಾಯಿತು. ತಂಡದ ಮೊತ್ತ 32 ರನ್ ಆಗುವಷ್ಟರಲ್ಲೇ ಐರ್ಲೆಂಡ್ನ 6 ವಿಕೆಟ್ ಉರುಳಿದ್ದು, ಪ್ರಮುಖ ಬ್ಯಾಟರ್ಗಳು ಪೆವಿಲಿಯನ್ ಪರೇಡ್ ನಡೆಸಿದರು. ನಾಯಕ ಪಾಲ್ ಸ್ಟಿರ್ಲಿಂಗ್ 1, ಆಂಡ್ರ್ಯೂ ಬಾಲ್ಬಿರ್ನಿ 0, ವಿಕೆಟ್ ಕೀಪರ್ ಲೋರ್ಕನ್ ಟಕ್ಕರ್ 2, ಹ್ಯಾರಿ ಟೆಕ್ಟರ್ 0, ಕರ್ಟಿಸ್ ಕ್ಯಾಂಫರ್ 7 ಹಾಗೂ ಜಾರ್ಜ್ ಡಾಕ್ರೆಲ್ 11 ರನ್ಗೆ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಒಂದಾದ ಗರೆಥ್ ಡೆಲಾನಿ (31) ಹಾಗೂ ಮಾರ್ಕ್ ಅಡೇರ್(15) 44 ರನ್ ಜೊತೆಯಾಟವಾಡಿ ತಂಡವನ್ನು ಭಾರಿ ಒತ್ತಡದಿಂದ ಪಾರು ಮಾಡಿದರು. ಇವರಿಬ್ಬರ ವಿಕೆಟ್ ಪತನದ ಬಳಿಕ ಜೋಶುವಾ ಲಿಟಲ್ 22 ರನ್ ಕಾಣಿಕೆ ನೀಡಿ ಐರ್ಲೆಂಡ್ ತಂಡವನ್ನು ನೂರರ ಗಡಿ ದಾಟಿಸಿದರು. ಪಾಕ್ ಪರ ಶಾಹೀನ್ ಶಾ ಆಫ್ರಿದಿ 22ಕ್ಕೆ 3, ಅಮಿರ್ 11ಕ್ಕೆ 2 ಹಾಗೂ ಇಮಾದ್ ವಾಸಿಂ 8 ರನ್ಗೆ 3 ವಿಕೆಟ್ ಪಡೆದರು.
ಸೋಲಿನತ್ತ ಮುಖ ಮಾಡಿದ್ದ ಪಾಕ್: 107 ರನ್ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಮತ್ತೊಮ್ಮೆ ನಿಧಾನಗತಿಯ ಕಳಪೆ ಆರಂಭ ಪಡೆಯಿತು. 23 ರನ್ಗೆ ಮೊದಲ ವಿಕೆಟ್ ಆಗಿ ಸೈಮ್ ಅಯೂಬ್ (17) ಪೆವಿಲಿಯನ್ಗೆ ಮರಳಿದರು. ಬಳಿಕ 17 ರನ್ ಗಳಿಸಿದ್ದ ಮೊಹಮ್ಮದ್ ರಿಜ್ವಾನ್ ಕೂಡ ಬ್ಯಾರಿ ಮೆಕಾರ್ಥಿ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ಇದರ ಬೆನ್ನಲ್ಲೇ ಪಾಕ್ ದಿಢೀರ್ ಕುಸಿತ ಕಂಡಿತು. 62 ರನ್ ಆಗುವಷ್ಟರಲ್ಲಿ 6 ವಿಕೆಟ್ ಪತನಗೊಂಡು ಸೋಲಿನ ಭೀತಿ ಎದುರಿಸಿತ್ತು. ಫಖರ್ ಜಮಾನ್ 5, ಉಸ್ಮಾನ್ ಖಾನ್ 2, ಶದಾಬ್ ಖಾನ್ 0 ಹಾಗೂ ಇಮಾದ್ ವಾಸಿಮ್ 4 ರನ್ಗೆ ಔಟಾಗಿದ್ದರು.
ಆದರೆ, ಒಂದು ತುದಿಯಲ್ಲಿ ಕ್ರೀಸ್ಗೆ ಗಟ್ಟಿಯಾಗಿ ನಿಂತು ಆಡಿದ ಬಾಬರ್ ಅಜಂ (30*) ಅಜೇಯವಾಗಿದ್ದು, ತಂಡವನ್ನು ಗೆಲುವಿನ ದಡ ಸೇರಿಸಿದರು. ಬಾಬರ್ ಅಜಂಗೆ ಅಬ್ಬಾಸ್ ಅಫ್ರಿದಿ 17 ರನ್ ಹಾಗೂ ಕೊನೆಯಲ್ಲಿ ಶಾಹೀನ್ ಅಫ್ರಿದಿ 5 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳೊಂದಿಗೆ 13* ರನ್ ಬಾರಿಸಿ ತಕ್ಕ ಸಾಥ್ ನೀಡಿದರು. 18.5 ಓವರ್ಗಳಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತು. ಐರ್ಲೆಂಡ್ನ ಬ್ಯಾರಿ ಮೆಕಾರ್ಥಿ 15ಕ್ಕೆ 3 ಹಾಗೂ ಕರ್ಟಿಸ್ ಕ್ಯಾಂಫರ್ 24ಕ್ಕೆ 2 ವಿಕೆಟ್ ಪಡೆದು ಮಿಂಚಿದರು. ಎರಡೂ ತಂಡಗಳೂ ಸೋಲು, ಗೆಲುವಿನೊಂದಿಗೆ ಟೂರ್ನಿಯಿಂದ ಹೊರಬಿದ್ದವು.