ಹೈದರಾಬಾದ್: ಕ್ರಿಕೆಟ್‌ನಲ್ಲಿ ಡಕೌಟ್ ಎಂಬ ಪದವನ್ನು ಕೇಳಿರುತ್ತೀರಿ. ಅಂದರೆ, ಬ್ಯಾಟ್ಸ್ಮನ್ ಒಂದೂ ರನ್ ಗಳಿಸದೇ ಸೊನ್ನೆಗೆ ಔಟಾಗುವುದು. ಬ್ಯಾಟ್ಸ್ಮನ್ ಖಾತೆ ತೆರೆಯದೇ ಔಟ್ ಆದಾಗ ಡಕ್, ಗೋಲ್ಡನ್ ಡಕ್ ಎಂದು ಹೇಳುತ್ತೇವೆ. ಹೀಗೆ 9 ಡಕ್ ಔಟ್ ಇವೆ ಎಂಬುದು ನಿಮಗೆ ಗೊತ್ತಾ?.
ಇತ್ತೀಚೆಗೆ, ಪಂಜಾಬ್ ಕಿಂಗ್ಸ್ ವಿರುದ್ಧ ಮಹೇಂದ್ರ ಸಿಂಗ್ ಧೋನಿ ಸೊನ್ನೆಗೆ ಔಟಾದರು. ಈ ವೇಳೆ ಅದನ್ನು ಗೋಲ್ಡನ್ ಡಕ್ ಎಂದು ಕರೆಯಲಾಯಿತು. ಅದೇಕೆ ಡಕ್ ಔಟ್ ಅನ್ನದೇ, ಗೋಲ್ಡನ್ ಡಕ್ ಎನ್ನುತ್ತೀವಿ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದೆಯೇ?. ತಪ್ಪಿಲ್ಲ. ಬ್ಯಾಟ್ಸ್ಮನ್ ಒಬ್ಬ ಎದುರಿಸಿದ ಮೊದಲ ಎಸೆತದಲ್ಲೇ ಔಟ್ ಆದಲ್ಲಿ ಅದನ್ನು ಗೋಲ್ಡನ್ ಡಕ್ ಎನ್ನುತ್ತೀವಿ.
ಡಕ್ ಔಟ್ ಪದ ಬಂದಿದ್ದೇಗೆ?: ಇಂಗ್ಲಿಷ್ನ ಡಕ್ ಕನ್ನಡದಲ್ಲಿ ಬಾತುಕೋಳಿ. ಸೊನ್ನೆಯು ಬಾತುಕೋಳಿ ಮೊಟ್ಟೆಯ ಆಕಾದರದಲ್ಲಿದೆ. ಹೀಗಾಗಿ ಸೊನ್ನೆಗೆ ಔಟ್ ಆದಾಗ ಅದನ್ನು ಡಕ್ಔಟ್ ಎಂದು ಕರೆಯುತ್ತೇವೆ.
1. ಗೋಲ್ಡನ್ ಡಕ್ (Golden Duck): ಇದು, ಬ್ಯಾಟ್ಸ್ಮನ್ವೊಬ್ಬ ಕಣಕ್ಕಿಳಿದು ಎದುರಿಸಿದ ಮೊದಲ ಎಸೆತದಲ್ಲೇ ಔಟ್ ಆದರೆ, ಅದನ್ನು ಗೋಲ್ಡನ್ ಡಕ್ ಎನ್ನುತ್ತೇವೆ. ಹೀಗೆ ಔಟಾದವರ ಪಟ್ಟಿ ಕ್ರಿಕೆಟ್‌ನಲ್ಲಿ ತುಂಬಾ ಉದ್ದಕ್ಕಿದೆ.
2. ಸಿಲ್ವರ್ ಡಕ್ (Silver Duck): ಇದು ಬ್ಯಾಟ್ಸ್ಮನ್ ಸೊನ್ನೆಗೆ ಔಟಾದಾಗ ಕರೆಯಲಾಗುತ್ತದೆ. ಆದರೆ, ಇದು ಮೊದಲ ಎಸೆತವಾಗಿರದೇ, ಎರಡನೇ ಎಸೆತದಲ್ಲಿ ಆತ ವಿಕೆಟ್ ನೀಡಿರಬೇಕು. ಎರಡು ಎಸೆತ ಎದುರಿಸಿದ ಮೇಲೆ ಔಟಾಗಿರಬೇಕು.
3. ಬ್ರಾಂಜ್ ಡಕ್ (Bronze Duck): ಗೆದ್ದಾಗ 1,2,3ನೇ ಕ್ರಮಾಂಕದಲ್ಲಿ ಪದಕ ನೀಡುತ್ತೀರಲ್ಲ. ಹಾಗೇ ಇದನ್ನು ಮೂರನೇ ಎಸೆತದಲ್ಲಿ ಸೊನ್ನೆಗೆ ಔಟಾದಾಗ ಕರೆಯುತ್ತೇವೆ. ಅಂದರೆ, ಬ್ಯಾಟರ್ ಮೊದಲೆರಡು ಚೆಂಡಿನಲ್ಲಿ ರನ್ ಗಳಿಸಿದೇ, ಮೂರನೇ ಎಸೆತದಲ್ಲಿ ವಿಕೆಟ್ ನೀಡಿರಬೇಕು.
4. ಡೈಮಂಡ್ ಡಕ್ (Diamond Duck): ಇದು ಕ್ರಿಕೆಟ್‌ನಲ್ಲಿ ಅತಿಕೆಟ್ಟ ಔಟ್ ಆಗಿದೆ. ಒಂದೂ ಎಸೆತ ಎದುರಿಸದೆಯೇ ಸೊನ್ನೆಗೆ ಔಟಾಗುವುದು. ಇದು ಸಹಜವಾಗಿ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಜರುಗುತ್ತದೆ. ಅಂದರೆ, ಬ್ಯಾಟರ್ ರನೌಟ್ ಆಗುವುದು, ಸಮಯದ ಮಿತಿ ಮೀರುವುದು, ಮೈದಾನಕ್ಕೆ ಇಳಿಯದೇ ಇದ್ದಾಗ ನಿಯಮಗಳ ಅನುಸಾರ ಆತನನ್ನು ಔಟ್ ಎಂದು ಘೋಷಿಸಲಾಗುತ್ತದೆ. ಈಚೆಗೆ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾದ ಏಂಜೆಲೋ ಮ್ಯಾಥ್ಯೂಸ್ ಅವರು ಸಮಯ ಮೀರಿದ್ದರಿಂದ ಡೈಮಂಡ್ ಡಕ್ ಎಂದು ಎಂದು ಘೋಷಿಸಲಾಗಿತ್ತು.
5. ರಾಯಲ್ ಡಕ್ (Royal Duck): ಇನಿಂಗ್ಸ್ನ ಮೊದಲ ಓವರ್ನ ಮೊದಲ ಎಸೆತದಲ್ಲಿಯೇ ಖಾತೆ ತೆರೆಯದೇ ಔಟ್ ಆಗುವುದನ್ನು ರಾಯಲ್ ಅಥವಾ ಪ್ಲಾಟಿನಂ ಡಕ್ ಎನ್ನುತ್ತೇವೆ.
6. ಲಾಫಿಂಗ್ ಡಕ್ (Laughing Duck): ಕ್ರಿಕೆಟ್‌ನಲ್ಲಿ ಲಾಫಿಂಗ್ ಡಕ್ ಎಂದರೆ ಇನಿಂಗ್ಸ್ನ ಕೊನೆಯ ಓವರ್ನ ಕೊನೆ ಎಸೆತದಲ್ಲಿ ಸೊನ್ನೆಗೆ ಔಟ್ ಆಗುವುದು.
7. ಎ ಪೇರ್ ಡಕ್ (A Pair): ಟೆಸ್ಟ್ ಕ್ರಿಕೆಟ್‌ನಲ್ಲಿ ಇದನ್ನು ನಾವು ಗುರುತಿಸುತ್ತೇವೆ. ಎರಡೂ ಇನಿಂಗ್ಸ್ಗಳಲ್ಲಿ ಸೊನ್ನೆಗೆ ಔಟಾದಾಗ ಅದು ಪೇರ್ ಡಕ್ ಆಗುತ್ತದೆ.
8. ಕಿಂಗ್ ಪೇರ್ ಡಕ್ (King Pair): ಟೆಸ್ಟ್ನ ಎರಡೂ ಇನಿಂಗ್ಸ್ನಲ್ಲಿ ಎದುರಿಸಿದ ಮೊದಲ ಎಸೆತದಲ್ಲೇ ಔಟಾದಾಗ ಅದು ಕಿಂಗ್ ಪೇರ್ ಡಕ್ ಎನ್ನುತ್ತೇವೆ. ಇದು ಅಸಾಮಾನ್ಯ ಸನ್ನಿವೇಶದಲ್ಲಿ ಜರುಗುತ್ತದೆ.
9. ಬ್ಯಾಟಿಂಗ್ ಹ್ಯಾಟ್ರಿಕ್ (Batting Hat trick): ಬಹುಶಃ ಇದು ಕೂಡ ಅಪರೂಪದ ಸನ್ನಿವೇಶಗಳಲ್ಲಿ ಮಾತ್ರ ಘಟಿಸುತ್ತದೆ. ಬ್ಯಾಟರ್ ಯಾವುದೇ ಇನಿಂಗ್ಸ್ನಲ್ಲಿ ಸತತ ಮೂರು ಬಾರಿ ಸೊನ್ನೆಗೆ ಔಟ್ ಆಗುವುದು. ಅಂದರೆ, ಟೆಸ್ಟ್ನ ಎರಡೂ ಇನಿಂಗ್ಸ್ನಲ್ಲಿ ಔಟಾಗಿ ಬಳಿಕ, ನಂತರದ ಟೆಸ್ಟ್ ಪಂದ್ಯದ ಇನಿಂಗ್ಸ್ನಲ್ಲೂ ಸೊನ್ನೆಗೆ ವಿಕೆಟ್ ನೀಡುವುದಾಗಿದೆ.