ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್‌ನ ಕೊನೆಯ ದಿನಗಳಲ್ಲಿ ಇಡೀ ದೇಶದ ಗಮನ ಜಾವೆಲಿನ್ ಥ್ರೋ ಸ್ಪರ್ಧೆಯ ಮೇಲಿತ್ತು. ಭಾರತದ ನೀರಜ್ ಚೋಪ್ರಾ ಹಾಗೂ ಪಾಕಿಸ್ತಾನದ ಅರ್ಷದ್ ನದೀಮ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಕೊನೆಯಲ್ಲಿ ಅರ್ಷದ್ ನದೀಮ್ ದಾಖಲೆಯ ಎಸೆತದ ಮೂಲಕ ಚಿನ್ನ ಜಯಿಸಿದರೆ, ನೀರಜ್ ಚೋಪ್ರಾ ಬೆಳ್ಳಿ ಗೆದ್ದರು.
ಇದರೊಂದಿಗೆ, ಅರ್ಷದ್ ನದೀಮ್ ಪಾಕಿಸ್ತಾನದ ಅತ್ಯಂತ ಜನಪ್ರಿಯ ಮತ್ತು ಪ್ರಸಿದ್ಧ ಆಟಗಾರರಾದರು. ನದೀಂ ಮೇಲೆ ಹಣದ ಸುರಿಮಳೆಯಾಗುತ್ತಿದೆ.
250 ಮಿಲಿಯನ್ ರೂಪಾಯಿಗಳಿಗಿಂತ ಹೆಚ್ಚು ಘೋಷಣೆ: ವರದಿಯ ಪ್ರಕಾರ, ನದೀಮ್ ಇದುವರೆಗೆ ಉಡುಗೊರೆಗಳು ಒಳಗೊಂಡಂತೆ 250 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳ ಬೃಹತ್ ಬಹುಮಾನ ಪಡೆದಿದ್ದಾರೆ. ಐಷಾರಾಮಿ ಕಾರುಗಳೂ ಉಡುಗೊರೆಯಾಗಿ ಸಿಕ್ಕಿವೆ. ಪಾಕ್ ಪ್ರಧಾನಿ ಷರೀಫ್ 150 ಮಿಲಿಯನ್ ರೂಪಾಯಿ ($538,000) ಘೋಷಿಸಿದ್ದಾರೆ. ಅಷ್ಟೇ ಅಲ್ಲ, ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಮರ್ಯಮ್ ನವಾಜ್, 10 ಕೋಟಿ ರೂಪಾಯಿ ಮತ್ತು ಒಲಿಂಪಿಕ್ ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಬಹುಮಾನವಾಗಿ ನೀಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅರ್ಷದ್ 92.97 ಮೀಟರ್ ದೂರ ಜಾವೆಲಿನ್ ಎಸೆದಿದ್ದರು.
ನೀರಜ್‌ಗೆ 2 ಮಿಲಿಯನ್ ಪಾಕಿಸ್ತಾನ ರೂಪಾಯಿ ನೀಡುವುದಾಗಿ ಸಿಂಧ್ ರಾಜ್ಯಪಾಲ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಜೀವನವಿಡೀ ಉಚಿತ ತೈಲ: ಸ್ಟಾರ್ಟಪ್ ಪಾಕಿಸ್ತಾನದ ಸಿಒಒ ಜೀಶನ್ ತಯ್ಯಬ್, ನದೀಮ್ ಅವರ ಗಮನಾರ್ಹ ಸಾಧನೆಯನ್ನು ಗೌರವಿಸಿ, ಹೊಸ ಕಾರು ಮತ್ತು ಜೀವನದುದ್ದಕ್ಕೂ ಉಚಿತ ಇಂಧನ ನೀಡುವುದಾಗಿ ಘೋಷಿಸಿದ್ದಾರೆ.
ನೀರಜ್ ಚೋಪ್ರಾಗೆ ಸಿಕ್ಕ ಬಹುಮಾನವೆಷ್ಟು?: ನೀರಜ್ ಚೋಪ್ರಾ ಅವರಿಗೆ ಈ ಬಾರಿ ಯಾವುದೇ ಬಹುಮಾನವನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ಕೋಟಿಗಟ್ಟಲೆ ಹಣ ಸಿಕ್ಕಿತ್ತು.
ಮಹೀಂದ್ರಾ ಮತ್ತು ಮಹೀಂದ್ರಾ ಕಂಪನಿ ಅಧ್ಯಕ್ಷ ಆನಂದ್ ಮಹೀಂದ್ರಾ, ವೈಯಕ್ತಿಕ XUV 700 ಉಡುಗೊರೆ ನೀಡಿದ್ದರು. ಹರಿಯಾಣದ ಅಂದಿನ ಮುಖ್ಯಮಂತ್ರಿ ಎಂ.ಎಲ್.ಖಟ್ಟರ್ 6 ಕೋಟಿ ರೂಪಾಯಿ ನಗದು ಬಹುಮಾನ ನೀಡಿದ್ದರು. BYJU'S ಮತ್ತು ಪಂಜಾಬ್ ಸರ್ಕಾರದಿಂದ ತಲಾ 2 ಕೋಟಿ ರೂ. ಮತ್ತು ಪಂಜಾಬ್ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ 2 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದರು.
ಮಣಿಪುರ ಸರ್ಕಾರ, ಬಿಸಿಸಿಐ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ತಲಾ 1 ಕೋಟಿ ರೂ., ಭಾರತದ ಪ್ರಮುಖ ವಿಮಾನಯಾನ ಸಂಸ್ಥೆಗಳಲ್ಲಿ ಒಂದಾದ ಇಂಡಿಗೋ, ಚೋಪ್ರಾಗೆ ಒಂದು ವರ್ಷದವರೆಗೆ ಅನಿಯಮಿತ ಉಚಿತ ಪ್ರಯಾಣ ಘೋಷಿಸಿತ್ತು.
ಇದನ್ನೂ ಓದಿ: ಕೀನ್ಯಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೇರಿದ ಕನ್ನಡಿಗ ದೊಡ್ಡ ಗಣೇಶ್ - Dodda Ganesh