ಪ್ಯಾರಿಸ್ (ಫ್ರಾನ್ಸ್): ಪ್ಯಾರಿಸ್ (ಫ್ರಾನ್ಸ್): ಪ್ಯಾರಾಲಿಂಪಿಕ್ಸ್ನಲ್ಲಿಂದು ಭಾರತದ ಖಾತೆಗೆ ಎರಡನೇ ಪದಕ ಸೇರ್ಪಡೆಗೊಂಡಿದೆ. ಸೋಮವಾರ ನಡೆದ ಪುರುಷರ ಸಿಂಗಲ್ಸ್ SL3 ಬ್ಯಾಡ್ಮಿಂಟನ್ ಈವೆಂಟ್ನಲ್ಲಿ ಭಾರತದ ನಿತೇಶ್ ಕುಮಾರ್ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಈ ಈವೆಂಟ್ನ ಫೈನಲ್ನಲ್ಲಿ ನಿತೇಶ್ ಗ್ರೇಟ್ ಬ್ರಿಟನ್ನ ಡೇನಿಯಲ್ ಬೆಥೆಲ್ ಅವರನ್ನು ಎದುರಿಸಿದ್ದರು. ಉಭಯ ಆಟಗಾರರ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟು ಅಂತಿಮವಾಗಿ ನಿತೀಶ್ ಕುಮಾರ್, ಬೆಥೆಲ್ ಅವರನ್ನು 2-1 ಅಂತರದಿಂದ ಮಣಿಸಿದರು. ಇದರೊಂದಿಗೆ ಭಾರತ ಪ್ಯಾರಾಲಿಂಪಿಕ್ಸ್ನಲ್ಲಿ 9ನೇ ಪದಕ ಗೆದ್ದುಕೊಂಡು ಒಲಿಂಪಿಕ್ಸ್ ದಾಖಲೆಯನ್ನು ಮುರಿದಿದೆ.
29 ವರ್ಷದ ನಿತೇಶ್ ಕುಮಾರ್ ಮತ್ತು ಗ್ರೇಟ್ ಬ್ರಿಟನ್ನ ಡೇನಿಯಲ್ ಬೆಥೆಲ್ ನಡುವೆ ಫೈನಲ್ ಪಂದ್ಯದಲ್ಲಿ ಕಠಿಣ ಪೈಪೋಟಿ ಏರ್ಪಟ್ಟಿತ್ತು. ಪಂದ್ಯದ ಮೊದಲ ಸೆಟ್ ನಿತೇಶ್ ಕುಮಾರ್ 21-14 ರಿಂದ ಗೆದ್ದುಕೊಂಡರು. ಅದೇ ವೇಳೆ ಎರಡನೇ ಸೆಟ್ನಲ್ಲಿ ದಿಟ್ಟ ಪ್ರದರ್ಶನ ನೀಡಿದರೂ 18-21ರಿಂದ ಸೋಲನುಭವಿಸಬೇಕಾಯಿತು. ಒಂದು ಬಾರಿ 16-16 ರಿಂದ ಸೆಟ್ ಸಮವಾಗಿದ್ದರಿಂದ ನಿತೀಶ್ ಕುಮಾರ್ ಹಿನ್ನಡೆ ಅನುಭವಿಸಿದರು. ಇದಾದ ಬಳಿಕ ಮೂರನೇ ಸೆಟ್ನಲ್ಲಿ ದಿಟ್ಟ ಪ್ರದರ್ಶನ ತೋರಿ ಪಂದ್ಯವನ್ನು 23-21ರಿಂದ ಗೆದ್ದು ಪದಕವನ್ನು ವಶಪಡೆಸಿಕೊಂಡರು.
ಚಿನ್ನ ಗೆದ್ದ ಎರಡನೇ ಷಟ್ಲರ್: ನಿತೇಶ್ ಕುಮಾರ್ ಪ್ರಸ್ತುತ ವಿಶ್ವದ ನಂಬರ್ 1 ಪ್ಯಾರಾ ಶಟ್ಲರ್ ಆಗಿದ್ದಾರೆ. ಇದೀಗ ಈ ಚಿನ್ನದ ಪದಕದೊಂದಿಗೆ ಪ್ಯಾರಾಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದ ಎರಡನೇ ಭಾರತೀಯ ಬ್ಯಾಡ್ಮಿಂಟನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮುನ್ನ ಪ್ರಮೋದ್ ಭಗತ್ ಟೋಕಿಯೊ ಪ್ಯಾರಾಲಿಂಪಿಕ್ಸ್ನಲ್ಲಿ ಭಾರತಕ್ಕೆ ಚಿನ್ನ ಗೆದ್ದಿದ್ದರು.