ನವದೆಹಲಿ: ಒಲಿಂಪಿಕ್ ಚಿನ್ನದ ಪದಕ ವಿಜೇತ, ವಿಶ್ವ ಚಾಂಪಿಯನ್ ಜಾವೆಲಿನ್ ಪಟು, ಗೋಲ್ಡನ್ ಬಾಯ್ ನೀರಜ್ ಚೋಪ್ರಾ ಮೇ 12ರಿಂದ 15 ರವರೆಗೆ ಒಡಿಶಾದ ಭುವನೇಶ್ವರದಲ್ಲಿ ನಡೆಯಲಿರುವ ರಾಷ್ಟ್ರೀಯ ಫೆಡರೇಶನ್ ಕಪ್ (ಎನ್‌ಎಫ್‌ಸಿ)ನಲ್ಲಿ ಭಾಗವಹಿಸಲಿದ್ದಾರೆ. ಇದರೊಂದಿಗೆ ಮೂರು ವರ್ಷಗಳ ಬಳಿಕ ಮೊದಲ ಬಾರಿಗೆ ಸ್ವದೇಶಿದಲ್ಲಿ ಸ್ಪರ್ಧಾ ಕಣಕ್ಕೆ ಇಳಿಯಲಿದ್ದಾರೆ.
ಪ್ರಸ್ತುತ ಪ್ರತಿಷ್ಠಿತ ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಚೋಪ್ರಾ ಮತ್ತು ಕಿಶೋರ್ ಜೆನಾ ಪಾಲ್ಗೊಳ್ಳಲಿದ್ದಾರೆ. ಮೇ 10ರಿಂದ ಈ ಡೈಮಂಡ್ ಲೀಗ್‌ನಲ್ಲಿ ಆರಂಭವಾಗಲಿದೆ. ಇದರ ಬಳಿಕ ನೀರಜ್, ಕಿಶೋರ್ ಇಬ್ಬರೂ ಭಾರತಕ್ಕೆ ಮರಳಲಿದ್ದಾರೆ.
ಈ ಬಗ್ಗೆ ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ ಮಾಹಿತಿ ನೀಡಿದ್ದು, ಮೇ 12ರಿಂದ ಭುವನೇಶ್ವರದಲ್ಲಿ ಪ್ರಾರಂಭವಾಗುವ ದೇಶೀಯ ಸ್ಪರ್ಧೆಯಲ್ಲಿ ನೀರಜ್ ಚೋಪ್ರಾ ಹಾಗೂ ಕಿಶೋರ್ ಜೆನಾ ಭಾಗವಹಿಸಲಿದ್ದಾರೆ ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದೆ. ರಾಷ್ಟ್ರೀಯ ಫೆಡರೇಶನ್ ಕಪ್ನಲ್ಲಿ ನೀರಜ್ ಚೋಪ್ರಾ ಪಾಲ್ಗೊಳ್ಳುವುದನ್ನು ಅವರ ಕೋಚ್ ಕ್ಲಾಸ್ ಬಾರ್ಟೋನಿಟ್ಜ್ ಕೂಡ ಖಚಿತಪಡಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
2020ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ನೀರಜ್ ಚೋಪ್ರಾ ಐತಿಹಾಸಿಕ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಇದರ ಬಳಿಕ 2022ರ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. 2023ರ ವಿಶ್ವ ಚಾಂಪಿಯನ್ ಆಗಿದ್ದರು. ಇದೇ 2023ರ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ನಲ್ಲಿ ಚಿನ್ನ ಪದಕವನ್ನು ಗೆದ್ದಿದ್ದರು. ಏಷ್ಯನ್ ಗೇಮ್ಸ್ನಲ್ಲಿ ಕಿಶೋರ್ ಜೆನಾ ಬೆಳ್ಳಿ ಪದಕ ಗೆದ್ದಿದ್ದರು. ಜಾವೆಲಿನ್ನಲ್ಲಿ ನೀರಜ್ ಅವರ ವೈಯಕ್ತಿಕ ಶ್ರೇಷ್ಠ ದಾಖಲೆಯು 89.94 ಮೀಟರ್ ಇದ್ದು, 90 ಮೀಟರ್ ಎಸೆಯುವ ಗುರಿಯನ್ನೂ ಹೊಂದಿದ್ದಾರೆ.
ಇದನ್ನೂ ಓದಿ: ಟಿ-20 ವಿಶ್ವಕಪ್ ಪ್ರಚಾರಕ್ಕೆ ಅಶ್ವತ್ಥಾಮನ ಪಾತ್ರದಲ್ಲಿ ಬಂದ ಅಮಿತಾಭ್ ಬಚ್ಚನ್: ರೋಮಾಂಚಕ ವಿಡಿಯೋ ನೋಡಿ