ಚೆನ್ನೈ (ತಮಿಳುನಾಡು): ಕೆನಡಾದಲ್ಲಿ ಮಂಗಳವಾರ ನಡೆದ ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಯುವ ಆಟಗಾರನ ಗೆಲುವಿನ ಬಗ್ಗೆ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಅವರ ದೀರ್ಘಕಾಲದ ಕೋಚ್ ವಿಷ್ಣು ಪ್ರಸನ್ನ ಸಂತಸ ವ್ಯಕ್ತಪಡಿಸಿದರು.
ಈಟಿವಿ ಭಾರತ್ ಜೊತೆಗೆ ಮಾತನಾಡಿದ ಪ್ರಸನ್ನ ಅವರು, ''17ರ ಹರೆಯದಲ್ಲಿ ಅವರು ಈ ಮಹಾನ್ ಸಾಧನೆ ಮಾಡಿರುವುದು ನನಗೆ ತುಂಬಾ ಖುಷಿ ಮತ್ತು ಉತ್ಸುಕವಾಗಿದೆ. ಅವರು ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ ಮತ್ತು ವಿಶ್ವ ಚೆಸ್ ಚಾಂಪಿಯನ್‌ಶಿಪ್ ಚಾಲೆಂಜರ್ ಆದ ಅತ್ಯಂತ ಕಿರಿಯ ಆಟಗಾರರಾಗಿದ್ದಾರೆ. ಹಾಗಾಗಿ ಅವರ ಭವಿಷ್ಯಕ್ಕಾಗಿ ನಾನು ತುಂಬಾ ಸಂತೋಷ ಮತ್ತು ಉತ್ಸುಕನಾಗಿದ್ದೇನೆ'' ಎಂದರು.
''ಚೆನ್ನೈನ 17 ವರ್ಷದ ಗ್ರ್ಯಾಂಡ್ ಮಾಸ್ಟರ್ ಡಿ ಗುಕೇಶ್ 14 ಪಂದ್ಯಗಳನ್ನಾಡಿದ್ದು, 9 ಅಂಕ ಗಳಿಸಿದ್ದಾರೆ. ಗುಕೇಶ್ ಅವರು ಅನುಭವಿ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ನಂತರ ಕ್ಯಾಂಡಿಡೇಟ್ಸ್ ಟೂರ್ನಮೆಂಟ್ ಗೆದ್ದ ಎರಡನೇ ಆಟಗಾರರಾಗಿದ್ದಾರೆ. ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಶ್ವ ಚೆಸ್ ಚಾಂಪಿಯನ್ಸ್‌ನಲ್ಲಿ ಚೀನಾದ ಜಿಎಂ ಡಿಂಗ್ ಲಿರೆನ್ ಅವರನ್ನು ಎದುರಿಸಲು ಸಜ್ಜಾಗಿದ್ದಾರೆ. ಗುಕೇಶ್ ಅವರನ್ನು ಬೆಂಬಲಿಸುವ ಸಂಪೂರ್ಣ ತಂಡವಿದೆ'' ಎಂದು ಕೋಚ್ ಬಹಿರಂಗಪಡಿಸಿದ್ದಾರೆ.
''ಗುಕೇಶ್ ಅವರು ನನ್ನೊಂದಿಗೆ ಮತ್ತು ಇನ್ನೊಂದು ಚೆಸ್ ಅಕಾಡೆಮಿ ಮತ್ತು ಪೋಲೆಂಡ್‌ನ ಗ್ರ್ಯಾಂಡ್‌ಮಾಸ್ಟರ್ ಜೊತೆ ಕೆಲಸ ಮಾಡುತ್ತಾರೆ. ನಮಗೆಲ್ಲರಿಗೂ ಒಂದು ಜವಾಬ್ದಾರಿಯಿದ್ದು, ಅದನ್ನು ನಾವು ಪೂರೈಸುತ್ತೇವೆ. ಮತ್ತು ಗುಕೇಶ್‌ಗಾಗಿ ಆಟದ ವಿವಿಧ ಭಾಗಗಳಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಜೊತೆಗೆ ಅವರಿಗೆ ಅಗತ್ಯ ಇರುವುದನ್ನು ಒದಗಿಸುತ್ತೇವೆ'' ಎಂದು ತಿಳಿಸಿದರು.
''ಆಟಗಾರರ ಆಟದ ಶೈಲಿ ಮತ್ತು ಮಾನಸಿಕವಾಗಿ ಉತ್ತಮ ಸ್ಥಿತಿಯಲ್ಲಿರುವುದು ಹೇಗೆ ಎಂದು ನಾವು ಚರ್ಚಿಸಿದ್ದೇವೆ. ಮತ್ತು ಇದುವರೆಗಿನ ಪಂದ್ಯಗಳು ಉತ್ತಮವಾಗಿದ್ದವು. ಆದರೆ, ಗ್ರ್ಯಾಂಡ್ ಮಾಸ್ಟರ್ ಡಿಂಗ್ ಲಿರೆನ್ ವಿರುದ್ಧದ ಪಂದ್ಯ ಸವಾಲಿನದ್ದಾಗಿದೆ ಎಂದು ಕೋಚ್ ಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ಇದು ಅತ್ಯಂತ ಸವಾಲಿನ ಸ್ಪರ್ಧೆಯಾಗಿದೆ ಮತ್ತು ಗುಕೇಶ್‌ಗೆ ಇದಕ್ಕಾಗಿ ತಯಾರಿ ನಡೆಸಲು ಕೆಲವು ತಿಂಗಳುಗಳಿವೆ. ಮತ್ತು ಗುಕೇಶ್ ವೇಗವಾಗಿ ಸುಧಾರಿಸುತ್ತಿರುವುದು ಒಳ್ಳೆಯದು. ಜನವರಿ ತಿಂಗಳಿಗೆ ಹೋಲಿಸಿದರೆ ಅವರು ಇದೀಗ ವಿಭಿನ್ನ ಆಟಗಾರ. ಗುಕೇಶ್ ಅವರು ಬಹಳ ವೇಗವಾಗಿ ಮುಂದೆ ಸಾಗುತ್ತಿದ್ದಾರೆ. ಗುಕೇಶ್ ಅವರ ನಿರೀಕ್ಷೆಯ ಬಗ್ಗೆ ನನಗೆ ಆಶಾವಾದವಿದೆ'' ಎಂದು ಪ್ರಸನ್ನ ಹೇಳಿದರು.
ಕಾರ್ಯತಂತ್ರ ರೂಪಿಸುತ್ತೇವೆ - ಕೋಚ್ ಪ್ರಸನ್ನ: ''ಮುಂದಿನ ಕೆಲವು ತಿಂಗಳುಗಳಲ್ಲಿ ನಾವು ಕಾರ್ಯತಂತ್ರ ರೂಪಿಸುತ್ತೇವೆ, ಸಿದ್ಧಪಡಿಸುತ್ತೇವೆ. ಮತ್ತು ಎದುರಾಳಿಗಳ ದೌರ್ಬಲ್ಯಗಳ ಮೇಲೆ ಕೆಲಸ ಮಾಡಲು ಪ್ರಯತ್ನಿಸುತ್ತೇವೆ. ಮತ್ತು ಗುಕೇಶ್ ಅವರಲ್ಲಿರುವ ಸಾಮರ್ಥ್ಯಗಳನ್ನು ಸುಧಾರಿಸುತ್ತೇವೆ. ಚೆನ್ನೈನಲ್ಲಿ ಇವೆಂಟ್ ನಡೆದರೆ ಗುಕೇಶ್‌ಗೆ ತುಂಬಾ ಅನುಕೂಲವಾಗಲಿದೆ'' ಎಂದೂ ಕೋಚ್ ಪ್ರಸನ್ನ ಹೇಳಿದ್ದಾರೆ.
ಇದನ್ನೂ ಓದಿ: ಫಿಡೆ ಕ್ಯಾಂಡಿಡೇಟ್ಸ್ ಚೆಸ್ ಟೂರ್ನಿ ಗೆದ್ದು ಚದುರಂಗದಾಟದಲ್ಲಿ ಚರಿತ್ರೆ ಸೃಷ್ಟಿಸಿದ 17ರ ಗುಕೇಶ್ - Grandmaster Gukesh