ಲಖನೌ: ಮಂಗಳವಾರ ನಡೆದ ಐಪಿಎಲ್ನ 48ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ ಲಖನೌ ಸೂಪರ್ ಜೈಂಟ್ಸ್ ತಂಡ 4 ವಿಕೆಟ್‌ಗಳಿಂದ ಗೆಲುವು ಸಾಧಿಸಿದೆ. ಟೂರ್ನಿಯಲ್ಲಿ 6ನೇ ಗೆಲುವು ದಾಖಲಿಸುವ ಮೂಲಕ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮತ್ತೊಂದೆಡೆ ಕಳಪೆ ಪ್ರದರ್ಶನದಿಂದ ಸತತ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ ಮುಂಬೈ ಪ್ಲೇ ಆಫ್ ರೇಸ್ನಿಂದ ಬಹುತೇಕ ಹೊರ ಬಿದ್ದಿದೆ.
ಲಖನೌದ ಅಟಲ್ ಬಿಹಾರಿ ವಾಜಪೇಯಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ್ದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿತು. ಇದಕ್ಕುತ್ತರವಾಗಿ ಲಕ್ನೋ 19.2 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಮಾರ್ಕಸ್ ಸ್ಟೊಯಿನಿಸ್ ಎರಡನೇ ಬಾರಿಗೆ ತಂಡಕ್ಕೆ ಗೆಲುವು ತಂದುಕೊಟ್ಟಿದ್ದಾರೆ. ಒಟ್ಟು 45 ಎಸೆತಗಳಲ್ಲಿ 62 ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಮತ್ತೊಂದೆಡೆ ನಾಯಕ ಕೆಎಲ್ ರಾಹುಲ್ (28), ದೀಪಕ್ ಹೂಡ (18), ಬಡೋನಿ (6), ಟರ್ನರ್ (5) ರನ್ ಕೊಡುಗೆ ನೀಡಿದರು. ಅಂತಿಮವಾಗಿ ನಿಕೋಲಸ್ ಪೂರನ್ (14*) ಮತ್ತು ಕೃನಾಲ್ ಪಾಂಡ್ಯ ಗೆಲುವಿನ ದಡ ಸೇರಿಸಿದರು. ಮುಂಬೈ ಪರ ನಾಯಕ ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.
ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ಮುಂಬೈ ಮತ್ತೊಮ್ಮೆ ಕಳಪೆ ಪ್ರದರ್ಶನ ತೋರಿತು. ಬರ್ತ್ ಡೇ ಬಾಯ್ ರೋಹಿತ್ ಶರ್ಮಾ (4) ಎರಡನೇ ಓವರ್ನಲ್ಲಿ ಪೆವಿಲಿಯನ್ಗೆ ಮರಳಿದರು. ಅದಾದ ಬಳಿಕ ಸೂರ್ಯಕುಮಾರ್ ಯಾದವ್ (10), ತಿಲಕ್ ವರ್ಮಾ (7) ನಾಯಕ ಹಾರ್ದಿಕ್ ಪಾಂಡ್ಯ ಖಾತೆ ತೆರೆಯದೇ ಪೆವಿಲಿಯನ್ ಪರೇಡ್ ಮಾಡಿದರು. ಪವರ್ ಪ್ಲೇನಲ್ಲೇ ತಂಡ 24 ರನ್ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡಿತು.
ಇಶಾನ್ ಕಿಶನ್ (36) ಐದನೇ ವಿಕೆಟ್‌ಗೆ ವಧೇರಾ ಅವರೊಂದಿಗೆ 53 ರನ್ ಜೊತೆಯಾಟ ಆಡಿ ನಿರ್ಗಮಿಸಿದರು. ಬಳಿಕ ವಡೇರಾ ಮತ್ತು ಟಿಮ್ ಡೇವಿಡ್ ಆರನೇ ವಿಕೆಟ್‌ಗೆ 32 ರನ್‌ಗಳ ಜೊತೆಯಾಟವಾಡಿ ತಂಡದ ಸ್ಕೋರ್ 140ರ ಗಡಿ ದಾಟಲು ನೆರವಾದರು. ಎಲ್‌ಎಸ್‌ಜಿ ಪರ ಎಂ. ಖಾನ್ ಎರಡು ವಿಕೆಟ್ ಪಡೆದರೆ, ಮಾರ್ಕಸ್ ಸ್ಟೊಯಿನಿಸ್, ನವೀನ್ ಉಲ್ಹಕ್, ಮಯಾಂಕ್ ಯಾದವ್ ಮತ್ತು ರವಿ ಬಿಷ್ಣೋಯ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಟಿ20 ವಿಶ್ವಕಪ್ ಮಾದರಿ ಹೇಗಿರಲಿದೆ? ಟೀಂ ಇಂಡಿಯಾದ ಅಭಿಯಾನ ಯಾವಾಗ ಶುರು? - T20 World Cup