ಲಖನೌ: ಸತತ ಗೆಲುವಿನ ಅಲೆಯಲ್ಲಿ ಮುನ್ನುಗ್ಗುತ್ತಿದ್ದ ಲಖನೌ ಸೂಪರ್ಜೈಂಟ್ಸ್ಗೆ, ಡೆಲ್ಲಿ ಕ್ಯಾಪಿಟಲ್ಸ್ ಬ್ರೇಕ್ ಹಾಕಿದೆ. ಇಲ್ಲಿನ ಏಕನಾ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭರ್ಜರಿ ಆಟವಾಡಿದ ರಿಷಭ್ ಪಂತ್ ಪಡೆ, ಕೆಎಲ್ ರಾಹುಲ್ ತಂಡದ ಎದುರು 6 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು.
ಕುಲದೀಪ್ ಯಾದವ್, ಖಲೀಲ್ ಅಹ್ಮದ್ ದಾಳಿಗೆ ಸಿಲುಕಿ 7 ವಿಕೆಟ್ಗೆ 167 ರನ್ ಗಳಿಸಿತು. ಇದನ್ನು ಡೆಲ್ಲಿ 18.1 ಓವರ್ನಲ್ಲಿ ದಾಟಿ ಗೆಲುವಿನ ನಗೆ ಬೀರಿತು. 94 ರನ್ಗೆ 7 ವಿಕೆಟ್ ಕಳೆದುಕೊಂಡು ತೀವ್ರ ಕುಸಿತ ಕಂಡಿದ್ದ ಲಖನೌ ತಂಡಕ್ಕೆ ಯುವ ಕ್ರಿಕೆಟಿಗ ಆಯುಷ್ ಬದೌನಿ ಬಾರಿಸಿದ ಅರ್ಧಶತಕ ವರವಾಯಿತು. ಇದಕ್ಕೆ ವಿರುದ್ಧವಾಗಿ ಜೇಕ್ ಫ್ರೇಸರ್ ಗಳಿಸಿದ ಅರ್ಧಶತಕ ಡೆಲ್ಲಿಗೆ ಸುಲಭ ಜಯ ತಂದುಕೊಟ್ಟಿತು.
ಜೇಕ್ - ಪಂತ್ ಡ್ಯಾಶಿಂಗ್ ಬ್ಯಾಟಿಂಗ್: ಲಖನೌ ನೀಡಿದ 167 ರನ್ಗಳ ಉತ್ತಮ ರನ್ ಗುರಿಯು ಡೆಲ್ಲಿ ತಂಡಕ್ಕೆ ಸವಾಲಾಗಲಿಲ್ಲ. ನ್ಯೂಜಿಲ್ಯಾಂಡ್ನ ಯುವ ಆಟಗಾರ, ಬಿಬಿಎಲ್ನ ಸಿಡಿಲಮರಿ ಜೇಕ್ ಫ್ರೇಸರ್ ಮೆಗರ್ಕ್ ಸಿಡಿಸಿದ ಅರ್ಧಶತಕ ಮತ್ತು ನಾಯಕ ರಿಷಭ್ ಪಂತ್ ಅವರ ಹೋರಾಟದ ಬ್ಯಾಟಿಂಗ್ ತಂಡಕ್ಕೆ ಸಲೀಸು ಗೆಲುವು ತಂದು ಕೊಟ್ಟಿತು.
ಜೇಕ್ 35 ಎಸೆತಗಳಲ್ಲಿ 55 ರನ್ ಬಾರಿಸಿದರೆ, ಪಂತ್ 24 ಎಸೆತಗಳಲ್ಲಿ 41 ರನ್ ಗಳಿಸಿದರು. ಇಬ್ಬರೂ ಸೇರಿ ಮೂರನೇ ವಿಕೆಟ್ಗೆ 77 ರನ್ಗಳ ಸಹಭಾಗಿತ್ವ ನೀಡಿದರು. ಆರಂಭಿಕ ಪೃಥ್ವಿ ಶಾ 32, ಟ್ರಿಸ್ಟನ್ ಸ್ಟಬ್ಸ್ 15, ಶಾಯ್ ಹೋಪ್ 11, ಡೇವಿಡ್ ವಾರ್ನರ್ 8 ರನ್ ಗಳಿಸಿದರು. ಲಖನೌ ಪರ ರವಿ ಬಿಷ್ಣೋಯಿ 2 ವಿಕೆಟ್ ಪಡೆದರು.
ಲಖನೌ ಕಟ್ಟಿ ಹಾಕಿದ ಡೆಲ್ಲಿ ಬೌಲರ್ಸ್: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಲಖನೌ ತಂಡಕ್ಕೆ ಕುಲದೀಪ್ ಯಾದವ್, ಖಲೀಲ್ ಅಹ್ಮದ್ ಮಾರಕವಾದರು. ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಸ್ಪಿನ್-ವೇಗಿ ಜೋಡಿ ಧೂಳೀಪಟ ಮಾಡಿತು. ಚೈನಾಮನ್ ಬೌಲರ್ ಕುಲದೀಪ್, ನಾಯಕ ಕೆಎಲ್ ರಾಹುಲ್, ಮಾರ್ಕ್ ಸ್ಟೊಯಿನೀಸ್, ನಿಕೋಲಸ್ ಪೂರನ್ರ ವಿಕೆಟ್ ಪಡೆದು ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಖಲೀಲ್ ಅಹ್ಮದ್ ಡಿ ಕಾಕ್ ಮತ್ತು ದೇವದತ್ ಪಡಿಕ್ಕಲ್ಗೆ ಪೆವಿಲಿಯನ್ ಹಾದಿ ತೋರಿಸಿದರು.
'ಆಯುಷ್' ನೀಡಿದ ಬದೌನಿ: ಇಬ್ಬರ ದಾಳಿಗೆ ಸಿಲುಕಿದ ತಂಡ 94 ರನ್ಗೆ 7 ವಿಕೆಟ್ ಕಳೆದುಕೊಂಡು 100 ರ ಗಡಿಯಲ್ಲಿ ಪತನವಾಗುವ ಆತಂಕದಲ್ಲಿದ್ದ ತಂಡವನ್ನು ಕ್ರಿಕೆಟ್ನ ಎಳಸು ಆಯುಷ್ ಬದೌನಿ ಮೇಲೆತ್ತಿದರು. ಅರ್ಷದ್ ಖಾನ್ (20) ಜೊತೆಗೂಡಿ 150 ರ ಗಡಿ ದಾಟಿಸಿದರು. 35 ಎಸೆತಗಳನ್ನು ಎದುರಿಸಿದ ಬದೌನಿ 55 ರನ್ ಗಳಿಸಿದರು. ನಾಯಕ ರಾಹುಲ್ 39, ಡಿ ಕಾಕ್ 19, ದೀಪಕ್ ಹೂಡಾ 10 ರನ್ ಗಳಿಸಿದರು.
ಇದನ್ನೂ ಓದಿ: ಪಾಂಡ್ಯ ಗೇಲಿ ಮಾಡಬೇಡಿ, ಅವರು ಭಾರತ ತಂಡದ ಸದಸ್ಯ: ಮುಂಬೈ ಫ್ಯಾನ್ಸ್‌ಗೆ ಬುದ್ಧಿ ಹೇಳಿದ ಕೊಹ್ಲಿ - Virat Kohli