ಆಂಟಿಗುವಾ: ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 50 ರನ್ಗಳಿಂದ ಮಣಿಸಿದ ಭಾರತ ಸೆಮಿಫೈನಲ್ ಸನಿಹದಲ್ಲಿದೆ. ಬಾಂಗ್ಲಾ ವಿರುದ್ಧ ಆಲ್ರೌಂಡರ್ ಪ್ರದರ್ಶನದ ಮೂಲಕ ಹಾರ್ದಿಕ್ ಪಾಂಡ್ಯ ಮಿಂಚಿದರು. ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದ ಪಾಂಡ್ಯ, ಇತ್ತೀಚೆಗೆ ತಾವೆದುರಿಸಿದ ಸವಾಲುಗಳ ಬಗ್ಗೆ ಮಾತನಾಡಿದರು.
2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಬೌಲಿಂಗ್ ವೇಳೆ ಎಡವಿದ್ದ ಪಾಂಡ್ಯ, ಗಾಯದಿಂದಾಗಿ ಕ್ರಿಕೆಟ್ನಿಂದ ದೂರವಾಗಿದ್ದರು. ತದನಂತರ ಐಪಿಎಲ್ ಮೂಲಕ ಕಮ್ಬ್ಯಾಕ್ ಮಾಡಿದ್ದರೂ ಸಹ, ಬ್ಯಾಟಿಂಗ್ ಹಾಗೂ ಮುಂಬೈ ಇಂಡಿಯನ್ಸ್ ನಾಯಕತ್ವದಲ್ಲಿ ವೈಫಲ್ಯ ಅನುಭವಿಸಿದ್ದರು. ಇದೀಗ ಟಿ20 ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಶನಿವಾರ ಬಾಂಗ್ಲಾದೇಶದ ಜೊತೆ ಅಂತಿಮ ಓವರ್ಗಳಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಅಜೇಯ ಅರ್ಧಶತಕ (50, 27 ಬಾಲ್) ಬಾರಿಸಿದ್ದರಲ್ಲದೆ, ಆರಂಭಿಕ ಆಟಗಾರ ಲಿಟನ್ ದಾಸ್ ವಿಕೆಟ್ ಪಡೆದು ಟೀಂ ಇಂಡಿಯಾಕ್ಕೆ ಆರಂಭಿಕ ಯಶಸ್ಸು ಒದಗಿಸಿದ್ದರು.
ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್, ''ನಾನು ದೇಶಕ್ಕಾಗಿ ಆಡಲು ಅದೃಷ್ಟಶಾಲಿಯಾಗಿದ್ದೇನೆ. ವಿಶ್ವಕಪ್ನಲ್ಲಿ ನನಗಾಗಿದ್ದು ವಿಚಿತ್ರ ಗಾಯ. ನಾನು ಆ ಟೂರ್ನಿಗೆ ಹಿಂತಿರುಗಲು ಬಯಸಿದ್ದೆ, ಆದರೆ ದೇವರ ಯೋಜನೆಗಳು ಬೇರೆಯದೇ ಆಗಿದ್ದವು'' ಎಂದರು.
''ಕಷ್ಟಪಟ್ಟು ಕೆಲಸ ಮಾಡುವವರಿಗೆ ಅದೃಷ್ಟವೂ ಬರುತ್ತದೆ ಎಂದು ನಮ್ಮ ಕೋಚ್ ರಾಹುಲ್ ಸರ್ ಅವರು ನನಗೆ ಹೇಳುತ್ತಿದ್ದರು. ನಾವು ಉತ್ತಮ ಕ್ರಿಕೆಟ್ ಆಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರೂ ಒಟ್ಟಾಗಿ ನಮ್ಮ ಪ್ಲಾನ್ಗಳನ್ನು ಕಾರ್ಯಗತಗೊಳಿಸಿದ್ದೇವೆ'' ಎಂದು ತಿಳಿಸಿದರು.
ಪಾಂಡ್ಯ ಈ ಹಿಂದೆಯೂ ಕೂಡ ತಂಡ ಒತ್ತಡಲ್ಲಿದ್ದಾಗ ಆಧಾರಸ್ತಂಭವಾಗಿ ನಿಂತ ಹಲವು ಉದಾಹರಣೆಗಳಿವೆ. 2022ರ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಮೆಲ್ಬೋರ್ನ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಜೊತೆ ಅಮೋಘ ಜೊತೆಯಾಟದಲ್ಲಿ ಅವರು ಭಾಗಿಯಾಗಿದ್ದರು. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಬಾಂಗ್ಲಾ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ಪಾಂಡ್ಯ ಅರ್ಧಶತಕ ಮತ್ತು ವಿರಾಟ್ ಕೊಹ್ಲಿ (37), ರಿಷಬ್ ಪಂತ್ (36) ಮತ್ತು ಶಿವಂ ದುಬೆ (34) ಅವರ ಬ್ಯಾಟಿಂಗ್ ಕೊಡುಗೆಗಳಿಂದ 5 ವಿಕೆಟ್‌ಗೆ 196 ರನ್ ಗಳಿಸಿತ್ತು. ಬಳಿಕ ಬೌಲರ್ಗಳು ಶಿಸ್ತಿನ ದಾಳಿ ನಡೆಸಿ ಬಾಂಗ್ಲಾವನ್ನು 146 ರನ್ಗಳಿಗೆ ನಿಯಂತ್ರಿಸಿದರು. ಈ ಮೂಲಕ 50 ರನ್ಗಳ ಸುಲಭ ಜಯ ಭಾರತದ್ದಾಯಿತು.
ಸೂಪರ್-8 ಹಂತದ ಕೊನೆಯ ಪಂದ್ಯವನ್ನು ಭಾರತ ಜೂನ್ 24ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.
ಇದನ್ನೂ ಓದಿ: ಹಾರ್ದಿಕ್ ಆಲ್ರೌಂಡರ್ ಆಟಕ್ಕೆ ಮಣಿದ ಬಾಂಗ್ಲಾ: ಸೆಮಿಫೈನಲ್ಗೆ ಭಾರತ ಮತ್ತಷ್ಟು ಸನಿಹ - India Beat Bangladesh