ಕೋಲ್ಕತ್ತಾ: ಹೊಡಿಬಡಿ ಆಟವಾದ ಟಿ20, ಕ್ರಿಕೆಟ್ ಸ್ವರೂಪವನ್ನೇ ಬದಲಿಸಿದೆ. ಅದರಲ್ಲೂ, ಐಪಿಎಲ್ನಲ್ಲಿ ದಿನಕ್ಕೊಂದು ದಾಖಲೆಗಳು ಸೃಷ್ಟಿಯಾಗುತ್ತಿವೆ. 287 ರನ್ ಸಿಡಿಸುವ ಮೂಲಕ ಅತಿ ಹೆಚ್ಚು ರನ್ ಪೇರಿಸಿದ ಸನ್ರೈಸರ್ಸ್ ಹೈದರಾಬಾದ್ ದಾಖಲೆ ಬರೆದಿತ್ತು. ಈಗ ಪಂಜಾಬ್ ಕಿಂಗ್ಸ್ ಅತಿ ಹೆಚ್ಚು ರನ್ ಚೇಸ್ ಮಾಡಿ ಗೆದ್ದು ವಿಶ್ವದಾಖಲೆ ಸೃಷ್ಟಿಸಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ಪಂಜಾಬ್ ಕಿಂಗ್ಸ್ ಟಿ-20 ಕ್ರಿಕೆಟ್ನ ಅಪ್ಪಟ ಸೊಬಗನ್ನು ಪರಿಚಯಿಸಿತು. ಟೂರ್ನಿಯಲ್ಲಿ ಭರ್ಜರಿ ಲಯದಲ್ಲಿರುವ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಚೆಂಡಾಡಿತು. ಕೆಕೆಆರ್ ನೀಡಿದ್ದ ಬೆಟ್ಟದಂತಹ 261 ರನ್ ಗುರಿಯನ್ನು ಇನ್ನೂ 8 ಬಾಲ್ಗಳು(18.4) ಉಳಿದಿರುವಂತೆಯೇ ಗುರಿ ಮುಟ್ಟಿ ಇತಿಹಾಸ ಬರೆಯಿತು.
ಬ್ಯಾಟಿಂಗೇ ಎಲ್ಲ, ಬೌಲಿಂಗ್ ಲೆಕ್ಕಕ್ಕಿಲ್ಲ: ಈ ಋತುವಿನ ಐಪಿಎಲ್ನಲ್ಲಿ ನಿಜಕ್ಕೂ ಬೌಲರ್ಗಳ ಬಗ್ಗೆ ಅನುಕಂಪ ಮೂಡುತ್ತದೆ. ಪ್ರತಿ ಪಂದ್ಯದಲ್ಲೂ ಯಾವುದೇ ತಂಡದ ಬೌಲರ್ ದಂಡನೆಗೆ ಗುರಿಯಾಗುತ್ತಿದ್ದಾನೆ. ಅದೆಷ್ಟೇ ಚಾಕಚಕತ್ಯೆಯಿಂದ ಬೌಲಿಂಗ್ ಮಾಡಿದರೂ, ಬ್ಯಾಟಿಂಗ್ ಪರಾಕ್ರಮದ ಮುಂದೆ ಸೆಡ್ಡು ಹೊಡೆಯಲಾಗುತ್ತಿಲ್ಲ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ಗೆ ಫಿಲಿಪ್ ಸಾಲ್ಟ್, ಸುನಿಲ್ ನರೈನ್ ಮತ್ತೊಮ್ಮೆ ದೈತ್ಯ ಇನಿಂಗ್ಸ್ ಕಟ್ಟಿ ನೆರವಾದರು. ಸಾಲ್ಟ್ 37 ಎಸೆತಗಳಲ್ಲಿ 75 ರನ್ ಸಿಡಿಸಿದರು. ತಾನು ಬ್ಯಾಟರ್ರೋ, ಬೌಲರ್ರೋ ಎಂಬುದನ್ನೇ ಮರೆತಿರುವ ನರೈನ್ ಪಂಜಾಬ್ ಬೌಲರ್ಗಳನ್ನು ಚಚ್ಚಿ 32 ಎಸೆತಗಳಲ್ಲಿ 71 ರನ್ ಸಿಡಿಸಿದರು. ಮೊದಲ ವಿಕೆಟ್ಗೆ ಇಬ್ಬರೂ ಸೇರಿ 10 ಓವರ್ಗಳಲ್ಲಿ 138 ರನ್ ಗಳಿಸಿದರು. ಇದರ ಬಳಿಕ ಬಂದ ವೆಂಕಟೇಶ್ ಅಯ್ಯರ್ 39, ಆಂಡ್ರೆ ರಸೆಲ್ 24, ನಾಯಕ ಶ್ರೇಯಸ್ ಅಯ್ಯರ್ 28 ರನ್ ಗಳಿಸಿದರು. ಇದರಿಂದ ತಂಡ 20 ಓವರ್ಗಳಲ್ಲಿ 6 ವಿಕೆಟ್ಗೆ 261 ರನ್ ಪೇರಿಸಿತು.
ಗುರಿ ಮುಖ್ಯವಲ್ಲ, ಗೆಲುವು ನಮ್ದೇ: 261 ರನ್ಗಳ ಅಸಾಧ್ಯ ಗುರಿಯನ್ನು ಪಡೆದ ಬಳಿಕ ಯಾವುದೇ ತಂಡವಾದರೂ ತುಸು ಧೃತಿಗೆಡುವುದು ಸಹಜ. ಆದರೆ, ಇದ್ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಪಂಜಾಬ್ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿತು. ಆರಂಭಿಕನಾಗಿ ಬಂದ ಪ್ರಭ್ಸಿಮ್ರಾನ್ ಸಿಂಗ್ 20 ಎಸೆತಗಳಲ್ಲಿ 54 ಸಿಡಿಸಿದರು. ಇಂಗ್ಲೆಂಡ್ ಹಿರಿಯ ಆಟಗಾರ ಜಾನಿ ಬೈರ್ಸ್ಟೋವ್ ಕೆಚ್ಚೆದೆಯ ಬ್ಯಾಟ್ ಬೀಸಿ 48 ಎಸೆತಗಳಲ್ಲಿ 108 ರನ್ ಗಳಿಸಿದರು. ಇಬ್ಬರೂ ಸೇರಿ 6 ಓವರ್ಗಳ ಪವರ್ಪ್ಲೇನಲ್ಲಿ 93 ರನ್ ಕಲೆ ಹಾಕಿದರು. ರಿಲೆ ರೋಸ್ಸೊ 26, ಶಶಾಂಕ್ ಸಿಂಗ್ 68 ರನ್ ಚಚ್ಚುವ ಮೂಲಕ 18.4 ಓವರ್ಗಳಲ್ಲಿ ಗೆಲುವಿನ ಗುರಿಯನ್ನು ಮುಟ್ಟಿಸಿದರು.
ವಿಶ್ವದಾಖಲೆ ಸೃಷ್ಟಿ: ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಟಿ20 ಇತಿಹಾಸದಲ್ಲಿಯೇ ವಿಶ್ವದಾಖಲೆ ಸೃಷ್ಟಿಸಿತು. 262 ದಾಖಲಿಸುವ ಮೂಲಕ 2023 ರಲ್ಲಿ ದಕ್ಷಿಣ ಆಫ್ರಿಕಾದ ಹೆಸರಿನಲ್ಲಿ 259 ನರ್ ಚೇಸಿಂಗ್ ದಾಖಲೆಯನ್ನು ಮುರಿಯಿತು. ಐಪಿಎಲ್ನಲ್ಲಿ 224 ರನ್ ಚೇಸ್ ಮಾಡಿದ್ದೇ ಅತ್ಯಧಿಕವಾಗಿತ್ತು. ಆ ದಾಖಲೆಯೂ ಉಡೀಸ್ ಆಯಿತು. ಪಂದ್ಯದಲ್ಲಿ ಬರೋಬ್ಬರಿ 523 ರನ್ ದಾಖಲಾಗಿ 2ನೇ ಅತ್ಯಧಿಕ, ಇತ್ತಂಡಗಳು ಸಿಡಿಸಿದ 42 ಸಿಕ್ಸರ್ ಟಿ20 ಕ್ರಿಕೆಟ್ನ ಪಂದ್ಯವೊಂದರಲ್ಲಿ ದಾಖಲಾದ ಅತ್ಯಧಿಕ ಸಿಕ್ಸರ್ ಎನಿಸಿಕೊಂಡಿತು.
ಇನ್ನೂ, ಈ ಬಾರಿಯ ಐಪಿಎಲ್ನಲ್ಲಿ 250 ಕ್ಕೂ ಅಧಿಕ ರನ್ಗಳು ಬಂದಿದ್ದು ಇದು 7ನೇ ಬಾರಿ. ಐಪಿಎಲ್ ಆರಂಭವಾದ 2008 ರಿಂದ 2023 ರವರೆಗೂ ಕೇವಲ 2 ಬಾರಿ ಮಾತ್ರ 250+ ರನ್ ದಾಖಲಾಗಿದ್ದವು. ಈ ದಾಖಲೆ ಒಂದೇ ಋತುವಿನಲ್ಲಿ ಮುರಿಯಿತು.
ಇದನ್ನೂ ಓದಿ: ಹೈದರಾಬಾದ್ಗೆ 35 ರನ್ ಸೋಲು: 6 ಸೋಲಿನ ಬಳಿಕ ಆರ್ಸಿಬಿಗೆ ಮೊದಲ ಜಯ, ಫ್ಯಾನ್ಸ್ ಖುಷ್ - RCB vs SH match