ಹುಬ್ಬಳ್ಳಿ: ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಪ್ರತಿಭಾವಂತ ಬಡ ವಿದ್ಯಾರ್ಥಿಯೊಬ್ಬನ ಎರಡನೇ ವರ್ಷದ ಶೈಕ್ಷಣಿಕ ಶುಲ್ಕ ಪಾವತಿಸಿ, ಈ ಹಿಂದೆ ಕೊಟ್ಟ ಭರವಸೆ ಈಡೇರಿಸಿದ್ದಾರೆ.
ಕೆಎಲ್‌ಇ ತಾಂತ್ರಿಕ ವಿವಿಯದಲ್ಲಿ ಬಿ.ಕಾಂ ಪದವಿ ವ್ಯಾಸಂಗ ಮಾಡುತ್ತಿರುವ ಅಮೃತ ಮಾವಿನಕಟ್ಟಿ ಎಂಬ ವಿದ್ಯಾರ್ಥಿಯ 2ನೇ ವರ್ಷದ ಶುಲ್ಕವನ್ನು ರಾಹುಲ್ ಪಾವತಿಸಿದ್ದಾರೆ. 3 ಮತ್ತು 4ನೇ ಸೆಮಿಸ್ಟರ್‌ಗಾಗಿ 75,504ರೂ. ಶುಲ್ಕವನ್ನು ಅವರು ಪಾವತಿಸಿದ್ದಾರೆ. ಕಳೆದ ವರ್ಷ ಬಿ.ಕಾಂ ಮೊದಲ ವರ್ಷದ ಶುಲ್ಕ ಪಾವತಿಸಿದ್ದ ಸಂದರ್ಭದಲ್ಲಿ ರಾಹುಲ್, ಎರಡನೇ ವರ್ಷದ ಶುಲ್ಕ ಭರಿಸುವುದಾಗಿಯೂ ಭರವಸೆ ನೀಡಿದ್ದರು.
ಅಮೃತ ಮಾವಿನಕಟ್ಟಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದವರು. ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ದೊಡ್ಡ ಕಾಲೇಜಿನಲ್ಲಿ ಕಲಿಯಬೇಕೆನ್ನುವ ಮಹದಾಸೆ ಹೊಂದಿದ್ದರು. ವಿದ್ಯಾರ್ಥಿಯ ಪ್ರತಿಭೆ ಗಮನಿಸಿದ ರಾಹುಲ್ ನೆರವಿನ ಹಸ್ತ ಚಾಚಿದ್ದಾರೆ. ಪ್ರಥಮ ವರ್ಷದ ಬಿ.ಕಾಂ ಪರೀಕ್ಷೆಯಲ್ಲಿ ಅಮೃತ 9.3 ಸಿಜಿಪಿಎ (ಶೇ.93)ಸಾಧಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಅಮೃತ ಮಾವಿನಕಟ್ಟೆ, "ರಾಹುಲ್ ಸರ್ ಒಳ್ಳೆಯ ಉದ್ದೇಶ ಇಟ್ಟುಕೊಂಡು ನನಗೆ ನೆರವು ನೀಡಿದ್ದಾರೆ. ಮುಂದೆ ಇದಕ್ಕಿಂತ ಹೆಚ್ಚು ಅಂಕ ಪಡೆಯುವ ಮೂಲಕ ಅವರ ಹೆಸರು ಉಳಿಸುತ್ತೇನೆ" ಎಂದರು.
ಸಮಾಜ ಸೇವಕ ಮಂಜುನಾಥ ಹೆಬಸೂರ ಎಂಬವರು ರಾಹುಲ್ ಅವರ ಇಂಜಿನಿಯರಿಂಗ್ ಸ್ನೇಹಿತರಾದ ಅಕ್ಷಯ್ ಮೂಲಕ ಅವರನ್ನು ಸಂಪರ್ಕಿಸಿದ್ದರು. ಈ ವೇಳೆ ವಿದ್ಯಾರ್ಥಿ ಕುರಿತು ತಿಳಿಸಿದ್ದರು. ಕೂಡಲೇ ಸ್ಪಂದಿಸಿದ ರಾಹುಲ್, ಮೊದಲನೇ ವರ್ಷದ ಕಾಲೇಜಿನ ಪೂರ್ತಿ ಶುಲ್ಕ ಭರಿಸಿದ್ದರು. ಅದೇ ರೀತಿ ಈಗ ಎರಡನೇ ವರ್ಷದ ಶುಲ್ಕವನ್ನೂ ಪಾವತಿಸಿದ್ದಾರೆ.
ವಿದ್ಯಾರ್ಥಿಗೆ ತಾಯಿ ಇಲ್ಲ. ದುಡಿಮೆಯಿಲ್ಲದ ತಂದೆ ಕುಟುಂಬದ ಪರಿಸ್ಥಿತಿ ಅರಿತು ದಾನಿಗಳ ನೆರವಿನೊಂದಿಗೆ ಓದಿಸುವ ನಿರ್ಧಾರಕ್ಕೆ ಬಂದಿದ್ದರು.
ಇದನ್ನೂ ಓದಿ: ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಮಗನಿಗೆ ಸರ್ಕಾರ ₹5 ಕೋಟಿ, ಫ್ಲ್ಯಾಟ್ ನೀಡಬೇಕು: ತಂದೆಯ ಬೇಡಿಕೆ