ನವದೆಹಲಿ: 1983ರ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಅವರು ಕ್ರೀಡೆಯಲ್ಲಿ ಮತ್ತೊಂದು ಇನಿಂಗ್ಸ್ ಆರಂಭಿಸಿದ್ದಾರೆ. ಆದರೆ, ಅದು ಕ್ರಿಕೆಟ್ ಅಲ್ಲ, ಗಾಲ್ಫ್ ಎನ್ನುವುದು ವಿಶೇಷ. ಭಾರತದ ವೃತ್ತಿಪರ ಗಾಲ್ಫ್ ಸಂಸ್ಥೆಯ (ಪಿಜಿಟಿಐ) ಹೊಸ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕಪಿಲ್ ದೇವ್ ಸ್ವತಃ ಗಾಲ್ಫ್ ಆಟಗಾರರೂ ಹೌದು.
ವೃತ್ತಿಪರ ಗಾಲ್ಫ್ ಟೂರ್ ಆಫ್ ಇಂಡಿಯಾದ ಉಪಾಧ್ಯಕ್ಷರಾಗಿದ್ದ ಕಪಿಲ್ ದೇವ್ ಅವರು ಅಧ್ಯಕ್ಷರಾಗಿ ಪದೋನ್ನತಿ ಪಡೆದಿದ್ದಾರೆ. ಹಾಲಿ ಅಧ್ಯಕ್ಷರಾಗಿದ್ದ ಎಚ್.ಆರ್.ಶ್ರೀನಿವಾಸನ್ ಅಧಿಕಾರವಧಿ ಕೊನೆಗೊಂಡಿದ್ದು, ಅವರ ಸ್ಥಾನಕ್ಕೆ ದಿಗ್ಗಜ ಕ್ರಿಕೆಟಿಗನನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಗೌರವ ಸಿಕ್ಕಿದ್ದು ಸಂತಸ ತಂದಿದೆ: ಅಧ್ಯಕ್ಷರಾಗಿ ಆಯ್ಕೆಯಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ಕಪಿಲ್, "ನಾನು ಕೆಲವು ವರ್ಷಗಳಿಂದ ಗಾಲ್ಫ್ ಸಂಸ್ಥೆಯ ಜೊತೆಗೆ ಸಂಬಂಧ ಹೊಂದಿದ್ದೇನೆ. ಮಂಡಳಿಯ ಸದಸ್ಯ, ಉಪಾಧ್ಯಕ್ಷ ಸ್ಥಾನದ ಬಳಿಕ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ಹವ್ಯಾಸಿ ಆಟಗಾರನಾಗಿರುವ ನನಗೆ ಸಂಸ್ಥೆಯ ಹೊಣೆಗಾರಿಕೆಯಂತಹ ದೊಡ್ಡ ಗೌರವ ಸಿಕ್ಕಿದೆ. ಇದೊಂದು ಉತ್ತಮ ಆಟಗಾರರ ಸಂಸ್ಥೆ. ಇಲ್ಲಿರುವ ಆಟಗಾರರು ನನಗೆ ಉತ್ತಮ ಸ್ನೇಹಿತರು" ಎಂದಿದ್ದಾರೆ.
World Cup-winning former India cricket captain Kapil Dev has taken over as the President of the Professional Golf Tour of India (PGTI). This development marks a new chapter for us at the PGTI!
— PGTI (@pgtofindia) June 26, 2024
Mr. Kapil Dev, who has also excelled as an amateur golfer, has been the Vice President. pic.twitter.com/7Ro0cvGXsS
"ಮೂರು ದಶಕಗಳಿಂದ ನಾನು ಗಾಲ್ಫ್ ಆಟದಲ್ಲಿ ತೊಡಗಿಸಿಕೊಂಡಿದ್ದೇನೆ. ಇದು ನನ್ನ ಹವ್ಯಾಸಿ ಕ್ರೀಡೆಯಾಗಿದೆ. ಏಷ್ಯನ್ ಗೇಮ್ಸ್ನಲ್ಲಿ ಭಾರತ ಗಾಲ್ಫ್ ತಂಡವನ್ನು ಪ್ರತಿನಿಧಿಸುವ ಆಸೆಯಿತ್ತು. ಅದು ಸಾಧ್ಯವಾಗಿಲ್ಲವಾದರೂ, ಕ್ರೀಡೆಯಲ್ಲಿ ನಾನು ಹೆಚ್ಚಿನ ಸಮಯ ಕಳೆಯುತ್ತೇನೆ. ಸದಸ್ಯನಿಂದ ಅಧ್ಯಕ್ಷನವರೆಗೆ ಆಯ್ಕೆಯಾಗಿದ್ದು, ಸಂಸ್ಥೆಯ ಏಳಿಗೆಗೆ ಶ್ರಮಿಸುತ್ತೇನೆ" ಎಂದು ತಿಳಿಸಿದ್ದಾರೆ.
ಕಪಿಲ್ ದೇವ್ ಅವರ ಜೊತೆಗೆ ಮಾಜಿ ಕ್ರೀಡಾಪಟುಗಳಾದ ಜೀವ್ ಮಿಲ್ಕಾ ಸಿಂಗ್, ಅರ್ಜುನ್ ಅತ್ವಾಲ್, ಜ್ಯೋತಿ ರಾಂಧವಾ, ಶಿವ ಕಪೂರ್ ಮತ್ತಿತರರು ಗಾಲ್ಫ್ ಸ್ನೇಹಿತರಾಗಿದ್ದಾರೆ. ಸಂಸ್ಥೆಗೆ ಆದಾಯ ಮತ್ತು ಪ್ರಾಯೋಜಕತ್ವ ತರುವಲ್ಲಿಯೂ ಕಪಿಲ್ ಹೆಚ್ಚಿನ ಶ್ರಮ ವಹಿಸಿದ್ದಾರೆ.
ದಿಗ್ಗಜ ಆಟಗಾರ ಕಪಿಲ್ ದೇವ್ 1978ರಿಂದ 1994ರವರೆಗೆ ಭಾರತದ ಪರ ಕ್ರಿಕೆಟ್ ಆಡಿದ್ದರು. ಸಾರ್ವಕಾಲಿಕ ಶ್ರೇಷ್ಠ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಅವರು 131 ಟೆಸ್ಟ್, 225 ಏಕದಿನ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. 1983ರ ವಿಶ್ವಕಪ್ ತಂಡದ ನಾಯಕರಾಗಿ ಚೊಚ್ಚಲ ಬಾರಿಗೆ ದೇಶಕ್ಕೆ ಪ್ರಶಸ್ತಿ ಜಯಿಸಿಕೊಟ್ಟಿದ್ದರು.