ನವದೆಹಲಿ : ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿನೂತನ ಸಾಧನೆಯೊಂದನ್ನು ಮಾಡಿದ್ದಾರೆ. ಕ್ರಿಕೆಟ್ನ ಮೂರು ಮಾದರಿಗಳಲ್ಲಿ ನಂಬರ್ 1 ವೇಗದ ಬೌಲರ್ ಪಟ್ಟವನ್ನು ಅಲಂಕರಿಸಿದ್ದಾರೆ. ಅಲ್ಲದೆ ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಮೊದಲ ವೇಗಿ ಎಂಬ ಹೆಗ್ಗಳಿಕೆಗೆ ಬುಮ್ರಾ ಪಾತ್ರರಾಗಿದ್ದಾರೆ.
ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಟೆಸ್ಟ್ ಪಂದ್ಯಗಳ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಬುಮ್ರಾ 9 ವಿಕೆಟ್ ಪಡೆಯುವ ಮೂಲಕ ಈ ವಿಶ್ವ ದಾಖಲೆಯನ್ನು ಸುವರ್ಣಾಕ್ಷರಗಳಲ್ಲಿ ದಾಖಲಿಸಿದ್ದಾರೆ.
ಇದರ ಬೆನ್ನೆಲ್ಲೇ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂನಲ್ಲಿ ಜಸ್ಪ್ರೀತ್ ಬುಮ್ರಾ ಭಾವನಾತ್ಮಕ ಸ್ಟೋರಿವೊಂದನ್ನು ಹಂಚಿಕೊಂಡಿದ್ದಾರೆ. ಈ ಸ್ಟೋರಿ ನೋಡಿದ ಕೆಲವು ಕ್ರಿಕೆಟ್ ಅಭಿಮಾನಿಗಳು ಭಾವುಕರಾಗಿದ್ದಾರೆ. ಹೌದು, ಎರಡು ಚಿತ್ರಗಳಿರುವ ಫೋಟೋ ವಿಭಿನ್ನ ಕಥೆಗಳನ್ನು ಹೇಳಿತ್ತಿದೆ. ಒಂದು ಚಿತ್ರದಲ್ಲಿ ಒಂಟಿ ವ್ಯಕ್ತಿ ಮತ್ತು ಇನ್ನೊಂದು ಫೋಟೋದಲ್ಲಿ ದೊಡ್ಡ ಗುಂಪು ಇರುವುದನ್ನು ಗಮನಿಸಬಹುದು. ಚಿತ್ರಗಳ ಕೆಳಗೆ ಬೆಂಬಲ ಮತ್ತು ಅಭಿನಂದನೆಗಳು ಎಂದು ಅಡಿ ಬರಹ ಕೂಡಾ ಹಾಕಿದ್ದಾರೆ. ಒಬ್ಬನೇ ವ್ಯಕ್ತಿ ಇರುವ ಫೋಟೋವನ್ನು ಬೆಂಬಲ ಮತ್ತು ಜನಸಂದಣಿ ಇರುವ ಫೋಟೋವನ್ನು ಅಭಿನಂದನೆ ಎಂದು ಬುಮ್ರಾ ಹೇಳಿದ್ದಾರೆ.
ನೀವು ಕಷ್ಟದಲ್ಲಿರುವಾಗ ಅಥವಾ ಕೆಟ್ಟ ಸಮಯದಲ್ಲಿ ನಿಮ್ಮನ್ನು ಬೆಂಬಲಿಸಲು ಜನರು ಇರುವುದಿಲ್ಲ ಅಥವಾ ಕೆಲವೇ ಜನರಿರುತ್ತಾರೆ. ಅದೇ ಸಮಯದಲ್ಲಿ ನೀವು ಯಶಸ್ವಿಯಾದಾಗ ನಿಮ್ಮನ್ನು ಅಭಿನಂದಿಸಲು ಸಾಕಷ್ಟು ಜನರು ನಿಮ್ಮೊಂದಿಗೆ ಇರುತ್ತಾರೆ ಎಂಬುದು ಇದರ ಅರ್ಥವಾಗಿದೆ.
ಕಳೆದ ವರ್ಷ ನಡೆದ 2023ರ ಏಷ್ಯಾಕಪ್ ವೇಳೆ ದೀರ್ಘಕಾಲದ ಗಾಯದ ನಂತರ ಜಸ್ಪ್ರೀತ್ ಬುಮ್ರಾ ತಂಡಕ್ಕೆ ಮರಳಿದ್ದರು. ಏಕದಿನ ವಿಶ್ವಕಪ್ನಲ್ಲಿಯೂ ಅದ್ಭುತ ಪ್ರದರ್ಶನ ತೋರಿದ್ದಾರೆ. ತಮ್ಮ ಆಕ್ರಮಣಕಾರಿ ಬೌಲಿಂಗ್ನಿಂದಲೇ ಘಟಾನುಘಟಿ ಬ್ಯಾಟರ್ಗಳ ವಿಕೆಟ್ ಉರುಳಿಸಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನಲ್ಲಿಯೂ ಸಹಾ ಬುಮ್ರಾ ಯಶಸ್ವಿ ವೇಗದ ಬೌಲರ್ ಆಗಿ ಹೊರ ಹೊಮ್ಮಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಅವರ ಪ್ರದರ್ಶನದಿಂದಾಗಿ ಅಭಿಮಾನಿಗಳು ಸಹ ಬುಮ್ರಾಗೆ ಹೆಚ್ಚಿನ ಪ್ರೀತಿಯನ್ನು ತೋರಿಸುತ್ತಿದ್ದಾರೆ. ಫೆಬ್ರವರಿ 15 ರಿಂದ ರಾಜ್‌ಕೋಟ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಮೂರನೇ ಟೆಸ್ಟ್ ಪಂದ್ಯವನ್ನು ಆಡಲಿದೆ. ಸದ್ಯ ಐದು ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ.
ಇದನ್ನೂ ಓದಿ : ಟೆಸ್ಟ್‌ನಲ್ಲಿ ಬುಮ್ರಾ ನಂ.1 ವೇಗದ ಬೌಲರ್! ಈ ಸಾಧನೆ ಮಾಡಿದ ಭಾರತದ ಮೊದಲ ಕ್ರಿಕೆಟಿಗ