ನವದೆಹಲಿ: ಟೀಂ ಇಂಡಿಯಾದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತಂಡೂಲ್ಕರ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಅದರಲ್ಲೂ ಕೆಲವು ದಾಖಲೆಗಳಂತೂ ಯಾರಿಂದಲೂ ಮುರಿಯಲು ಸಾಧ್ಯವೇ ಇಲ್ಲ ಎಂಬುದು ಕ್ರಿಕೆಟ್ ಪಂಡಿತರ ಮಾತು. ಆದರೆ ಈ ಹಿಂದೆ ತೆಂಡೂಲ್ಕರ್ ಮಾತನಾಡುತ್ತಾ, ನನ್ನ ದಾಖಲೆಗಳನ್ನು ಪುಡಿಗಟ್ಟಲು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾರಿಗೆ ಸಾಧ್ಯ ಎಂದು ಹೇಳಿದ್ದರು.
1. ಟೆಸ್ಟ್ನಲ್ಲಿ ಅತೀ ಹೆಚ್ಚು ರನ್: ಟೆಸ್ಟ್ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್ 15,921 ರನ್ ಗಳಿಸಿದ್ದಾರೆ. ಆದರೆ ಈ ದಾಖಲೆ ಬ್ರೇಕ್ ಮಾಡಲು ಕೊಹ್ಲಿಗೆ ಇನ್ನೂ ಕೆಲವು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರಿಯಬೇಕು. ಸದ್ಯ ಅವರಿಗೆ 35 ವರ್ಷ. ಹೆಚ್ಚೆಂದರೇ ಇನ್ನೂ ಮೂರು ಮತ್ತು ನಾಲ್ಕು ವರ್ಷಗಳ ಕಾಲ ಕ್ರಿಕೆಟ್‌ನಲ್ಲಿ ಮುಂದುವರೆಯಬಹುದು. ಆದರೆ ಈ ಅವಧಿಯಲ್ಲಿ ದಾಖಲೆ ಮುರಿಯುವಷ್ಟು ಟೆಸ್ಟ್ ಪಂದ್ಯಗಳು ಭಾರತ ಆಡುವುದಿಲ್ಲ. ಕೊಹ್ಲಿ ಟೆಸ್ಟ್ನಲ್ಲಿ 8,848 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಸಚಿನ್ ದಾಖಲೆ ಮುರಿಯಬೇಕಾದರೆ ವೇಗದ ಪ್ರದರ್ಶನ ಅಗತ್ಯ.
ಆದರೆ, ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ದೀರ್ಘ ಸ್ವರೂಪದ ಆಟದಲ್ಲಿ 12,131 ರನ್ ಗಳಿಸಿದ್ದಾರೆ. ಅವರು ಸಚಿನ್ ದಾಖಲೆ ತಲುಪಲು ಇನ್ನೂ 3,790 ರನ್‌ಗಳ ದೂರದಲ್ಲಿದ್ದಾರೆ. ಇದನ್ನು ಪೂರ್ಣಗೊಳಿಸಲು ಕನಿಷ್ಠ 40 ಟೆಸ್ಟ್ ಪಂದ್ಯಗಳನ್ನು ಅವರು ಆಡಬೇಕು.
2. ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಡಿರುವ ಪಂದ್ಯಗಳು: ಸಚಿನ್ ಎಲ್ಲಾ ಮೂರು ಸ್ವರೂಪದ ಕ್ರಿಕೆಟ್‌ನಲ್ಲಿ ಒಟ್ಟು 664 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಕೊಹ್ಲಿ 533 ಪಂದ್ಯಗಳನ್ನು ಆಡಿದ್ದಾರೆ. ಅಂದರೆ ಕೊಹ್ಲಿ 133 ಪಂದ್ಯಗಳಷ್ಟು ಹಿಂದಿದ್ದಾರೆ. ಇತ್ತೀಚೆಗೆ ಟಿ20 ಸ್ವರೂಪಕ್ಕೆ ವಿದಾಯ ಹೇಳಿರುವ ಅವರು ಏಕದಿನ ಮತ್ತು ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಮುಂದುವರೆಯುತ್ತಿದ್ದಾರೆ. ಹಾಗಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದ ಸಚಿನ್ ದಾಖಲೆಯನ್ನು ಮುರಿಯುವುದು ಅಷ್ಟು ಸುಲಭದ ಕೆಲಸವಲ್ಲ.
3. ಅತ್ಯಧಿಕ ಟೆಸ್ಟ್ ಪಂದ್ಯಗಳು: 200 ಟೆಸ್ಟ್ ಪಂದ್ಯಗಳನ್ನಾಡಿದ ವಿಶ್ವದ ಏಕೈಕ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್. ರೆಡ್ ಬಾಲ್ ಮಾದರಿಯಲ್ಲಿ ಕೊಹ್ಲಿ 113 ಪಂದ್ಯಗಳನ್ನು ಆಡಿದ್ದಾರೆ. 2027ರ ಜುಲೈವರೆಗೆ ಭಾರತ ಗರಿಷ್ಠ 29 ಟೆಸ್ಟ್ ಪಂದ್ಯಗಳನ್ನು ಆಡಬೇಕಿರುವುದರಿಂದ 36ರ ಹರೆಯದ ಕೊಹ್ಲಿ ಸಚಿನ್ ಅವರ ಈ ದಾಖಲೆ ಮುರಿಯುವು ತೀರಾ ಕಷ್ಟವೇ.