ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿತ್ತು. ಅತ್ತ ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಹೈದರಾಬಾದ್ ಭರ್ಜರಿಯಾದ ಆಟವನ್ನೇ ಆಡಿದೆ. ಕೇವಲ ಮೂರು ವಿಕೆಟ್ಗಳನ್ನು ಕಳೆದುಕೊಂಡು ಬರೋಬ್ಬರಿ 277 ರನ್ಗಳ ಕಲೆ ಹಾಕುವ ಮೂಲಕ ದಾಖಲೆ ನಿರ್ಮಿಸಿದೆ.
11 ರನ್ಗಳಿಸಿದ ಮಯಾಂಕ್ ಅಗರ್ವಾಲ್ ಪಾಂಡ್ಯಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಆದರೆ ಟ್ರಾವಿಸ್ ಹೆಡ್ ಕೇವಲ 24 ಬಾಲ್ಗಳಲ್ಲಿ ಬರೋಬ್ಬರಿ 62 ರನ್ ಬಾರಿಸಿದರು. ಕೋಟ್ಜಿ ಅವರ ಬೌಲಿಂಗ್ನಲ್ಲಿ ಔಟಾಗುವ ಮುನ್ನ ಟ್ರಾವಿಸ್ ಹೆಡ್ 9 ಬೌಂಡರಿ ಹಾಗೂ ಮೂರು ಸಿಕ್ಸರ್ ಸಿಡಿಸಿದರು. ಇವರು ಔಟಾದ ಬಳಿಕ ಅಭಿಷೇಕ್ ಶರ್ಮಾ ಸಹ ಕೇವಲ 23 ಬಾಲ್ಗಳಲ್ಲಿ 63 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇವರ ಆಟದಲ್ಲಿ 7 ಸಿಕ್ಸರ್ಗಳು ಹಾಗೂ ಮೂರು ಬೌಂಡರಿಗಳಿದ್ದವು. ಆ ಬಳಿಕ ಐಡೆನ್ ಮಾರ್ಕ್ರಾಮ್ ಔಟಾಗದೇ 42 ರನ್ ಬಾರಿಸಿದರೆ, ಹೆನ್ರಿಕ್ ಕ್ಲಾಸೆನ್ 34 ಬಾಲ್ಗಳಲ್ಲಿ ಅಮೋಘ 80 ರನ್ಗಳನ್ನು ಬಾರಿಸಿ ತಂಡದ ಮೊತ್ತವನ್ನು 276 ರನ್ಗಳಿಗೆ ಏರಿಸಿದರು. ಇವರ ಆಟದಲ್ಲಿ ಮನೋಹಕ ನಾಲ್ಕು ಬೌಂಡರಿ ಹಾಗೂ ಅತ್ಯಾಕರ್ಷಕ 7 ಸಿಕ್ಸರ್ಗಳಿದ್ದವು.
ಈ ಸ್ಫೋಟಕ 277 ರನ್ ಸಿಡಿಸುವ ಮೂಲಕ ಲೀಗ್ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಕಲೆ ಹಾಕಿದ ರೆಕಾರ್ಡ್ ನಿರ್ಮಿಸಿದೆ. 2013ರ ಐಪಿಎಲ್ ಆವೃತ್ತಿಯಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು 263 ರನ್ ಗಳಿಸಿತ್ತು.
ಬಾಲ್ಗಳನ್ನು ಕ್ರೀಡಾಂಗಣದ ಮೂಲೆ ಮೂಲೆಗೂ ಅಟ್ಟಿದ ಹೈದರಾಬಾದ್ ಸನ್‌ರೈಸರ್ಸ್ ದಾಂಡಿಗರು, ಪ್ರೇಕ್ಷಕರಿಗೆ ರಸದೌತಣ ನೀಡಿದರು. ಮುಂಬೈ ಇಂಡಿಯನ್ಸ್ ತಂಡದ ಬೌಲರ್ಗಳು ಹೈದರಾಬಾದ್ ತಂಡದ ಬ್ಯಾಟರ್ಗಳಿಂದ ಸಿಕ್ಕಾಪಟ್ಟೆ ದಂಡನೆಗೆ ಒಳಗಾದರು. ಇಲ್ಲಿನ ಉಪ್ಪಳದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಹೈದರಾಬಾದ್ ತಂಡ ಎರಡು ಬದಲಾವಣೆ ಮಾಡಿಕೊಂಡಿದೆ. ಮಾರ್ಕೋ ಜನ್ಸೆನ್ ಬದಲಿಗೆ ಟ್ರೇವಿಸ್ ಹೆಡ್, ನಟರಾಜನ್ ಬದಲಿಗೆ ಉನಾದ್ಕಟ್ರನ್ನು ಕಣಕ್ಕಿಳಿಸಿದೆ. ಮುಂಬೈನಲ್ಲಿ ಲ್ಯೂಕ್ ಫರ್ಗ್ಯುಸನ್ ಬದಲಿಗೆ ಕ್ವೆನ್ ಮಪಾಕರನ್ನು ತಂಡಕ್ಕೆ ಸೇರಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು ಕಂಡರೆ, ಸನ್‌ರೈಸರ್ಸ್ ತಂಡ ಕೋಲ್ಕತ್ತಾ ನೈಟ್ ರೈಸರ್ಸ್ ವಿರುದ್ಧ ಪರಾಜಯವಾಗಿತ್ತು.
ರೋಹಿತ್ ಶರ್ಮಾಗೆ 200ನೇ ಪಂದ್ಯ: ಮುಂಬೈ ಇಂಡಿಯನ್ಸ್ ತಂಡದಿಂದ ಈಚೆಗೆ ನಾಯಕತ್ವ ತ್ಯಜಿಸಿರುವ ಹಿಟ್ಮ್ಯಾನ್ ರೋಹಿತ್ ಶರ್ಮಾ ಅವರಿಗೆ ಇದು ಐಪಿಎಲ್ನಲ್ಲಿ ಮುಂಬೈ ಪರ 200ನೇ ಪಂದ್ಯವಾಗಿದೆ. ಪಂದ್ಯಕ್ಕೂ ಮುನ್ನ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ರೋಹಿತ್ ಶರ್ಮಾಗೆ ವಿಶೇಷ ಸ್ಮರಣಿಕೆಯನ್ನು ನೀಡಿದರು. 200 ROHIT ಎಂದು ಬರೆದಿರುವ ತಂಡದ ವಿಶೇಷ ಜರ್ಸಿಯನ್ನು ರೋಹಿತ್ಗೆ ಹಸ್ತಾಂತರಿಸಿದರು.
ಇದನ್ನೂ ಓದಿ: ಭಾರತ-ಪಾಕ್ ನಡುವೆ ದ್ವಿಪಕ್ಷೀಯ ಸರಣಿ ಆಯೋಜಿಸಲು ಆಸಕ್ತಿ ತೋರಿದ ಆಸ್ಟ್ರೇಲಿಯಾ - INDIA vs PAKISTAN