ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024ಕ್ಕೆ ಕೇವಲ ಎರಡೇ ದಿನ ಮಾತ್ರ ಉಳಿದಿದೆ. ಮಾರ್ಚ್ 22ರಿಂದ ಪ್ರಾರಂಭವಾಗುವ ಈ ಪಂದ್ಯಾವಳಿಗಾಗಿ ಕ್ರಿಕೆಟ್ ಅಭಿಮಾನಿಗಳು, ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇದೇ ವೇಳೆ, ಈ ಹಿಂದಿನ ಟೂರ್ನಿಗಳಲ್ಲಿ ಸೃಷ್ಟಿಯಾದ ದಾಖಲೆಗಳು ಹಾಗೂ ವಿಶೇಷ ಘಟನೆಗಳ ಬಗ್ಗೆ ಕ್ರಿಕೆಟ್ ಪ್ರಿಯರು ಮೆಲುಕು ಹಾಕುತ್ತಿದ್ದಾರೆ.
ತಮಿಳುನಾಡಿನ ಚೆನ್ನೈನ ಚೆಪಾಕ್‌ನ ಸ್ಟೇಡಿಯಂನಲ್ಲಿ 17ನೇ ಆವೃತ್ತಿಯ ಐಪಿಎಲ್ಗೆ ಮಾರ್ಚ್ 22ರಂದು ಅದ್ಧೂರಿ ಚಾಲನೆ ಸಿಗಲಿದೆ. ಇದಕ್ಕಾಗಿ ಎಲ್ಲ ತಂಡಗಳು ತಮ್ಮ- ತಮ್ಮ ಜೆರ್ಸಿಗಳನ್ನು ಬಿಡುಗಡೆ ಮಾಡಿವೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ಮುಖಾಮುಖಿಯಾಗಲಿವೆ. ಆರ್ಸಿಬಿ ತಂಡದ ಆಟಗಾರರು ಈಗಾಗಲೇ ಚೆನ್ನೈಗೆ ತಲುಪಿದ್ದಾರೆ.
ಐಪಿಎಲ್‌ನಲ್ಲಿ ಅತಿ ಉದ್ದದ ಸಿಕ್ಸರ್‌ಗಳು: ಚುಟುಕು ಐಪಿಎಲ್ ಟೂರ್ನಿಯು ಸಿಕ್ಸರ್ ಮತ್ತು ಬೌಂಡರಿಗಳ ಸುರಿಮಳೆಗೆ ಸಾಕ್ಷಿಯಾಗಿದೆ. ಕಳೆದ 2023ರ ಆವೃತ್ತಿಯು ಪಂದ್ಯಾವಳಿಯಾದ್ಯಂತ ಒಟ್ಟಾರೆ 1,124 ಸಿಕ್ಸರ್‌ಗಳು ದಾಖಲಾಗಿದ್ದವು. 16 ವರ್ಷಗಳ ಐಪಿಎಲ್ ಇತಿಹಾಸದಲ್ಲೇ ಎರಡನೇ ಬಾರಿಗೆ 1,000ಕ್ಕೂ ಹೆಚ್ಚು ಸಿಕ್ಸರ್‌ಗಳ ಮೈಲಿಗಲ್ಲು ಇದಾಗಿದೆ.
ಕಳೆದ ಋತುವಿನಲ್ಲಿ ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್ 36 ಸಿಕ್ಸರ್‌ಗಳನ್ನು ಸಿಡಿಸಿದ್ದರು. ಈ ಮೂಲಕ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರು. ಅಲ್ಲದೇ, 2023ರ ಐಪಿಎಲ್‌ನಲ್ಲಿ 115 ಮೀಟರ್‌ಗಳ ಪ್ರಭಾವಶಾಲಿ ದೂರದ ಸಿಕ್ಸರ್ ಬಾರಿಸುವ ಮೂಲಕ ಅತಿ ದೂರದ ಸಿಕ್ಸರ್ ಪ್ರಶಸ್ತಿಯನ್ನು ಗೆದ್ದರು. ಐಪಿಎಲ್ ಇತಿಹಾಸದಲ್ಲಿ ದಾಖಲಾದ ಐದು ಅತಿ ಉದ್ದದ(ದೂರ) ಸಿಕ್ಸರ್‌ಗಳ ಮಾಹಿತಿ ಇಲ್ಲಿದೆ.
- ಆಲ್ಬಿ ಮೋರ್ಕೆಲ್: ಐಪಿಎಲ್ ಇತಿಹಾಸದಲ್ಲಿ ಅತಿ ಉದ್ದದ ಸಿಕ್ಸರ್ ಸಿಡಿಸಿದ ದಾಖಲೆಯು ಅಲ್ಬಿ ಮೊರ್ಕೆಲ್ ಹೆಸರಿನಲ್ಲಿದೆ. ದಕ್ಷಿಣ ಆಫ್ರಿಕಾದ ಈ ಬ್ಯಾಟರ್, ಚೆನ್ನೈ ಸೂಪರ್ ಕಿಂಗ್ಸ್ ಪರ 2008ರಲ್ಲಿ 125 ಮೀಟರ್‌ಗಳ ಸಿಕ್ಸರ್ ಬಾರಿಸಿದ್ದರು. ಡೆಕ್ಕನ್ ಚಾರ್ಜರ್ ತಂಡದ ಸ್ಪಿನ್ನರ್ ಪ್ರಗ್ಯಾನ್ ಓಜಾ ಬೌಲಿಂಗ್ನಲ್ಲಿ ಪ್ರಬಲವಾದ ಸಿಕ್ಸರ್ ಹೊಡೆದಿದ್ದರು.
- ಪ್ರವೀಣ್ ಕುಮಾರ್: ಐಪಿಎಲ್ ಇತಿಹಾಸದಲ್ಲಿ ಎರಡನೇ ಅತಿ ಉದ್ದದ ಸಿಕ್ಸರ್ ಬಾರಿಸಿದ ದಾಖಲೆಯನ್ನು ವೇಗಿ ಪ್ರವೀಣ್ ಕುಮಾರ್ ಹೊಂದಿದ್ದಾರೆ. 2011ರಲ್ಲಿ ಪ್ರವೀಣ್ ಕುಮಾರ್ 124 ಮೀಟರ್‌ಗಳ ದೂರಕ್ಕೆ ಸಿಕ್ಸರ್ ಸಿಡಿಸಿದ್ದರು. ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಪ್ರವೀಣ್ ಪಂಜಾಬ್ ಪರ ಆಡುವಾಗ ಮುಂಬೈ ಇಂಡಿಯನ್ಸ್ ಬೌಲರ್ ಲಸಿತ್ ಮಾಲಿಂಗ ಅವರಿಗೆ ಈ ದಾಖಲೆಯ ಸಿಕ್ಸರ್ ಬಾರಿಸಿದ್ದರು.
- ಆಡಮ್ ಗಿಲ್‌ಕ್ರಿಸ್ಟ್: ಆಸ್ಟ್ರೇಲಿಯಾದ ಕ್ರಿಕೆಟಿಗ ಆಡಮ್ ಗಿಲ್‌ಕ್ರಿಸ್ಟ್ ಐಪಿಎಲ್ನ ಮೂರನೇ ಅತಿ ಉದ್ದದ ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ. 2011ರ ಐಪಿಎಲ್ ಟೂರ್ನಿಯಲ್ಲಿ ಗಿಲ್‌ಕ್ರಿಸ್ಟ್ 122 ಮೀಟರ್ ಉದ್ದದ ಸಿಕ್ಸರ್ ಬಾರಿಸಿದ್ದರು.
- ರಾಬಿನ್ ಉತ್ತಪ್ಪ: ಟೀಂ ಇಂಡಿಯಾದ ಬ್ಯಾಟರ್ ರಾಬಿನ್ ಉತ್ತಪ್ಪ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಅತಿ ಉದ್ದದ ಸಿಕ್ಸರ್ ಬಾರಿಸಿದ ದಾಖಲೆ ಹೊಂದಿದ್ದಾರೆ. 2012ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಉತ್ತಪ್ಪ 120 ಮೀಟರ್‌ಗಳ ದೂರಕ್ಕೆ ಸಿಕ್ಸರ್ ಬಾರಿಸಿ ಗಮನ ಸೆಳೆದಿದ್ದರು.
- ಕ್ರಿಸ್ ಗೇಲ್: ಐಪಿಎಲ್ ಇತಿಹಾಸದಲ್ಲಿ ಐದನೇ ಅತಿ ಉದ್ದದ ಸಿಕ್ಸರ್ನ ದಾಖಲೆಯು ಕ್ರಿಸ್ ಗೇಲ್ ಹೆಸರಿನಲ್ಲಿದೆ. ವೆಸ್ಟ್ ಇಂಡೀಸ್ನ ಈ ದಾಂಡಿಗ ಆರ್ಸಿಬಿ ಪರ 2013ರಲ್ಲಿ 119 ಮೀಟರ್‌ಗಳ ದೂರಕ್ಕೆ ಸಿಕ್ಸರ್ ಬಾರಿಸಿದ್ದರು. ಇನ್ನು, ಕ್ರಿಸ್ ಗೇಲ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು 657 ಸಿಕ್ಸರ್‌ಗಳನ್ನು ಸಿಡಿಸಿ ಆಟಗಾರರಾಗಿದ್ದಾರೆ. ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ 557 ಸಿಕ್ಸರ್‌ಗಳನ್ನು ಬಾರಿಸಿ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ: ಐಪಿಎಲ್ 2024: ಜಿಯೋ ಸಿನಿಮಾದಲ್ಲಿ 12 ಭಾಷೆಗಳಲ್ಲಿ ವೀಕ್ಷಕ ವಿವರಣೆ, ಹೀಗಿದೆ ದಿಗ್ಗಜರ ಪಟ್ಟಿ