ಬೆಂಗಳೂರು: ವಿಕೆಟ್ ಕೀಪರ್ ಮತ್ತು ಬ್ಯಾಟರ್ ದಿನೇಶ್ ಕಾರ್ತಿಕ್ ಅವರು ದೇಶವೊಂದರಲ್ಲೇ ಅತೀ ಹೆಚ್ಚು ಟಿ-20 ಕ್ರಿಕೆಟ್ ಪಂದ್ಯಗಳನ್ನು ಆಡಿದ ಆಟಗಾರ ಎಂಬ ಅಪರೂಪದ ದಾಖಲೆ ಬರೆದಿದ್ದಾರೆ. ನಿನ್ನೆ ನಡೆದ ಲಕ್ನೋ ಮತ್ತು ಆರ್ಸಿಬಿ ನಡುವಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು, ದೇಶದಲ್ಲಿ 300 ಟಿ20 ಪಂದ್ಯಗಳನ್ನು ಆಡಿದ ವಿಶ್ವದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಪಟ್ಟಿಯಲ್ಲಿ ಕಾರ್ತಿಕ್ ನಂತರದ ಸ್ಥಾನದಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಕಾಣಿಸಿಕೊಂಡಿದ್ದು, ಈ ವರೆಗೂ ಭಾರತದಲ್ಲಿ 289 ಟಿ20 ಪಂದ್ಯಗಳನ್ನು ಆಡಿದ್ದಾರೆ. ಉಳಿದಂತೆ ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ 3ನೇ ಸ್ಥಾನದಲ್ಲಿದ್ದು, ಈವರೆಗೂ 262 ಟಿ20 ಪಂದ್ಯಗಳನ್ನು ಆಡಿದ್ದಾರೆ. ಧೋನಿ ನಂತರ 4ನೇ ಸ್ಥಾನದಲ್ಲಿ ಇಂಗ್ಲೆಂಡ್ನ ಸಮಿತ್ ಪಾಟೀಲ್ ಇದ್ದು 259 ಪಂದ್ಯಗಳನ್ನು ಆಡಿದ್ದಾರೆ. ರನ್ ಮಷಿನ್ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಭಾರತದಲ್ಲಿ ಈ ವರೆಗೂ 258 ಟಿ-20 ಪಂದ್ಯಗಳನ್ನು ಆಡಿ ಐದನೇ ಸ್ಥಾನದಲ್ಲಿದ್ದಾರೆ.
2006ರಲ್ಲಿ ಟಿ20ಗೆ ಪದಾರ್ಪಣೆ: ದಿನೇಶ್ ಕಾರ್ತಿಕ್ ಅವರು 2006ರಲ್ಲಿ ಜೋಹಾನ್ಸ್ಬರ್ಗ್ಬಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯವನ್ನು ಆಡುವ ಮೂಲಕ ಟಿ-20ಗೆ ಪದಾರ್ಪಣೆ ಮಾಡಿದ್ದರು. ಅಂದಿನಿಂದ 18 ವರ್ಷಗಳ ಕಾಲ ಸುದೀರ್ಘವಾಗಿ ಟಿ20 ಕ್ರಿಕೆಟ್ನಲ್ಲಿ ಸಕ್ರಿಯರಾಗಿರುವ ಕಾರ್ತಿಕ್ ಈ ವರೆಗೂ ಒಟ್ಟು 390 ಟಿ20 ಪಂದ್ಯಗಳನ್ನು ಆಡಿದ್ದಾರೆ. 390 ಪಂದ್ಯಗಳ ಪೈಕಿ 346 ಇನ್ನಿಂಗ್ಸ್ ಆಡಿರುವ ಕಾರ್ತಿಕ್ 27.04 ಸರಾಸರಿಯಲ್ಲಿ 135.79 ಸ್ಟ್ರೈಕ್ ರೇಟ್ನೊಂದಿಗೆ 7167ರನ್ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ 32 ಅರ್ಧಶತಕಗಳು ಸೇರಿವೆ. 81 ಬಾರಿ ಅಜೇಯರಾಗಿಯೂ ಉಳಿದಿದ್ದಾರೆ. ಟಿ-20ಯಲ್ಲಿ ಅಜೇಯವಾಗಿ 97 ರನ್ಗಳನ್ನು ಸಿಡಿಸಿರುವುದು ಅವರ ಈವರೆಗಿನ ಅತ್ಯುತ್ತಮ ಪ್ರದರ್ಶನವಾಗಿದೆ.
ಐಪಿಎಲ್ ದಾಖಲೆ: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ 246 ಪಂದ್ಯಗಳ ಪೈಕಿ 225 ಇನ್ನಿಂಗ್ಸ್ಗಳನ್ನು ಆಡಿರುವ ಕಾರ್ತಿಕ್ 4,606ರನ್ಗಳನ್ನು ಪೂರೈಸಿದ್ದಾರೆ. ಇದರಲ್ಲಿ 20 ಅರ್ಧಶತಕಗಳು ಸೇರಿವೆ. 97 ಹೈಸ್ಕೋರ್ ಆಗಿದೆ. ಸದ್ಯ ಆರ್ಸಿಬಿ ತಂಡದ ಭಾಗವಾಗಿರುವ ದಿನೇಶ್ ಕಾರ್ತಿಕ್ ತಂಡದ ಫಿನಿಶರ್ ಆಗಿ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ಮುಂಬೈ ಇಂಡಿಯನ್ಸ್, ಗುಜರಾತ್ ಲಯನ್ಸ್, ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಆಡಿದ್ದರು.
ಇದನ್ನೂ ಓದಿ: 'ಮಯಾಂಕ್ ಯಾದವ್ ರಾಕೆಟ್ ವೇಗದ ಬೌಲಿಂಗ್': ಯುವ ವೇಗಿಗೆ ಮೆಚ್ಚುಗೆಯ ಮಹಾಪೂರ - Mayank Yadav