ಬೆಂಗಳೂರು: ಭಾರತ ವನಿತೆಯರ ಕ್ರಿಕೆಟ್ ತಂಡ ಮತ್ತೊಂದು ಮಹತ್ವದ ದಾಖಲೆಯ ಹೊಸ್ತಿಲಲ್ಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಏಕದಿನ ಸರಣಿಯನ್ನು 2-0 ಯಿಂದ ವಶಪಡಿಸಿಕೊಂಡಿದ್ದು, ನಾಳೆ ನಡೆಯುವ ಮೂರನೇ ಪಂದ್ಯ ಗೆಲ್ಲುವ ಮೂಲಕ 3-0 ಯಿಂದ ಸರಣಿ ಕ್ಲೀನ್ಸ್ವೀಪ್ ಮಾಡಲು ಸಜ್ಜಾಗಿದೆ.
ಮೂರನೇ ಮತ್ತು ಅಂತಿಮ ಪಂದ್ಯವೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹರ್ಮನ್ಪ್ರೀತ್ ಕೌರ್ ಬಳಗ ಸರಣಿ ಜಯದ ಹುಮ್ಮಸ್ಸಿನಲ್ಲಿದೆ. ಮೊದಲ ಏಕದಿನದಲ್ಲಿ ಏಕಸ್ವಾಮ್ಯ ಸಾಧಿಸಿದ್ದ ಭಾರತ ವನಿತೆಯರು, ದಕ್ಷಿಣ ಆಫ್ರಿಕಾ ವನಿತೆಯರನ್ನು 143 ರನ್ಗಳಿಂದ ಸೋಲಿಸಿದ್ದರು. ಎರಡನೇ ಪಂದ್ಯದಲ್ಲಿ 4 ರನ್ನಿಂದ ಗೆದ್ದು ಸರಣಿ ಜಯಿಸಿದ್ದರು.
ಎರಡೂ ಪಂದ್ಯಗಳಲ್ಲಿ 117 ಮತ್ತು 136 ರನ್ಗಳಿಂದ ಶತಕ ಸಿಡಿಸಿರುವ ಹಿರಿಯ ಆಟಗಾರ್ತಿ ಸ್ಮೃತಿ ಮಂಧಾನ ಭಾರತದ ಟ್ರಂಪ್ ಕಾರ್ಡ್ ಆಟಗಾರ್ತಿ. ಈ ಮೂಲಕ ಮಂಧಾನ ಏಕದಿನ ಪಂದ್ಯಗಳಲ್ಲಿ ಸತತ ಎರಡು ಶತಕಗಳನ್ನು ಬಾರಿಸಿದ ಮೊದಲ ಭಾರತೀಯ ಮಹಿಳಾ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಜೊತೆಗೆ ಮಿಥಾಲಿ ರಾಜ್ ಅವರ ಏಳು ಏಕದಿನ ಶತಕಗಳ ದಾಖಲೆಯನ್ನೂ ಸರಿಗಟ್ಟಿದ್ದಾರೆ. ಜೊತೆಗೆ ನಾಯಕಿ ಹರ್ಮನ್ಪ್ರೀತ್ ಕೌರ್ ಕೂಡ ಕಳೆದ ಪಂದ್ಯದಲ್ಲಿ ಶತಕ ಬಾರಿಸಿ ಲಯ ಕಂಡುಕೊಂಡಿದ್ದಾರೆ.
ಇದರಿಂದ ಮೂರನೇ ಪಂದ್ಯವನ್ನು ಸಲೀಸಾಗಿ ಗೆಲ್ಲುವ ನಿರೀಕ್ಷೆ ಇದೆ. ಹರಿಣಗಳ ನಾಡಿನ ವನಿತೆಯರಿಗೆ ಆಶಾ ಶೋಭ್ನಾ, ದೀಪ್ತಿ ಶರ್ಮಾ, ಪೂಜಾ ವಸ್ತ್ರಾಕರ್ ಬೌಲಿಂಗ್ನಲ್ಲೂ ಕಾಡುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಬಿಗಿ ದಾಳಿ ನಡೆಸಿದ್ದರು. ಭಾರತಕ್ಕೆ ಔಪಚಾರಿಕ ಪಂದ್ಯವಾಗಿರುವ ಕಾರಣ ತಂಡದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಶ್ರೇಯಾಂಕಾ ಪಾಟೀಲ್, ಸೈಕಾ ಇಶಾಕ್ ಮತ್ತು ಬ್ಯಾಟರ್ ಪ್ರಿಯಾ ಪುನಿಯಾ ಅವರಿಗೆ ಅವಕಾಶ ನೀಡಲು ಬಯಸಿದೆ.
ಇನ್ನು ದಕ್ಷಿಣ ಆಫ್ರಿಕಾ ಮೂರನೇ ಪಂದ್ಯದಲ್ಲಾದರೂ ಗೆಲುವು ಪಡೆಯಬೇಕು ಎಂದು ಕಾಯುತ್ತಿದೆ. ಎರಡು ಪಂದ್ಯಗಳಲ್ಲಿ ಸೋತು ಸರಣಿ ಕಳೆದುಕೊಂಡಿರುವ ತಂಡಕ್ಕೆ ಕೊನೆಯ ಪಂದ್ಯದ ಗೆಲುವು ಅನಿವಾರ್ಯವಾಗಿದೆ. ಎರಡನೇ ಪಂದ್ಯದಲ್ಲಿ ಗೆಲುವಿನ ಸನಿಹಕ್ಕೆ ತೆರಳಿ ಸೋಲು ಕಂಡಿದ್ದು ದುಬಾರಿಯಾಗಿದೆ. ನಾಯಕಿ ಲೌರಾ ವಾಲ್ವಾರ್ಟ್ ಮತ್ತು ಆಲ್ರೌಂಡರ್ ಮರಿಝನ್ನೆ ಕಾಪ್ಪ್ ಶತಕ ಬಾರಿಸಿದಾಗ್ಯೂ ತಂಡ ಗೆಲುವು ಕಾಣಲಿಲ್ಲ. ಜೂನ್ 28 ರಿಂದ ಚೆನ್ನೈನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ಗೂ ಮುನ್ನ ತಂಡ ಗೆಲುವಿನ ಮೂಲಕ ಸರಣಿ ಮುಗಿಸಲು ಮುಂದಾಗಿದೆ. ಇದಾದ ಬಳಿಕ ಜುಲೈ 5 ರಿಂದ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
ಇದನ್ನೂ ಓದಿ: ಆಫ್ಘನ್ -ಬಾಂಗ್ಲಾ ನಡುವಿನ ಸರಣಿಗೆ ಭಾರತದ ಗ್ರೇಟರ್ ನೋಯ್ಡಾ ಆತಿಥ್ಯ!: ಬಿಸಿಸಿಐ ಅನುಮತಿ - AFG vs BAN series In Noida