ನವದೆಹಲಿ: ಜಿಂಬಾಬ್ವೆ ವಿರುದ್ಧದ ಟಿ-20 ಸರಣಿ ಜಯಿಸಿರುವ ಭಾರತ ಮುಂದಿನ ಪ್ರವಾಸವನ್ನು ಶ್ರೀಲಂಕಾಕ್ಕೆ ಕೈಗೊಳ್ಳಲಿದೆ. ಎರಡು ದಿನಗಳ ಹಿಂದಷ್ಟೇ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿತ್ತು. ಜುಲೈ 26 ರಿಂದ ಟಿ-20, ಏಕದಿನ ಸರಣಿ ಆರಂಭವಾಗಲಿತ್ತು. ಆದರೆ, ಇದೀಗ ಸರಣಿಯ ದಿನಾಂಕವನ್ನು ದಿಢೀರ್ ಆಗಿ ಪರಿಷ್ಕರಿಸಲಾಗಿದೆ. ಜುಲೈ 26 ರ ಬದಲಾಗಿ ಜುಲೈ 27 ಕ್ಕೆ ಸರಣಿ ಆರಂಭವಾಗಲಿದೆ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಶನಿವಾರ ಪ್ರಕಟಿಸಿದೆ.
ಟೀಮ್ ಇಂಡಿಯಾವು ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ಮೂರು ಟಿ20 ಪಂದ್ಯಗಳನ್ನು ಮತ್ತು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೂರು ಏಕದಿನಗಳನ್ನು ಆಡಲಿದೆ. ಮೊದಲು ನಿಗದಿ ಮಾಡಿದಂತೆ ಜುಲೈ 26 ರಿಂದ ಟಿ20 ಸರಣಿ ಆರಂಭವಾಗಬೇಕಿತ್ತು. ಪರಿಷ್ಕೃತ ವೇಳಾಪಟ್ಟಿಯಲ್ಲಿ ಒಂದು ದಿನ ತಡವಾಗಿ ಅಂದರೆ, ಜುಲೈ 27ರಂದು ಮೊದಲ ಟಿ-20 ಪಂದ್ಯ ಆರಂಭವಾಗಲಿದೆ. ಎರಡನೇ ಟಿ20 ಜುಲೈ 28ರಂದು ಹಾಗೂ ಮೂರನೇ ಹಾಗೂ ಅಂತಿಮ ಪಂದ್ಯ ಜುಲೈ 30 ರಂದು ನಡೆಯಲಿದೆ.
ಏಕದಿನದಲ್ಲೂ ಬದಲಾವಣೆ: ಟಿ-20 ಅಲ್ಲದೇ ಏಕದಿನ ಸರಣಿಯ ಪಂದ್ಯವೂ ಒಂದು ದಿನ ಮುಂದೂಡಲಾಗಿದೆ. ಮೊದಲು ನಿಗದಿ ಮಾಡಿದಂತೆ ಆಗಸ್ಟ್ 1 ರಂದು ಮೊದಲ ಏಕದಿನ ಕೊಲಂಬೋದಲ್ಲಿ ನಡೆಯಬೇಕಿತ್ತು. ಆದರೆ, ಈಗ ಆಗಸ್ಟ್ 2 ರಂದು ಪ್ರಾರಂಭವಾಗಲಿದೆ. ನಂತರ ಉಳಿದ ಪಂದ್ಯಗಳು ಆಗಸ್ಟ್ 4 ಮತ್ತು ಆಗಸ್ಟ್ 7 ರಂದು ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆಯಲಿವೆ. ವೇಳಾಪಟ್ಟಿ ಬದಲಾವಣೆ ಮಾಡಿದ ಬಗ್ಗೆ ಬಿಸಿಸಿಐ ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ದಿನಾಂಕ ಬದಲಾವಣೆ ಮಾಡಿದ ಬಗ್ಗೆ ತಿಳಿಸಲಾಗಿದ್ದು, ಇದಕ್ಕೆ ಕಾರಣ ಏನೆಂಬುದನ್ನು ವಿವರಿಸಿಲ್ಲ.
UPDATE 🚨
— BCCI (@BCCI) July 13, 2024
A look at the revised schedule for #TeamIndia's upcoming tour of Sri Lanka #SLvIND pic.twitter.com/HLoTTorOV7
ಪಂದ್ಯದ ಸಮಯ ಬದಲಿಲ್ಲ: ಸರಣಿಯು ಒಂದು ದಿನ ಮುಂದೂಡಿಕೆ ಮಾಡಲಾಗಿದ್ದರೂ, ಪಂದ್ಯದ ಸಮಯ ಮೊದಲಿನಂತೆ ಇರಲಿವೆ. ಟಿ-20 ಪಂದ್ಯಗಳು ಸಂಜೆ 7.30 ಆರಂಭವಾದರೆ, ಏಕದಿನ ಪಂದ್ಯಗಳು ಮಧ್ಯಾಹ್ನ 2.30 ಕ್ಕೆ ಆರಂಭವಾಗಲಿವೆ.
ಹೊಸ ಕೋಚ್ಗಳಿಗೆ ಮೊದಲು ಸವಾಲು: ಶ್ರೀಲಂಕಾ ಮತ್ತು ಭಾರತ ತಂಡಗಳಿಗೆ ಹೊಸ ಕೋಚ್ಗಳು ಆಯ್ಕೆಯಾಗಿದ್ದಾರೆ. ಮಾಜಿ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದಿದ್ದು ರಾಜೀನಾಮೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಈಗ ಮಾಜಿ ಆಟಗಾರ ಗೌತಮ್ ಗಂಭೀರ್ ಬಂದಿದ್ದಾರೆ. ಇತ್ತ ಲಂಕಾ ತಂಡಕ್ಕೂ ಸನತ್ ಜಯಸೂರ್ಯ ಅವರನ್ನು ಹಂಗಾಮಿ ಕೋಚ್ ಆಗಿ ನೇಮಕ ಮಾಡಲಾಗಿದೆ. ಇಬ್ಬರಿಗೂ ಇದು ಮೊದಲ ಸರಣಿಯಾಗಿದೆ.
ಅಲ್ಲದೇ, ಲಂಕಾ ತಂಡವು ಟಿ-20 ವಿಶ್ವಕಪ್ನಲ್ಲಿ ನೀರಸ ಪ್ರದರ್ಶನ ತೋರಿದ ಕಾರಣ, ತಂಡದ ನಾಯಕತ್ವದಿಂದ ಸ್ಪಿನ್ನರ್ ವನಿಂದು ಹಸರಂಗ ಕೆಳಗಿಳಿದಿದ್ದಾರೆ. ಈಗ ಹೊಸ ನಾಯಕನ ನೇಮಕ ಮಾಡಬೇಕಿದೆ. ಭಾರತ ತಂಡಕ್ಕೂ ಹೊಸ ನಾಯಕನ ಆಯ್ಕೆಯಾಗಬೇಕಿದೆ. ರೋಹಿತ್ ಶರ್ಮಾ ಟಿ-20 ಮಾದರಿಗೆ ವಿದಾಯ ಹೇಳಿದ್ದು, ಹಾರ್ದಿಕ್ ಪಾಂಡ್ಯ ನಾಯಕತ್ವ ವಹಿಸುವ ಸಾಧ್ಯತೆ ಇದೆ. ಈ ಹಿಂದೆ ಅವರು ಕ್ಯಾಪ್ಟನ್ ಆಗಿದ್ದರೂ, ಲಂಕಾ ಜೊತೆಗೆ ಮೊದಲ ಸರಣಿಯಾಗಿದೆ.