ಬಾರ್ಬಡೋಸ್ (ವೆಸ್ಟ್ ಇಂಡೀಸ್): ಟಿ20 ವಿಶ್ವಕಪ್ನ ಸೂಪರ್-8 ಹಂತದ ಪಂದ್ಯಗಳು ಇಂದಿನಿಂದ ಆರಂಭವಾಗಲಿದ್ದು, ನಾಳೆ ಭಾರತದ ಮೊದಲ ಪಂದ್ಯ ಅಫ್ಘಾನಿಸ್ತಾನ ವಿರುದ್ಧ ನಡೆಯಲಿದೆ. ಭಾರತೀಯ ಆಟಗಾರರು ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಬ್ರಿಡ್ಜ್‌ಟೌನ್‌ನ ಕೆನ್ನಿಂಗ್ಟನ್ ಓವಲ್‌ನಲ್ಲಿ ಬುಧವಾರ ಬೆವರು ಹರಿಸಿದರು.
ಸ್ಪಿನ್ನರ್ಗಳಿಗೆ ಅವಕಾಶ ಸಿಗುವ ಸಾಧ್ಯತೆ ಕಾರಣ ಕುಲದೀಪ್ ಯಾದವ್, ಯಜುವೇಂದ್ರ ಚಹಲ್ ನೆಟ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು. ಟೂರ್ನಿಯಲ್ಲಿ ಸತತ ವೈಫಲ್ಯ ಕಂಡಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಲಯ ಕಂಡುಕೊಳ್ಳಲು ಹೆಚ್ಚು ಸಮಯ ಬ್ಯಾಟಿಂಗ್ ನಡೆಸಿದರು. ಅರ್ಶದೀಪ್ರ ಬೌಲಿಂಗ್ ಅನ್ನು ರೋಹಿತ್ ಶರ್ಮಾ ಎದುರಿಸುವ ಮೂಲಕ ನಾಳಿನ ಪಂದ್ಯಕ್ಕೆ ತಯಾರಿ ನಡೆಸಿದರು.
ರಶೀದ್ ದಾಳಿ ಎದುರಿಸುವುದು ಸವಾಲು: ವೆಸ್ಟ್ ಇಂಡೀಸ್ನಲ್ಲಿ ಟರ್ನಿಂಗ್ ಪಿಚ್ಗಳಿದ್ದು, ಅದನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡ ಅಭ್ಯಾಸ ನಡೆಸಿತು. ಅಫ್ಘಾನಿಸ್ತಾನ ತಂಡದ ನಾಯಕ ರಶೀದ್ ಖಾನ್ ಸ್ಪಿನ್ ದಾಳಿಯನ್ನು ಹೇಗೆ ಎದುರಿಸಬೇಕು ಎಂಬ ತಂತ್ರವನ್ನು ಅರಿತುಕೊಂಡರು.
ವಿರಾಟ್ ಕೊಹ್ಲಿ ಗಾಯಕ್ಕೀಡಾಗಿದ್ದಾರೆ ಎಂಬ ಆತಂಕ ವಿಚಾರ ಹರಿದಾಡಿತ್ತು. ಆದರೆ, ಅವರು ನೆಟ್‌ನಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದು ನಾಳಿನ ಪಂದ್ಯಕ್ಕೆ ತಾವು ಸಜ್ಜು ಎಂಬುದನ್ನು ತೋರಿಸಿಕೊಟ್ಟರು. ಬ್ಯಾಟಿಂಗ್ ಅಭ್ಯಾಸದ ಬಳಿಕ ಹಾಕಿ ಆಡಿದರು. ಥ್ರೋಡೌನ್ ಎಸೆಯುವ ಮೂಲಕ ನೆಟ್ ಅಭ್ಯಾಸ ಮಾಡಿದರು. ಇದರ ನಂತರ ಯಜುವೇಂದ್ರ ಚಹಲ್, ಅರ್ಷದೀಪ್ ಸಿಂಗ್ ಮತ್ತು ಶಿವಂ ದುಬೆ ಅವರು ಸರಿಯಲ್ಲಿ ಪ್ರಾಕ್ಟೀಸ್ ಮಾಡಿದರು.
ವಿರಾಟ್ ಮೇಲೆ ಎಲ್ಲರ ಕಣ್ಣು?: ಲೀಗ್ ಹಂತದಲ್ಲಿ ತೀವ್ರ ವೈಫಲ್ಯ ಕಂಡಿದ್ದ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಆಡಿದ ಮೂರು ಪಂದ್ಯಗಳಲ್ಲಿ ಎರಡಂಕಿ ದಾಟಲು ಸಾಧ್ಯವಾಗಿರಲಿಲ್ಲ. ವೆಸ್ಟ್ ಇಂಡೀಸ್ನ ಪಿಚ್ಗಳು ಬ್ಯಾಟಿಂಗ್ ಸ್ನೇಹಿಯಾಗಿದ್ದು, ಮಹತ್ವದ ಪಂದ್ಯಗಳಲ್ಲಿ ಅವರು ಸಿಡಿಯಬೇಕಿದೆ. ಐಪಿಎಲ್ನಲ್ಲಿ ರಾಶಿ ರಾಶಿ ರನ್ ಕಲೆಹಾಕಿದ್ದ ಆಟಗಾರ ವಿಶ್ವಕಪ್ನಲ್ಲಿ ವಿಫಲವಾಗಿದ್ದು, ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದೆ.
ಭಾರತದ ಸೂಪರ್-8 ಪಂದ್ಯಗಳು ಹೀಗಿವೆ: ಜೂನ್ 20 ರಂದು ಅಫ್ಘಾನಿಸ್ತಾನ ವಿರುದ್ಧ ಮೊದಲ ಸೂಪರ್ - 8 ಪಂದ್ಯವಾಡಲಿದ್ದು, ಎರಡನೇ ಪಂದ್ಯ ಜೂನ್ 22 ರಂದು ಬಾಂಗ್ಲಾದೇಶ ಎದುರು, ಮೂರನೇ ಪಂದ್ಯ ಜೂನ್ 24 ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ. ಭಾರತ 5 ದಿನಗಳಲ್ಲಿ ಮೂರು ಮ್ಯಾಚ್ಗಳನ್ನು ಆಡಲಿದೆ.
ಇದನ್ನೂ ಓದಿ: ವಿಶೇಷ ಸಾಧನೆಗೆ ಭಾರತ ತಂಡದ ಎಲ್ಲರೂ ಉತ್ಸುಕರಾಗಿದ್ದಾರೆ; ರೋಹಿತ್ ಶರ್ಮಾ ವಿಶ್ವಾಸ - Rohit Sharma Talks on Super Eight