ಅಂಟಲ್ಯ (ಟರ್ಕಿ): ಅರ್ಚರಿ ವಿಶ್ವಕಪ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. ರಿಕರ್ವ್ ಮಿಶ್ರ ಸ್ಪರ್ಧೆಯಲ್ಲಿ ಭಾರತ ತಂಡ ಮೆಕ್ಸಿಕೋ ತಂಡವನ್ನು ಸೋಲಿಸುವ ಮೂಲಕ ಕಂಚಿನ ಪದಕ ಗಳಿಸಿತು. ಚಿನ್ನ, ಬೆಳ್ಳಿಯ ಬಳಿಕ ಕಂಚನ್ನು ಗೆದ್ದುಕೊಂಡಿತು.
ವಿಶ್ವಕಪ್ ಮೂರನೇ ಹಂತದಲ್ಲಿ ನಡೆದ ಕಂಚಿನ ಪದಕಕ್ಕಾಗಿನ ಸ್ಪರ್ಧೆಯಲ್ಲಿ ಭಾರತ ರಿಕರ್ವ್ ತಂಡದ ಧೀರಜ್ ಬೊಮ್ಮದೇವರ ಮತ್ತು ಭಜನ್ ಕೌರ್ ಅವರು ನಿಖರ ಗುರಿ ಸಾಧಿಸುವಲ್ಲಿ ಸಫಲರಾದರು. ಆರಂಭಿಕ ಎರಡು ಸೆಟ್ಗಳನ್ನು ಸೋತ ಬಳಿಕ 0-2 ಹಿನ್ನಡೆಯಲ್ಲಿದ್ದ ಧೀರಜ್- ಕೌರ್ ಜೋಡಿ ಉಳಿದ ಸುತ್ತುಗಳಲ್ಲಿ ಪುಟಿದೆದ್ದಿತು.
ಮೆಕ್ಸಿಕೋದ ಅಲೆಜಾಂಡ್ರಾ ವೇಲೆನ್ಸಿಯಾ ಮತ್ತು ಮಟಿಯಾಸ್ ಗ್ರಾಂಡೆ ಮೊದಲ ಸುತ್ತುಗಳಲ್ಲಿ ಮುನ್ನಡೆ ಸಾಧಿಸಿದ್ದರು. ಬಳಿಕದ ಸುತ್ತುಗಳಲ್ಲಿ 35-38, 40-39, 38-37, 38-38 ಅಂಕ ಗಳಿಸುವ ಮೂಲಕ ಭಾರತ ತಂಡವು ಮೆಕ್ಸಿಕನ್ ಎದುರಾಳಿಗಳ ವಿರುದ್ಧ 5-3 ರಲ್ಲಿ ಜಯ ಸಾಧಿಸಿದೆ.
ಅರ್ಚರಿಯಲ್ಲಿ ಇದು ಕೂಟದ ಮೂರನೇ ಪದಕವಾಗಿದೆ. ಜ್ಯೋತಿ ಸುರೇಖಾ ವೆನ್ನಂ, ಅದಿತಿ ಸ್ವಾಮಿ ಮತ್ತು ಪರ್ನೀತ್ ಕೌರ್ ಅವರಿದ್ದ ಮಹಿಳಾ ತಂಡವು ಕಾಂಪೌಂಡ್ ವಿಭಾಗದಲ್ಲಿ ಶನಿವಾರ ಚಿನ್ನದ ಪದಕ ಗೆದ್ದಿದ್ದರು. ಬಳಿಕ ವೈಯಕ್ತಿಕ ವಿಭಾಗದಲ್ಲಿ ಪ್ರಿಯಾಂಶ್ ಬೆಳ್ಳಿ ಪದಕ ಸಾಧನೆ ಮಾಡಿದ್ದರು.
ಇನ್ನೆರಡು ಪದಕ ನಿರೀಕ್ಷೆ: ಕೂಟದಲ್ಲಿ ಇನ್ನೆರಡು ಪದಕದ ನಿರೀಕ್ಷೆ ಇದೆ. ಧೀರಜ್ ಮತ್ತು ಅಂಕಿತಾ ಭಕತ್ ಅವರು ವೈಯಕ್ತಿಕ ವಿಭಾಗದಲ್ಲಿ ಸೆಮಿಫೈನಲ್ ತಲುಪಿದ್ದು, ಬೆಳ್ಳಿ ಅಥವಾ ಚಿನ್ನ ಗೆಲ್ಲುವ ಗುರಿ ಹೊಂದಿದ್ದಾರೆ.
ಇದನ್ನು ಓದಿ: ವಿಶ್ವಕಪ್ ಅರ್ಚರಿ 2024: ಬಿಲ್ವಿದ್ಯೆಯಲ್ಲಿ ಭಾರತ ಮಹಿಳಾ ತಂಡಕ್ಕೆ ಹ್ಯಾಟ್ರಿಕ್ ಚಿನ್ನ - World Cup gold medals