ನವದೆಹಲಿ: ಸಾಧಿಸಬೇಕೆಂಬ ಛಲವಿದ್ದರೆ ಯಾವುದೇ ಕಷ್ಟಗಳನ್ನಾದರೂ ಮೆಟ್ಟಿ ನಿಲ್ಲಬಹುದು ಎಂಬುದನ್ನು ಭಾರತದ ಪ್ಯಾರಾ ಅಥ್ಲೀಟ್ ಕಪಿಲ್ ಪರ್ಮಾರ್ ಸಾಧಿಸಿ ತೋರಿಸಿದ್ದಾರೆ. ಗುರುವಾರ ನಡೆದ ಪ್ಯಾರಾಲಿಂಪಿಕ್ಸ್ನ ಪುರುಷರ ಪ್ಯಾರಾ ಜೂಡೋ 60 ಕೆ.ಜಿ (ಜೆ1) ವಿಭಾಗದ ಸ್ಪರ್ಧೆಯಲ್ಲಿ ವಿಶ್ವದ ನಂ.1 ಆಟಗಾರ ಕಪಿಲ್ ಪರ್ಮಾರ್ ಕಂಚಿನ ಪದಕ ಜಯಿಸಿದರು.
ಈ ಪಂದ್ಯದಲ್ಲಿ ಎದುರಾಳಿ ಆಟಗಾರ ಬ್ರೆಜಿಲ್ನ ಎಲಿಲ್ಟನ್ ಒಲಿವೇರಾ ಅವರನ್ನು 10-0 ಅಂತರದಿಂದ ಸೋಲಿಸಿ ಪದಕ ಸಾಧನೆ ಮಾಡಿದರು. ಇದರೊಂದಿಗೆ ಜೂಡೋದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ದಾಖಲೆಯನ್ನೂ ನಿರ್ಮಿಸಿದರು. ಇದು ಪರ್ಮಾರ್ ವೃತ್ತಿಜೀವನದ ಅತೀ ದೊಡ್ಡ ಸಾಧನೆಯೂ ಹೌದು. ಆದರೆ ಕಪಿಲ್ ಈ ಸಾಧನೆಯ ಹಿಂದೆ ಅನೇಕ ನೋವಿನ ಸಂಗತಿಗಳಿವೆ.
ಯಾರು ಈ ಕಪಿಲ್ ಪರ್ಮಾರ್?: ವಿಶ್ವದ ಶ್ರೇಷ್ಠ ಆಟಗಾರ ಕಪಿಲ್ ಮೂಲತಃ ಮಧ್ಯಪ್ರದೇಶದ ಸೆಹೋರಾನ್‌ನವರು. ಮನೆಗೆ ಕಿರಿಯ ಮಗ. ತಂದೆ ಟ್ಯಾಕ್ಸಿ ಚಾಲಕರು. ಕಪಿಲ್ ಬಾಲ್ಯದಿಂದಲೂ ಜುಡೋ ಕ್ರೀಡೆ ಮೇಲೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಆದರೆ ಅದೊಂದು ದಿನ ಹೊಲದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ನೀರಿನ ಪಂಪ್‌ಸೆಟ್ ಸ್ಪರ್ಶಿಸಿ ತೀವ್ರ ವಿದ್ಯುತ್ ಆಘಾತಕ್ಕೊಳಗಾಗಿ ಕೋಮಾಕ್ಕೆ ತಲುಪಿದ್ದರು. ಸತತ 6 ತಿಂಗಳ ಕಾಲ ಕೋಮಾದಲ್ಲಿದ್ದ ಕಪಿಲ್ ಕಣ್ಣುಗಳು ತೀವ್ರಹಾನಿಗೊಳಗಾದವು. ಶೇ.90ರಷ್ಟು ದೃಷ್ಟಿ ಕಳೆದುಕೊಂಡರು. ಇಲ್ಲಿಗೆ ಮಗನ ಬದುಕೇ ಮುಗಿಯಿತು ಎಂದು ಪೋಷಕರು ಕಣ್ಣೀರು ಹಾಕಿದ್ದರು.
ಅಣ್ಣನೊಂದಿಗೆ ಸೇರಿ ಚಹಾ ಮಾರಾಟ: ದೃಷ್ಟಿ ಕಳೆದುಕೊಂಡರೂ ಕಪಿಲ್‌ಗೆ ಜುಡೋ ಮೇಲಿನ ಆಸಕ್ತಿ ಎಂದಿಗೂ ಕುಂದಲಿಲ್ಲ. ಇದರಲ್ಲೇ ವೃತ್ತಿಜೀವನ ಆರಂಭಿಸಬೇಕೆಂದು ನಿರ್ಧರಿಸಿದ ಅವರು ಜೆ1 (ಶೇ.90ರಷ್ಟು ದೃಷ್ಟಿ ಕಳೆದುಕೊಂಡವರು) ಜುಡೋ ತರಬೇತಿಗೆ ಸೇರಿದರು. ಮುನಾವರ್ ಅಜರ್ ಎಂಬವರ ಬಳಿ ಜೂಡೋ ತರಭೇತಿ ಪಡೆದುಕೊಂಡರು. ಬಿಡುವಿನ ಸಮಯದಲ್ಲಿ ಜೀವನ ನಿರ್ವಹಣೆಗಾಗಿ ಅಣ್ಣನೊಂದಿಗೆ ಸೇರಿ ಚಹಾ ಮಾರಾಟ ಮಾಡುತ್ತಿದ್ದರು.
ಹೀಗೆ ಜೂಡೋದಲ್ಲಿ ಪಳಗಿ ಹಂತಹಂತವಾಗಿ ಕೌಶಲ್ಯಗಳನ್ನು ಅಭಿವೃದ್ದಿಪಡಿಸಿಕೊಂಡರು. ಮುಂದೊಂದು ದಿನ ರಾಷ್ಟ್ರೀಯ ಮಟ್ಟದಲ್ಲೂ ಮಿಂಚು ಹರಿಸಿದರು. 2022ರ ಏಷ್ಯನ್ ಗೇಮ್ಸ್ನಲ್ಲಿ ಭಾಗವಹಿಸಿ ಬೆಳ್ಳಿ ಪದಕ ಗೆದ್ದರು. ಇದೀಗ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಬೇಟೆ ಮಾಡಿದ್ದಾರೆ.
Kapil paaji tussi chha gaye! 💯🙌
— JioCinema (@JioCinema) September 5, 2024
Defeating WR 2 Elielton De Oliveira, Kapil Parmar secures India's first-ever Paralympic medal in Judo! 🔥
#ParalympicGamesParis2024 #ParalympicsOnJioCinema #JioCinemaSports #Judo pic.twitter.com/HrnycLbP4I
ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 25ನೇ ಪದಕ: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್ಗಳು ಪದಕ ಬೇಟೆ ಮುಂದುವರೆಸಿದ್ದಾರೆ. ಇದುವರೆಗೂ 5 ಚಿನ್ನ, 9 ಬೆಳ್ಳಿ ಹಾಗೂ 11 ಕಂಚಿನ ಪದಕ ಸೇರಿದಂತೆ ಪದಕಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಪದಕ ಪಟ್ಟಿಯಲ್ಲಿ ಭಾರತ 13ನೇ ಸ್ಥಾನದಲ್ಲಿದೆ.