ಹೈದರಾಬಾದ್: ಭಾರತವು ಇದುವರೆಗೂ ಕ್ರಿಕೆಟ್ ಲೋಕಕ್ಕೆ ಹಲವಾರು ಆಟಗಾರರನ್ನು ಪರಿಚಯಿಸಿದೆ. ಇದರಲ್ಲಿ ಕೆಲ ಆಟಗಾರರು ಕ್ರಿಕೆಟ್ನಿಂದ ನಿವೃತ್ತಿ ಪಡೆದ ನಂತರವೂ ಕೋಚ್ ಆಗಿ ಮುಂದುವರೆದಿದ್ದಾರೆ. ಕೇವಲ ಭಾರತ ತಂಡಕ್ಕೆ ಮಾತ್ರವಲ್ಲ ವಿದೇಶಿ ತಂಡಗಳಲ್ಲೂ ಕೋಚ್ ಆಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ. ಹಾಗಾದರೆ ಬನ್ನಿ ವಿದೇಶಿ ತಂಡಗಳಲ್ಲಿ ಕೋಚ್ ಆಗಿರುವ ಭಾರತೀಯ ಮಾಜಿ ಆಟಗಾರರು ಯಾರು ಎಂದು ಈ ಸುದ್ಧಿಯಲ್ಲಿ ತಿಳಿದುಕೊಳ್ಳೋಣ.
ಸಂದೀಪ್ ಪಾಟೀಲ್: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್ 1983ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಟೀಂ ಇಂಡಿಯಾ ಪರ 29 ಟೆಸ್ಟ್ ಹಾಗೂ 45 ಏಕದಿನ ಪಂದ್ಯಗಳನ್ನೂ ಆಡಿದ್ದಾರೆ. ಅವರ ಕ್ರಿಕೆಟ್ ವೃತ್ತಿಜೀವನದ ನಂತರ ಕೀನ್ಯಾ ತಂಡಕ್ಕೆ ತರಬೇತುದಾರರಾಗಿ ನೇಮಕ ಗೊಂಡಿದ್ದರು. ಅವರ ಮಾರ್ಗದರ್ಶನದಲ್ಲಿ ಕೀನ್ಯಾ ತಂಡವು 2003 ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ಗೆ ತಲುಪುವ ಮೂಲಕ ಕ್ರಿಕೆಟ್ ಜಗತ್ತನ್ನೇ ಬೆರಗುಗೊಳಿಸಿತು.
ಲಾಲ್ ಚಂದ್ ರಜಪೂತ್: ಇವರು ಭಾರತಕ್ಕಾಗಿ 2 ಟೆಸ್ಟ್ ಮತ್ತು 4 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಆಟಕ್ಕೆ ವಿದಾಯ ಹೇಳಿದ ನಂತರ, ರಜಪೂತ್ ತಮ್ಮ ವೃತ್ತಿಜೀವನವನ್ನು ಕೋಚಿಂಗ್‌ಗೆ ಬದಲಾಯಿಸಿದರು. ಅವರು 2016-2017 ರಿಂದ ಅಫ್ಘಾನಿಸ್ತಾನ ಮತ್ತು 2018-2022ರ ವರೆಗೆ ಜಿಂಬಾಬ್ವೆಯ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದರು. ಪ್ರಸ್ತುತ ಯುಎಇ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಬಿನ್ ಸಿಂಗ್: ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ರಾಬಿನ್ ಸಿಂಗ್ ಭಾರತಕ್ಕಾಗಿ 136 ಏಕದಿನ ಮತ್ತು ಒಂದು ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ರಾಬಿನ್ ಸಿಂಗ್ 2004ರಲ್ಲಿ ಹಾಂಕಾಂಗ್ ತಂಡಕ್ಕೆ ತರಬೇತುದಾರರಾಗಿದ್ದರು. ಅಮೆರಿಕ ಕ್ರಿಕೆಟ್ ತಂಡದ ಕೋಚ್ ಆಗಿಯೂ ಕೆಲಸ ಮಾಡಿದ್ದರು. ಐಪಿಎಲ್‌ನಲ್ಲಿ ಅವರು ಮುಂಬೈ ಇಂಡಿಯನ್ಸ್ ಸೇರಿದಂತೆ ಹಲವು ಟಿ20 ಲೀಗ್ ತಂಡಗಳಿಗೆ ತರಬೇತಿ ನೀಡಿದ್ದರು.
ಶ್ರೀಧರನ್ ಶ್ರೀರಾಮ್: ಟೀಂ ಇಂಡಿಯಾ ಆಟಗಾರ ಶ್ರೀಧರನ್ ಶ್ರೀರಾಮ್ ತಮ್ಮ ವೃತ್ತಿಜೀವನದಲ್ಲಿ ದೇಶಕ್ಕಾಗಿ 8 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು 2015ರಲ್ಲಿ ಆಸ್ಟ್ರೇಲಿಯಾ ಎ ತಂಡಕ್ಕೆ ಕೋಚ್ ಆಗಿದ್ದರು. 2019ರಲ್ಲಿ ಆಸ್ಟ್ರೇಲಿಯಾ ಆಶಸ್ ಸರಣಿಯನ್ನು ಗೆಲ್ಲುವಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದರು.
ಅಜಯ್ ಜಡೇಜಾ: ಟೀಂ ಇಂಡಿಯಾದ ಮಾಜಿ ಆಟಗಾರ ಅಜಯ್ ಜಡೇಜಾ ಭಾರತಕ್ಕಾಗಿ 15 ಟೆಸ್ಟ್ ಮತ್ತು 196 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನಿವೃತ್ತಿಯ ನಂತರ, ಜಡೇಜಾ ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಸಹಾಯಕ ಕೋಚ್ ಆಗಿದ್ದರು. ಜಡೇಜಾ ನಾಯಕತ್ವದಲ್ಲಿ ಅಫ್ಘಾನ್ ತಂಡ 2023ರ ವಿಶ್ವಕಪ್‌ನಲ್ಲಿ ಮಿಂಚಿತ್ತು. ಭಾರತದಲ್ಲಿ ನಡೆದ ಆ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ತಂಡಗಳನ್ನು ಮಣಿಸಿ ಸಂಚಲನ ಮೂಡಿಸಿತ್ತು.
ಇದನ್ನೂ ಓದಿ: ವಿರಾಟ್ ಕೊಹ್ಲಿ ಉಡುಗೊರೆಯಾಗಿ ಕೊಟ್ಟ ಬ್ಯಾಟ್ನಿಂದಲೇ ಗಗನಚುಂಬಿ ಸಿಕ್ಸರ್ ಸಿಡಿಸಿದರಾ ಈ ಬೌಲರ್..? - Virat Kohli Bat