ಬ್ರಿಡ್ಜ್‌ಟೌನ್ (ಬಾರ್ಬಡೋಸ್): ಟಿ-20 ವಿಶ್ವಕಪ್ ವಿಜೇತ 'ಟೀಂ ಇಂಡಿಯಾ'ದ ಆಟಗಾರರ ಸ್ವಾಗತಕ್ಕಾಗಿ ಇಡೀ ದೇಶವು ಕಾಯುತ್ತಿದೆ. ಆದರೆ, ರೋಹಿತ್ ಶರ್ಮಾ ನೇತೃತ್ವದ ತಂಡದ ಪ್ರಯಾಣಕ್ಕೆ ಚಂಡಮಾರುತ ಅಡ್ಡಿಯಾಗಿದೆ. ಹೀಗಾಗಿ ಪ್ರಯಾಣ ಯೋಜನೆಯ ಮೇಲೆ ಪರಿಣಾಮ ಬೀರಿದೆ. ಅಭಿಮಾನಿಗಳು ತಮ್ಮ ಮೆಚ್ಚಿನ ವಿಶ್ವ ಚಾಂಪಿಯನ್ ಹೀರೋಗಳನ್ನು ನೋಡಲು ಸ್ವಲ್ಪ ಸಮಯ ಕಾಯಬೇಕಾಗಬಹುದು.
ಅಟ್ಲಾಂಟಿಕ್‌ನಲ್ಲಿ ಹುಟ್ಟಿಕೊಂಡ ಬೆರಿಲ್ ಚಂಡಮಾರುತವು ಗರಿಷ್ಠ 210 ಕಿ.ಮೀ ವೇಗದ ಗಾಳಿಯೊಂದಿಗೆ ತೀವ್ರಗೊಂಡಿದೆ. ಈ ಚಂಡಮಾರುತವು ಬಾರ್ಬಡೋಸ್‌ನ ಪೂರ್ವ ಆಗ್ನೇಯಕ್ಕೆ 570 ಕಿ.ಮೀ. ದೂರದಲ್ಲಿದೆ. ಆದ್ದರಿಂದ ಸಂಜೆ ವೇಳೆಗೆ ಬ್ರಿಡ್ಜ್‌ಟೌನ್‌ನಲ್ಲಿರುವ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಎಂದು ವರದಿಯಾಗಿದೆ.
ಭಾರತ ತಂಡವು ನ್ಯೂಯಾರ್ಕ್‌ನಿಂದ ದುಬೈ ಮೂಲಕ ಎಮಿರೇಟ್ಸ್ ವಿಮಾನದಲ್ಲಿ ತವರಿಗೆ ಬರಬೇಕಿತ್ತು. ಆದರೆ ಈಗ ಇಲ್ಲಿಂದ ನೇರವಾಗಿ ಚಾರ್ಟರ್ ಫ್ಲೈಟ್‌ನಲ್ಲಿ ತಂಡವನ್ನು ಭಾರತಕ್ಕೆ ಕರೆತರುವ ಯೋಜನೆ ಇದೆ. ಜೊತೆಗೆ ತವರಿಗೆ ಬಂದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಚಿಂತನೆಯೂ ಇದೆ ಎಂದು ಮೂಲಗಳು ತಿಳಿಸಿವೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಟಗಾರರು, ಸಹಾಯಕ ಸಿಬ್ಬಂದಿ, ಕುಟುಂಬಗಳು ಮತ್ತು ಅಧಿಕಾರಿಗಳು ಸೇರಿದಂತೆ ಸುಮಾರು 70 ಸದಸ್ಯರನ್ನು ಟೀಂ ಇಂಡಿಯಾ ಒಳಗೊಂಡಿದೆ. ಐಸಿಸಿ ಟ್ರೋಫಿಗಾಗಿ 11 ವರ್ಷಗಳ ಕಾಯುವಿಕೆಯನ್ನು ಭಾರತ ತಂಡ ಶನಿವಾರ ಕೊನೆಗೊಳಿಸಿದೆ. ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ನಡೆದ ಟಿ-20 ವಿಶ್ವಕಪ್ ಫೈನಲ್‌ನ ರೋಚಕ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಳು ರನ್‌ಗಳಿಂದ ಮಣಿಸಿ ಎರಡನೇ ಬಾರಿಗೆ ಟಿ-20 ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕ್ರಿಕೆಟ್ ತಂಡಕ್ಕೆ 125 ಕೋಟಿ ರೂಪಾಯಿಗಳ ಬಹುಮಾನವನ್ನು ಬಿಸಿಸಿಐ ಘೋಷಿಸಿದೆ.
ಇದನ್ನೂ ಓದಿ: ಟಿ-20 ಚಾಂಪಿಯನ್ ಭಾರತ ತಂಡಕ್ಕೆ ₹ 125 ಕೋಟಿ ಬಹುಮಾನ ಘೋಷಿಸಿದ ಬಿಸಿಸಿಐ