India vs New Zealand 3rd Test: ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್ ಮಾರಕ ಬೌಲಿಂಗ್ ದಾಳಿಗೆ ನ್ಯೂಜಿಲೆಂಡ್ ತತ್ತರಿಸಿ, 235 ರನ್ಗಳಿಗೆ ಆಲೌಟ್ ಆಗಿದೆ.
ಭಾರತ ವಿರುದ್ಧದ 3 ನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಕಿವೀಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲೆಂಡ್ ತಂಡಕ್ಕೆ ಭಾರತ ಆರಂಭಿಕ ಆಘಾತ ನೀಡಿತು. ನ್ಯೂಜಿಲೆಂಡ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಆಗಿರುವ ಡೇವನ್ ಕಾನ್ವೇಗೆ ಆಕಾಶ್ ದೀಪ್ ಪೆವಿಲಿಯನ್ ಹಾದಿ ತೋರಿಸಿದರು. ಮೂರನೇ ಓವರ್ನ ಎರಡನೇ ಎಸೆತದಲ್ಲಿ 4 ರನ್ಗಳನ್ನು ಕಲೆ ಹಾಕಿದ್ದ ಡೇವನ್ ಕಾನ್ವೆ ಔಟಾದರು. ಬಳಿಕ ನಾಯಕ ಟಾಮ್ ಲ್ಯಾಥಮ್ 28 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದರು. ನಂತರ ವಿಲ್ ಯಂಗ್ 71 ರನ್ ಮತ್ತು ಡೇರಿಲ್ ಮಿಚೆಲ್ 82 ರನ್ ಗಳಿಸಿ ತಂಡವನ್ನು ಅಪಾಯದಿಂದ ಪಾರು ಮಾಡಲು ಯತ್ನಿಸಿದರು. ಆದರೆ ಜಡೇಜಾ ಬೌಲಿಂಗ್ನಲ್ಲಿ ವಿಲ್ ಯಂಗ್ ವಿಕೆಟ್ ನೀಡಿದರೆ, ಮಿಚೆಲ್ ವಿಕೆಟ್ ಪಡೆಯುವಲ್ಲಿ ವಾಷಿಂಗ್ಟನ್ ಸುಂದರ್ ಯಶಸ್ವಿಯಾದರು.
ಈ ಜೋಡಿ ಹೊರತುಪಡಿಸಿ ಉಳಿದ ಬ್ಯಾಟ್ಸಮನ್ಗಳು ಭಾರತೀಯ ಬೌಲರ್ಗಳ ದಾಳಿಗೆ ರನ್ ಗಳಿಸಲು ಪರದಾಡಿದರು. ರಚಿನ್ ರವೀಂದ್ರ (5), ಟಾಮ್ ಬ್ಲಂಡೆಲ್ (0), ಗ್ಲೆನ್ ಫಿಲಿಪ್ಸ್ (17), ಐಶ್ ಸೋಧಿ (7), ಮ್ಯಾಟ್ ಹೆನ್ರಿ (0), ಅಜಾಜ್ ಪಟೇಲ್ (7) ರನ್ ಗಳಿಸಿ ಬಂದಷ್ಟೇ ವೇಗವಾಗಿ ಪೆವಿಯಲಿಯನ್ ಸೇರಿದರು.
ಜಡೇಜಾ, ಸುಂದರ್ ಕರಾರುವಕ್ಕ ಬೌಲಿಂಗ್: ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಮಾರಕ ಬೌಲಿಂಗ್ನಿಂದ ಕಿವೀಸ್ ಅಲ್ಪ ಮೊತ್ತಕ್ಕೆ ಪತನವಾಯಿತು. ಜಡೇಜಾ 65 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಸುಂದರ್ 81 ರನ್ ಕೊಟ್ಟು 4 ವಿಕೆಟ್ ಕಿತ್ತರು. ಆಕಾಶ್ ದೀಪ್ 1 ವಿಕೆಟ್ ತೆಗೆದರು.
ಬಳಿಕ ಭಾರತ ತಂಡ ಬ್ಯಾಟಿಂಗ್ ಆರಂಭಿಸಿದ್ದು, ಸಾಯಂಕಾಲ 4 ಗಂಟೆಯ ವೇಳೆಗೆ 32 ರನ್ಗೆ 1 ವಿಕೆಟ್ ಕಳೆದುಕೊಂಡಿದೆ. ರೋಹಿತ್ ಶರ್ಮಾ 18 ರನ್ ಗಳಿಸಿ ವಿಕೆಟ್ ಕೊಟ್ಟಿದ್ದಾರೆ. ಸದ್ಯ ಯಶಸ್ವಿ ಜೈಸ್ವಾಲ್ (10), ಶುಭಮನ್ ಗಿಲ್ (5) ರನ್ ಗಳಿಸಿದ್ದು, ಕ್ರಿಸ್ನಲ್ಲಿದ್ದಾರೆ.
ಈಗಾಗಲೇ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕಳೆದುಕೊಂಡಿರುವ ಭಾರತ ಕೊನೆಯ ಪಂದ್ಯವನ್ನು ಗೆದ್ದು ಗೌರವ ಉಳಿಸುವ ನಿರೀಕ್ಷೆಯಲ್ಲಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂತಿಮ ರೇಸ್‌ನಲ್ಲಿ ಮುನ್ನಡೆಯಲು ಟೀಮ್ ಇಂಡಿಯಾಕ್ಕೆ ಈ ಗೆಲುವು ಅನಿವಾರ್ಯವಾಗಿದೆ.
ಭಾರತ ತಂಡ: ಯಶಸ್ವಿ ಜೈಸ್ವಾಲ್, ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್ (ವಿಕೆಟ್ ಕೀಪರ್), ಸರ್ಫರಾಜ್ ಖಾನ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ರವಿಚಂದ್ರನ್ ಅಶ್ವಿನ್, ಆಕಾಶದೀಪ್, ಸಿರಾಜ್.
ನ್ಯೂಜಿಲೆಂಡ್: ಟಾಮ್ ಲ್ಯಾಥಮ್ (ನಾಯಕ), ಡೇವನ್ ಕಾನ್ವೆ, ವಿಲ್ ಯಂಗ್, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ಐಶ್ ಸೋಧಿ, ಮ್ಯಾಟ್ ಹೆನ್ರಿ, ಅಜಾಜ್ ಪಟೇಲ್, ವಿಲಿಯಂ ಓ'ರೂರ್ಕ್.
ಓದಿ: ರಿಂಕುಗೆ ದೀಪಾವಳಿಯ ಭರ್ಜರಿ ಬೋನಸ್: 55 ಲಕ್ಷದಿಂದ 13 ಕೋಟಿ ರೂ. ಏರಿಕೆ