ನ್ಯೂಯಾರ್ಕ್: ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಗಳಿಸಿದೆ. ಇದೇ ವೇಳೆ ಅಭಿಮಾನಿಯೊಬ್ಬ ಭದ್ರತೆ ಉಲ್ಲಂಘಿಸಿರುವುದು ಗಮನ ಸೆಳೆದಿದೆ. ಮೈದಾನಕ್ಕೆ ನುಗ್ಗಿದ ಅಭಿಮಾನಿಯು ತನ್ನ ನೆಚ್ಚಿನ ಆಟಗಾರ ರೋಹಿತ್ ಶರ್ಮಾ ಬಳಿ ತೆರಳಿದ್ದು, ತಕ್ಷಣ ಎಚ್ಚೆತ್ತ ಯುಎಸ್ ಪೊಲೀಸರು ವ್ಯಕ್ತಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ನಾಯಕ ರೋಹಿತ್ ಶರ್ಮಾ ಹೃದಯಸ್ಪರ್ಶಿ ಹಾವಭಾವ ತೋರಿದ್ದಾರೆ.
ಪಂದ್ಯದ ವೇಳೆ ಅಭಿಮಾನಿಯು ಭದ್ರತೆ ಉಲ್ಲಂಘಿಸಿ ಮೈದಾನಕ್ಕೆ ನುಗ್ಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಟ ನಡೆಯುತ್ತಿರುವಾಗಲೇ ಸ್ಟೇಡಿಯಂನೊಳಗೆ ಬಂದ ವ್ಯಕ್ತಿಯು ರೋಹಿತ್ರನ್ನು ತಬ್ಬಿಕೊಂಡು ಅಭಿಮಾನ ಮೆರೆದರು. ಅದರ ಬೆನ್ನಲ್ಲೇ ಬಂದ ಇಬ್ಬರು ಪೊಲೀಸರು ಅವರನ್ನು ಕೈಕೋಳ ಹಾಕಿ ಕರೆದುಕೊಂಡು ಹೋದರು.
ಮೈದಾನದಿಂದ ಹೊರಗೆ ಕರೆದೊಯ್ಯುತ್ತಿರುವಾಗ, ರೋಹಿತ್ ನ್ಯೂಯಾರ್ಕ್ ಪೊಲೀಸರಿಗೆ ಸಾವಧಾನದಿಂದ ಹೋಗುವಂತೆ ಮನವಿ ಮಾಡುತ್ತಿರುವುದು ಕಂಡುಬಂತು. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ.
ರೋಹಿತ್ ಶರ್ಮಾರನ್ನು ಭೇಟಿಯಾಗಲು ಅಭಿಮಾನಿಯೊಬ್ಬರು ಭದ್ರತೆ ಉಲ್ಲಂಘಿಸಿದ ಸಂಬಂಧ ಈ ವರ್ಷ ನಡೆದ ಮೂರನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಟೆಸ್ಟ್ ಸರಣಿ ಮತ್ತು 2024ರ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಮೊದಲ ಪಂದ್ಯದಲ್ಲೂ ಇಂತಹದ್ದೇ ಘಟನೆ ನಡೆದಿತ್ತು.
60 ರನ್ ಜಯ: ಬಾಂಗ್ಲಾದೇಶದ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ, ವಿಕೆಟ್ ಕೀಪರ್ ರಿಷಬ್ ಪಂತ್ ಅವರ 32 ಎಸೆತಗಳಲ್ಲಿ 53 ರನ್ ಮತ್ತು ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಆಕ್ರಮಣಕಾರಿ 40 ರನ್ಗಳ ನೆರವಿನಿಂದ 182 ರನ್ ಗಳಿಸಿತ್ತು. ಬಳಿಕ ವೇಗಿಗಳಾದ ಅರ್ಷದೀಪ್ ಸಿಂಗ್ ಮತ್ತು ಶಿವಂ ದುಬೆ ತಲಾ ಒಂದೆರಡು ವಿಕೆಟ್ ಪಡೆದು ಎದುರಾಳಿ ತಂಡವನ್ನು 20 ಓವರ್‌ಗಳಲ್ಲಿ 122/9ಕ್ಕೆ ನಿರ್ಬಂಧಿಸಿದರು. ಈ ಮೂಲಕ 60 ರನ್ಗಳಿಂದ ಭಾರತ ತಂಡ ಗೆಲುವು ಸಾಧಿಸಿತು.
ಟೀಂ ಇಂಡಿಯಾವು ಜೂನ್ 5ರಂದು ಐರ್ಲೆಂಡ್ ವಿರುದ್ಧ ಹಣಾಹಣಿಯೊಂದಿಗೆ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ತಂಡವು ಈ ಬಾರಿ ಮತ್ತೊಮ್ಮೆ ಐಸಿಸಿ ಟ್ರೋಫಿ ಬರ ಕೊನೆಗೊಳಿಸುವ ನಿಟ್ಟಿನಲ್ಲಿ ಕಣಕ್ಕಿಳಿಯುತ್ತಿದೆ. ರೋಹಿತ್ ಪಡೆಯು ಜೂನ್ 9ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಆಡಲಿದ್ದು, ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಕೆನಡಾ ವಿರುದ್ಧ ಯುಎಸ್ ತಂಡಕ್ಕೆ 7 ವಿಕೆಟ್ಗಳ ಗೆಲುವು - T20 WORLD CUP