ಹೈದರಾಬಾದ್: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಇಂದು ನಡೆಯಲಿದೆ. ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಇದೀಗ ಕ್ಲೀನ್ಸ್ವೀಪ್ ಮೇಲೆ ಕಣ್ಣಿಟ್ಟಿದೆ. ಮತ್ತೊಂದೆಡೆ ಸರಣಿ ಕ್ಲೀನ್ ಸ್ವೀಪ್ನಿಂದ ಪಾರಾಗಲು ಬಾಂಗ್ಲಾ ಯೋಜನೆ ರೂಪಿಸುತ್ತಿದೆ. ಇನ್ನು ಕೊನೆಯ ಪಂದ್ಯಕ್ಕಾಗಿ ಟೀಮ್ ಇಂಡಿಯಾ ತನ್ನ ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.
ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಟೀಂ ಇಂಡಿಯಾ ಮೊದಲ ಪಂದ್ಯದಲ್ಲಿ ಮಯಾಂಕ್ ಯಾದವ್ ಮತ್ತು ನಿತೀಶ್ ಕುಮಾರ್ ಅವರಿಗೆ ಅಂತಾರಾಷ್ಟ್ರೀಯ ಪದಾರ್ಪಣೆಗೆ ಅವಕಾಶ ನೀಡಿತು. ಒಂದೆಡೆ, ನಿತೀಶ್ ಎರಡನೇ ಪಂದ್ಯದಲ್ಲಿ 74 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಭಾರತದ ನೂತನ ಹಿಟ್ಟರ್ ಆದರು. ಮತ್ತೊಂದೆಡೆ ಮಯಾಂಕ್ ಉತ್ತಮ ಬೌಲಿಂಗ್ ಮೂಲಕ ಎರಡೂ ಪಂದ್ಯಗಳಲ್ಲಿ ವಿಕೆಟ್ ಪಡೆದು ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದಾರೆ.
ಇದೀಗ ಮೂರನೇ ಪಂದ್ಯದಲ್ಲಿ ಹರ್ಷಿತ್ ರಾಣಾ ಮತ್ತು ತಿಲಕ್ ವರ್ಮಾಗೆ ಅವಕಾಶ ನೀಡುವ ಸಾಧ್ಯತೆ ಇದೆ. ಇದಕ್ಕೂ ಮುನ್ನ ಜಿಂಬಾಬ್ವೆ ವಿರುದ್ಧದ ಟಿ20 ತಂಡದಲ್ಲಿ ಹರ್ಷಿತ್ ರಾಣಾ ಸ್ಥಾನ ಪಡೆದಿದ್ದರೂ ಪಂದ್ಯವನ್ನಾಡಲು ಅವಕಾಶ ಸಿಕ್ಕಿರಲಿಲ್ಲ. ಒಂದು ವೇಳೆ, ಬಾಂಗ್ಲಾ ವಿರುದ್ಧ ಆಡುವ ಅವಕಾಶ ಸಿಕ್ಕರೆ ಮೂರನೇ ಪಂದ್ಯದಲ್ಲಿ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡಲಾಗುತ್ತದೆ.
ಭಾರತ-ಬಾಂಗ್ಲಾ ಹೆಡ್ ಟು ಹೆಡ್: ಕಳೆದ 15 ವರ್ಷಗಳಲ್ಲಿ ಉಭಯ ತಂಡಗಳ ನಡುವೆ ಇದೂವರೆಗು 16 ಟಿ20 ಪಂದ್ಯಗಳು ನಡೆದಿವೆ. ಈ ಅವಧಿಯಲ್ಲಿ ಬಾಂಗ್ಲಾದೇಶ ಒಮ್ಮೆ ಮಾತ್ರ ಭಾರತ ವಿರುದ್ಧ ಗೆಲುವು ಸಾಧಿಸಿದೆ. ಉಳಿದ 15 ಪಂದ್ಯಗಳಲ್ಲಿ ಭಾರತ ಜಯಗಳಿಸಿದೆ.
ಸ್ಥಳ: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ, ಹೈದರಾಬಾದ್
ಪಂದ್ಯ ಆರಂಭ: ಸಂಜೆ 7ಕ್ಕೆ
ಹವಾಮಾನ ವರದಿ: ಇಂದು ಹೈದರಾಬಾದ್ನಲ್ಲಿ ಬೆಳಗಿನ ಜಾವ ಶೇ.40ರಷ್ಟು ಮಳೆಯಾಗುವ ಸಾಧ್ಯತೆ ಇದ್ದು, ಸಂಜೆ ಸಮಯದಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಸಂಭಾವ್ಯ ತಂಡ-ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ಹಾರ್ದಿಕ್ ಪಾಂಡ್ಯ, ರಿಯಾನ್ ಪರಾಗ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ, ಜಿತೇಶ್ ಶರ್ಮಾ, ಆರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಮಯಾಂಕ್ ಯಾದವ್
ಬಾಂಗ್ಲಾದೆಶ: ನಜ್ಮುಲ್ ಹೊಸೈನ್ ಶಾಂಟೊ (ನಾಯಕ), ತಂಝೀದ್ ಹಸನ್ ತಮೀಮ್, ಪರ್ವೇಜ್ ಹೊಸೈನ್ ಎಮನ್, ತೌಹೀದ್ ಹೃದಯ್, ಮಹ್ಮುದುಲ್ಲಾ, ಲಿಟನ್ ದಾಸ್, ಜಾಕಿರ್ ಅಲಿ, ಮೆಹದಿ ಹಸನ್ ಮಿರಾಜ್, ರಿಶಾದ್ ಹೊಸೈನ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಹಸನ್ ಇಸ್ಲಾಂ, ತಸ್ಕಿನ್ ಅಹ್ಮದ್, ಸಬುಲ್ ಹಸನ್ ಇಸ್ಲಾಂ. ಹಸನ್.
ಇದನ್ನೂ ಓದಿ: ವೈಡ್ ಬಾಲ್, ನೋಬಾಲ್ ಇಲ್ಲದೆಯೇ 3 ಎಸೆತಗಳಲ್ಲಿ 24ರನ್ ಸಿಡಿಸಿದ್ದ ತೆಂಡೂಲ್ಕರ್!