ನವದೆಹಲಿ: ಯುವ ಕ್ರಿಕೆಟಿಗ ನಿತಿಶ್ ರೆಡ್ಡಿ ಆಲ್ರೌಂಡರ್ ಆಟ, ರಿಂಕು ಸಿಂಗ್ರ ಭರ್ಜರಿ ಬ್ಯಾಟಿಂಗ್ ಎದುರು ಬಾಂಗ್ಲಾದೇಶ ನಿರುತ್ತರವಾಯಿತು. ಇದರಿಂದ 2ನೇ ಟಿ20 ಪಂದ್ಯದಲ್ಲೂ 86 ರನ್ಗಳಿಂದ ಸೋಲು ಕಂಡಿತು. ಈ ಮೂಲಕ ಭಾರತ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆಯೇ 2-0 ಅಂತರದಲ್ಲಿ ಜಯಿಸಿತು.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಟಾಸ್ ಗೆದ್ದರೂ ಭಾರತವನ್ನು ಮೊದಲು ಬ್ಯಾಟಿಂಗ್ಗೆ ಆಹ್ವಾನಿಸಿದ ಬಾಂಗ್ಲಾ ದುಬಾರಿ ಬೆಲೆ ತೆತ್ತಿತು. ನಿತಿಶ್ ರೆಡ್ಡಿ, ರಿಂಕು ಸಿಂಗ್ ಅರ್ಧಶತಕದ ಬಲದಿಂದ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ಗೆ 221 ರನ್ ಗಳಿಸಿತು. ಬೆಟ್ಟದಂತಹ ಸ್ಕೋರ್ ಕಂಡೇ ಬಾಂಗ್ಲಾ ಬೆದರಿ ನಿಗದಿತ ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 135 ರನ್ ಗಳಿಸಿ, 86 ರನ್ಗಳ ಸೋಲುಂಡಿತು.
Delight in Delhi! 🥳#TeamIndia register a 86-run win in the 2nd T20I and seal the series 2⃣-0⃣
— BCCI (@BCCI) October 9, 2024
Scorecard - https://t.co/Otw9CpO67y#INDvBAN | @IDFCFIRSTBank pic.twitter.com/KfPHxoSZE4
7 ಬೌಲರ್ಗಳಿಗೂ ದಕ್ಕಿದ ವಿಕೆಟ್: ದೊಡ್ಡ ಸ್ಕೋರ್ ಬೆನ್ನತ್ತಿದ ಹುಸೈನ್ ಶ್ಯಾಂಟೊ ಪಡೆ ಆರಂಭಿದಿಂದಲೇ ಎಡವುತ್ತಾ ಸಾಗಿತು. ಯಾವೊಬ್ಬ ಬ್ಯಾಟರ್ ಕೂಡ ಕ್ರೀಸ್ನಲ್ಲಿ ನಿಲ್ಲದೇ ಬಂದಷ್ಟೇ ವೇಗವಾಗಿ ಹೊರನಡೆದರು. ಹಿರಿಯ ಆಟಗಾರ ಮಹಮದುಲ್ಲಾ ಮಾತ್ರ 39 ಎಸೆತಗಳಲ್ಲಿ 41 ರನ್ ಗಳಿಸಿದರು. ನಿಖರ ದಾಳಿ ನಡೆಸಿದ ಭಾರತೀಯ ಬೌಲರ್ಗಳು ಯಾವುದೇ ಹಂತದಲ್ಲಿ ಬಾಂಗ್ಲಾ ಪುಟಿಯದಂತೆ ನೋಡಿಕೊಂಡರು.
ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ 7 ಜನರಿಂದ ಬೌಲಿಂಗ್ ಮಾಡಿಸಿದರು. ವಿಶೇಷವೆಂದರೆ, ಬೌಲ್ ಮಾಡಿದ ಅಷ್ಟೂ ಆಟಗಾರರು ಕನಿಷ್ಠ ಒಂದು ವಿಕೆಟ್ ಕಿತ್ತರು. ನಿತಿಶ್ ರೆಡ್ಡಿ, ವರುಣ್ ಚಕ್ರವರ್ತಿ ತಲಾ 2 ವಿಕೆಟ್ ಪಡೆದರು. ಇದು ಬಾಂಗ್ಲಾಕ್ಕೆ ಭಾರಿ ದುಬಾರಿಯಾಯಿತು.
ನಿತಿಶ್ ರೆಡ್ಡಿ ಸ್ಫೋಟಕ ಬ್ಯಾಟಿಂಗ್: ಇದಕ್ಕೂ ಮೊದಲು ಭಾರತ ಬ್ಯಾಟಿಂಗ್ನಲ್ಲಿ ಧೂಳೆಬ್ಬಿಸಿತು. ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಔಟಾದ ಬಳಿಕ ಬಂದ ನಿತಿಶ್ ರೆಡ್ಡಿ ಮೈದಾನದ ಮೂಲೆ ಮೂಲೆಯಲ್ಲಿ ಚೆಂಡನ್ನು ಅಟ್ಟಿದರು. ನಿತಿಶ್ ಕೇವಲ 34 ಎಸೆತಗಳಲ್ಲಿ 74 ರನ್ ಸಿಡಿದರು. ಇದರಲ್ಲಿ 7 ಸಿಕ್ಸರ್, ಬೌಂಡರಿ ಇದ್ದವು. ವೃತ್ತಿಜೀವನದ ಮೊದಲ ಅರ್ಧಶತಕ ಸಂಭ್ರಮವನ್ನೂ ಆಚರಿಸಿದರು. ಇನ್ನೊಂದೆಡೆ ರಿಂಕು ಸಿಂಗ್ ಕೂಡ ಅಬ್ಬರಿಸಿ 29 ಎಸೆತಗಳಲ್ಲಿ 53 ರನ್ ಗಳಿಸಿದರು.
ಇದನ್ನೂ ಓದಿ: 2ನೇ ಟಿ20: ಟೀಂ ಇಂಡಿಯಾದ ಈ ಆಟಗಾರ ಸಿಡಿದೆದ್ದರೆ ಬಾಂಗ್ಲಾ ಧೂಳೀಪಟ!