ಧರ್ಮಶಾಲಾ (ಹಿಮಾಚಲ ಪ್ರದೇಶ): ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇನ್ನಿಂಗ್ಸ್ ಹಾಗೂ 64 ರನ್ಗಳಿಂದ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ತನ್ನ ಕೈವಶ ಮಾಡಿಕೊಂಡಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತವು 68.5 ಅಂಕಗಳೊಂದಿಗೆ ಅಗ್ರಸ್ಥಾನಕ್ಕೆ ಏರಿದೆ.
ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ಮಾರ್ಚ್ 7ರಂದು ಆರಂಭವಾಗಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಪಂದ್ಯ ಕೇವಲ ಮೂರೇ ದಿನಗಳಲ್ಲಿ ಮುಕ್ತಾಯವಾಗಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡಿದ್ದ ಆಂಗ್ಲರು ತಮ್ಮ ಮೊದಲ ಇನ್ನಿಂಗ್ಸ್ ಅನ್ನು 218 ರನ್ಗಳಿಗೆ ಮುಗಿಸಿದ್ದರು. ಬಳಿಕ ರೋಹಿತ್ ಶರ್ಮಾ ಬಳಗ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 477 ರನ್ಗಳನ್ನು ಕಲೆ ಹಾಕಿ 259 ರನ್ಗಳ ಮುನ್ನಡೆ ಸಾಧಿಸಿತ್ತು.
ಮತ್ತೊಂದೆಡೆ, ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್ನಲ್ಲಿ ಟೀಂ ಇಂಡಿಯಾದ ಸ್ಟಾರ್ ಸ್ಪಿನರ್ ಆರ್.ಅಶ್ವಿನ್ ದಾಳಿಗೆ ಸಿಲುಕಿ ಬೇಗ ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಮೂರನೇ ದಿನದಾಟದಲ್ಲಿ ಕೇವಲ 195 ರನ್ಗಳಿಗೆ ಆಂಗ್ಲರ ಪಡೆ ಸರ್ವಪತನ ಕಂಡು ಇನ್ನಿಂಗ್ಸ್ ಮತ್ತು 64 ರನ್ಗಳ ಅಂತರದಿಂದ ಸೋಲು ಅನುಭವಿಸಿತು.
ಅಶ್ವಿನ್, ಕುಲ್ದೀಪ್ ಮಿಂಚು: ಆಂಗ್ಲರ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನರ್ ರವಿಚಂದ್ರನ್ ಅಶ್ವಿನ್ ಮತ್ತು ಕುಲ್ದೀಪ್ ಯಾದವ್ ಮಿಂಚು ಹರಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಕುಲ್ದೀಪ್ ಐದು ವಿಕೆಟ್ಗಳು, ಅಶ್ವಿನ್ ನಾಲ್ಕು ವಿಕೆಟ್ಗಳನ್ನು ಕಿತ್ತು ಬ್ಯಾಟರ್ಗಳನ್ನು ಕಾಡಿದ್ದರು. ಇದರಿಂದ ಇಂಗ್ಲೆಂಡ್ ತಂಡವನ್ನು 218 ರನ್ಗಳಿಗೆ ಕಟ್ಟಿ ಹಾಕಲು ಸಾಧ್ಯವಾಗಿತ್ತು.
ಬ್ಯಾಟಿಂಗ್ ವಿಭಾಗದಲ್ಲೂ ಟೀಂ ಇಂಡಿಯಾ ಆಟಗಾರರು ಭರ್ಜರಿ ಪ್ರದರ್ಶನ ನೀಡಿದ್ದರು. ಮೊದಲ ಇನ್ನಿಂಗ್ನಲ್ಲಿ ಅಗ್ರ ಕ್ರಮಾಂಕದ ಐವರು ಬ್ಯಾಟರ್ಗಳಲ್ಲಿ ಇಬ್ಬರು ಶತಕ ಹಾಗೂ ಮೂವರು ಅರ್ಧಶತಕ ಸಿಡಿಸಿದ್ದರು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (57), ನಾಯಕ ರೋಹಿತ್ ಶರ್ಮಾ (103), ಶುಭ್ಮನ್ ಗಿಲ್ (110), ಟೆಸ್ಟ್ಗೆ ಪಾದಾರ್ಪಣೆ ಮಾಡಿದ್ದ ಕನ್ನಡಿಗ ದೇವದತ್ ಪಡಿಕ್ಕಲ್ (65), ಸರ್ಫರಾಜ್ ಖಾನ್ (56) ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಕೊನೆಯಲ್ಲಿ ಕುಲ್ದೀಪ್ (30), ಜಸ್ಪ್ರೀತ್ ಬುಮ್ರಾ (20) ಅವರ ಕೊಡುಗೆಯಿಂದ ಭಾರತ 477 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.
ಎರಡನೇ ಇನ್ನಿಂಗ್ನಲ್ಲೂ ಕಾಡಿದ ಅಶ್ವಿನ್: ಇಂಗ್ಲೆಂಡ್ ಬ್ಯಾಟರ್ಗಳನ್ನು ಎರಡನೇ ಇನ್ನಿಂಗ್ಸ್ನಲ್ಲೂ ಆರ್.ಅಶ್ವಿನ್ ಕಾಡಿದರು. ಪ್ರಮುಖ ಐದು ವಿಕೆಟ್ಗಳನ್ನು ಉರುಳಿಸಿದ ಅವರು ಈ ಪಂದ್ಯದಲ್ಲಿ ಒಟ್ಟು 9 ವಿಕೆಟ್ಗಳ ಸಾಧನೆ ಮಾಡಿದರು. ಇದರೊಂದಿಗೆ ತಮ್ಮ ನೂರನೇ ಟೆಸ್ಟ್ ಪಂದ್ಯವನ್ನು ಸ್ಮರಣೀಯವಾಗಿಸಿಕೊಂಡರು.
ಮತ್ತೊಂದೆಡೆ, ಕುಲ್ದೀಪ್, ಬುಮ್ರಾ ತಲಾ ಎರಡು ವಿಕೆಟ್, ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದು ತಂಡದ ಇನ್ನಿಂಗ್ಸ್ ಗೆಲುವಿಗೆ ಕಾರಣವಾದರು. ಇಂಗ್ಲೆಂಡ್ ಪರ ಐವರಿಗೆ ಮಾತ್ರ ಒಂದಂಕಿ ರನ್ ಗಡಿದಾಟಲು ಸಾಧ್ಯವಾಯಿತು. ಇದರಲ್ಲೂ ಜೋ ರೂಟ್ ಗರಿಷ್ಠ 84 ರನ್ ಗಳಿಸಿದರು. ಉಳಿದಂತೆ ಓಲಿ ಪೋಪ್ (19), ಜಾನಿ ಬೆಸ್ಟೊ (39), ಟಾಮ್ ಹಾರ್ಟ್ಲಿ (20), ಶೋಯಬ್ ಬಷೀರ್ 13 ರನ್ ಕಲೆ ಹಾಕಲು ಮಾತ್ರ ಶಕ್ತರಾದರು.
ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ 700 ವಿಕೆಟ್ ಪಡೆದ ಮೊದಲ ವೇಗಿ ಜೇಮ್ಸ್ ಆ್ಯಂಡರ್ಸನ್