Ind vs Aus 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಬಾರ್ಡರ್ ಗವಾಸ್ಕರ್ ಟೆಸ್ಟ್ ಸರಣಿಯ 3ನೇ ಪಂದ್ಯ ಶನಿವಾರ (ಇಂದು)ದಿಂದ ಪ್ರಾರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಆದರೆ, ಮೊದಲ ದಿನದ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಪಂದ್ಯ ಆರಂಭವಾಗಿ 13.2 ಓವರ್ಗಳು ಪೂರ್ಣಗೊಳ್ಳುತ್ತಿದ್ದಂತೆ ಮಳೆ ಪ್ರಾರಂಭವಾಗಿದ್ದು 4 ಗಂಟೆ ಕಳೆದರು ನಿಲ್ಲದ ಕಾರಣ ಮೊದಲ ದಿನದಾಟವನ್ನು ಮುಕ್ತಾಯಗೊಳಿಸಲಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಆರಂಭಿಸಿರುವ ಕಾಂಗರೂ ಪಡೆ ಯಾವುದೇ ವಿಕೆಟ್ ನಷ್ಟವಿಲ್ಲದೇ 28 ರನ್ ಕೆಲೆಹಾಕಿದೆ.

ಆರಂಭಿಕರಾಗಿ ಬ್ಯಾಟಿಂಗ್ ಬಂದಿರುವ ನಥನ್ ಮೆಕ್ಸ್ವೀನಿ (4), ಉಸ್ಮಾನ್ ಖವಾಜಾ 19ರನ್ ಕಲೆ ಹಾಕಿ ಕ್ರೀಸ್ನಲ್ಲಿ ಉಳಿದಿದ್ದಾರೆ. ಆದರೆ, ಪಂದ್ಯದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡದೇ ವಿರಾಟ್ ಕೊಹ್ಲಿ ಅಪರೂಪದ ದಾಖಲೆಯೊಂದನ್ನು ಬರೆದಿದ್ದಾರೆ.

ಇದು ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿ 100ನೇ ಅಂತಾರಾಷ್ಟ್ರೀಯ ಪಂದ್ಯ: ಹೌದು, 3ನೇ ಟೆಸ್ಟ್ನಲ್ಲಿ ಮೈದಾನಕ್ಕಿಳಿಯುತ್ತಿದ್ದಂತೆ ಕೊಹ್ಲಿ ಹೆಸರಿಗೆ ವಿಶೇಷ ದಾಖಲೆ ಸೇರ್ಪಡೆಗೊಂಡಿದೆ. ಆಸ್ಟ್ರೇಲಿಯಾ ವಿರುದ್ಧ ಕೊಹ್ಲಿಯ ಇದು 100ನೇ ಅಂತಾರಾಷ್ಟ್ರೀಯ ಪಂದ್ಯವಾಗಿದ್ದು, ಇದರೊಂದಿಗೆ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ಪಂದ್ಯಗಳನ್ನಾಡಿದ ವಿಶ್ವದ ಎರಡನೇ ಬ್ಯಾಟರ್ ಆಗಿ ದಾಖಲೆ ಬರೆದಿದ್ದಾರೆ.
ಇದಕ್ಕೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನೂರಕ್ಕೂ ಹೆಚ್ಚು ಪಂದ್ಯಗಳನ್ನು ಆಡಿರುವ ದಾಖಲೆ ಸಚಿನ್ ತೆಂಡೂಲ್ಕರ್ ಅವರ ಹೆಸರಲ್ಲಿದೆ. ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಈ ವರೆಗೂ ಆಸ್ಟ್ರೇಲಿಯಾ ವಿರುದ್ಧ 110 ಪಂದ್ಯಗಳನ್ನು ಆಡಿದ್ದು, ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಇದೀಗ ವಿರಾಟ್ ಆಸ್ಟ್ರೇಲಿಯಾ ವಿರುದ್ಧ 100 ಪಂದ್ಯಗಳನ್ನು ಆಡಿ ಸಚಿನ್ ದಾಖಲೆ ಸರಿಗಟ್ಟಿದ್ದಾರೆ.

ತೆಂಡೂಲ್ಕರ್ ಆಸೀಸ್ ಪರ 39 ಟೆಸ್ಟ್ ಮತ್ತು 71 ಏಕದಿನ ಸೇರಿ ಒಟ್ಟು 110 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 20 ಶತಕ ಮತ್ತು 31 ಅರ್ಧ ಶತಕಗಳ ಸಹಾಯದಿಂದ 6707 ರನ್ ಕಲೆಹಾಕಿದ್ದಾರೆ. ಮತ್ತೊಂದೆಡೆ ಕಿಂಗ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಈವರೆಗೂ 28 ಟೆಸ್ಟ್, 49 ಏಕದಿನ ಮತ್ತು 23 T20 ಪಂದ್ಯಗಳನ್ನು ಆಡಿದ್ದಾರೆ. ಮೂರು ಸ್ವರೂಪದಲ್ಲಿ 50.24 ಸರಾಸರಿಯಲ್ಲಿ 5326 ರನ್ ಗಳಿಸಿದ್ದಾರೆ. ಇದರಲ್ಲಿ 17 ಶತಕ ಮತ್ತು 27 ಅರ್ಧಶತಕ ಸೇರಿವೆ.
ಇದನ್ನೂ ಓದಿ: ರೋಹಿತ್, ಕೊಹ್ಲಿ, ಜೈಸ್ವಾಲ್ ಅಲ್ಲ: ಈ ಇಬ್ಬರು ಆಟಗಾರರು ಸಿಡಿದೆದ್ದರೆ 3ನೇ ಟೆಸ್ಟ್ನಲ್ಲಿ ಗೆಲುವು ಭಾರತದ್ದೇ