ನವದೆಹಲಿ: ಟಿ-20 ವಿಶ್ವಕಪ್ನಲ್ಲಿ ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರದರ್ಶನದ ಮೇಲೆ ಪ್ರಶ್ನೆಗಳು ಏಳುತ್ತಿವೆ. ಮಹತ್ವದ ಟೂರ್ನಿಯಲ್ಲಿ ಇಬ್ಬರೂ ಆಟಗಾರರು ಕೈಕೊಡುತ್ತಿರುವುದು ತಂಡಕ್ಕೆ ಹಿನ್ನಡೆ ಉಂಟು ಮಾಡುತ್ತಿದೆ. ಸೂಪರ್-8 ಹಂತದಲ್ಲಿ ಬಲಿಷ್ಠ ತಂಡಗಳು ಎದುರಾಗಲಿವೆ. ಇದರಿಂದ ತಂಡ ಸಂಘಟಿತ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.
ಟಿ-20 ವಿಶ್ವಕಪ್ಗೆ ವಿರಾಟ್ ಮತ್ತು ರೋಹಿತ್ ಆಯ್ಕೆಯನ್ನೇ ಕೆಲವರು ಪ್ರಶ್ನಿಸಿದ್ದರು. ಆದರೆ, ಇದನ್ನು ವೀಕ್ಷಕ ವಿವರಣೆಗಾರ, ಭಾರತ ತಂಡದ ಮಾಜಿ ಆಟಗಾರ ಸಂಜಯ್ ಮಾಂಜ್ರೇಕರ್ ಸಮರ್ಥಿಸಿಕೊಂಡಿದ್ದಾರೆ. ಹಿರಿಯ ಆಟಗಾರರು ಲೀಗ್ನಲ್ಲಿ ರನ್ ಗಳಿಸಲು ಸಾಧ್ಯವಾಗದೇ ಇರಬಹುದು. ಆದರೆ, ಮುಂದಿನ ಪಂದ್ಯಗಳಲ್ಲಿ ಅವರ ಅಗತ್ಯ ಹೆಚ್ಚಿದೆ. ಅಲ್ಲಿ ಅವರು ರನ್ ಗಳಿಸಿದರೆ, ಈವರೆಗಿನ ವೈಫಲ್ಯ ಮುಚ್ಚಿ ಹೋಗಲಿದೆ ಎಂದು ಹೇಳಿದರು.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕೊಹ್ಲಿ ಮೂರು ಲೀಗ್ ಪಂದ್ಯಗಳಲ್ಲಿ ಎರಡಂಕಿಯನ್ನೂ ತಲುಪಿಲ್ಲ. ನಾಯಕ ರೋಹಿತ್ ಶರ್ಮಾ ಐರ್ಲೆಂಡ್ ವಿರುದ್ಧ ಅರ್ಧಶತಕ ಬಾರಿಸಿದ್ದು, ಬಿಟ್ಟರೆ ಪಾಕಿಸ್ತಾನ ಮತ್ತು ಅಮೆರಿಕ ವಿರುದ್ಧ ರನ್ ಗಳಿಸಲಿಲ್ಲ. ಆದರೆ, ಅವರಿಬ್ಬರ ಅನುಭವ ತಂಡಕ್ಕೆ ನಿಜಕ್ಕೂ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಲೀಗ್ನಲ್ಲಿ ಆಡದಿದ್ದರೂ, ನಾಕೌಟ್, ಸೆಮಿಫೈನಲ್, ಫೈನಲ್ ಪಂದ್ಯದಲ್ಲಿ ಮಿಂಚಿದರೆ, ಹಿರಿತನಕ್ಕೆ ತಕ್ಕುದಾದ ಬೆಲೆ ಸಿಗಲಿದೆ. ಅಭಿಮಾನಿಗಳ ನಿರೀಕ್ಷೆಯೂ ಇದೇ ಆಗಿರುತ್ತದೆ. 1992 ರಲ್ಲಿ ಪಾಕಿಸ್ತಾನ ಕೂಡ ಇಂಥದ್ದೇ ಲೆಕ್ಕಾಚಾರದಲ್ಲಿ ಗೆಲುವು ಸಾಧಿಸಿತ್ತು. ಕಠಿಣ ಪಂದ್ಯಗಳಲ್ಲಿ ಹಿರಿಯರ ಅನುಭವ ಕೆಲಸ ಮಾಡುತ್ತದೆ. ಹೀಗಾಗಿ ಆಯ್ಕೆ ಸಮಿತಿ ಈ ನಿರ್ಧಾರಕ್ಕೆ ಬಂದಿರುತ್ತದೆ ಎಂದು ಮಾಂಜ್ರೇಕರ್ ಹೇಳಿದರು.
ಭವಿಷ್ಯದಲ್ಲಿ ವಿರಾಟ್ ಮತ್ತು ರೋಹಿತ್ ಟಿ20 ಟೂರ್ನಿಗಳಲ್ಲಿ ಆಡಲಿದ್ದಾರೆಯೇ ಎಂಬ ಪ್ರಶ್ನೆಗೆ, ಇದನ್ನು ಆಯ್ಕೆ ಸಮಿತಿ ನಿರ್ಧರಿಸುತ್ತದೆ. ಈ ಇಬ್ಬರ ಬಗ್ಗೆ ಆಯ್ಕೆ ಸಮಿತಿಯ ನಿಲುವೇನು ಎಂದು ಅವರನ್ನೇ ಕೇಳಬೇಕು. ಇಬ್ಬರ ಮೇಲೆ ಇನ್ನೂ ನಂಬಿಕೆ ಇರುವ ಕಾರಣ ತಂಡಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ವಿಂಡೀಸ್ನಲ್ಲಿ ಮಿಂಚುವರೇ ದುಬೆ?: ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಮಿಂಚಿದ್ದ ಶಿವಂ ದುಬೆ, ವಿಶ್ವಕಪ್ನಲ್ಲಿ ವಿಫಲವಾಗುತ್ತಿರುವುದು ತಂಡಕ್ಕೆ ತಲೆನೋವಾಗಿದೆ. ಕಠಿಣ ನ್ಯೂಯಾರ್ಕ್ ಪಿಚ್ನಲ್ಲಿ ರನ್ ಕಲೆಹಾಕಲು ಪರದಾಡಿದ್ದರು. ಇದೀಗ ಮುಂದಿನ ಪಂದ್ಯಗಳಲ್ಲಿ ವಿಂಡೀಸ್ನ ನಿಧಾನಗತಿ ಪಿಚ್ನಲ್ಲಿ ನಡೆಯಲಿದ್ದು, ಅಲ್ಲಿಯಾದರೂ ದುಬೆ ಬ್ಯಾಟಿಂಗ್ ಕರಾಮತ್ತು ತೋರಿಸಲಿದ್ದಾರಾ ಎಂಬುದು ಕುತೂಹಲಕಾರಿಯಾಗಿದೆ.
ಶಿವಂ ದುಬೆ ಈಗಲೂ ಹಿಟ್ ಬ್ಯಾಟರ್. ಐಪಿಎಲ್ನಲ್ಲಿ ಸ್ಪಿನ್ನರ್ ಬೆಂಡೆತ್ತಿದ ಆತ, ನ್ಯೂಯಾರ್ಕ್ನಲ್ಲಿ ವಿಫಲನಾದರು. ವಿಂಡೀಸ್ ನೆಲದಲ್ಲಿ ಹೇಗೆ ಪ್ರದರ್ಶನ ನೀಡಲಿದ್ದಾರೆ ಎಂಬುದನ್ನು ಕಾದು ನೋಡಬೇಕು. ಐಪಿಎಲ್ ಪ್ರದರ್ಶನ ಇಲ್ಲಿ ಮುಂದುವರಿದರೆ, ತಂಡಕ್ಕೆ ಪ್ಲಸ್ ಆಗಲಿದೆ ಎಂದು ಮಾಂಜ್ರೇಕರ್ ಹೇಳಿದರು.
ಮೂರನೇ ಕ್ರಮಾಂದಲ್ಲಿ ರಿಷಭ್ ಅದ್ಭುತ ನಡೆ: ರಿಷಬ್ ಪಂತ್ರನ್ನು ಮೂರನೇ ಕ್ರಮಾಂಕದಲ್ಲಿ ಆಡಿಸುತ್ತಿರುವುದು ಅದ್ಭುತ ನಿರ್ಧಾರವಾಗಿದೆ. ಇದನ್ನು ನಾವು ಊಹಿಸಿರಲಿಲ್ಲ. ಆದರೆ, ಎದುರಾಳಿಗಳಿಗೆ ಮಾಸ್ಟರ್ ಸ್ಟ್ರೋಕ್ ಆಗಿದೆ. ಲೀಗ್ ಪಂದ್ಯದಲ್ಲಿ ಪಂತ್ ಅಬ್ಬರಿಸಿದ್ದು ನೋಡಿದರೆ, ಮುಂದಿನ ಪಂದ್ಯಗಳಲ್ಲೂ ಆತ ತಂಡಕ್ಕೆ ಅಮೋಘ ನೆರವು ನೀಡಲಿದ್ದಾನೆ ಎಂದು ವಿಧಿತವಾಗುತ್ತದೆ ಎಂದರು.
ವಿಂಡೀಸ್ನಲ್ಲಿ ಸ್ಪಿನ್ನರ್ ಬಳಸಬಹುದು: ಸ್ಪಿನ್ನರ್ ಕುಲದೀಪ್ ಯಾದವ್ಗೆ ಈವರೆಗೆ ಅವಕಾಶ ಸಿಕ್ಕಿಲ್ಲ. ವೆಸ್ಟ್ ಇಂಡೀಸ್ ನೆಲದಲ್ಲಿನ ಪಿಚ್ಗಳು ಸ್ಪಿನ್ನರ್ಗಳಿಗೆ ನೆರವು ನೀಡಲಿವೆ. ಆಗ ಕುಲದೀಪ್ಗೆ ಅವಕಾಶ ನೀಡಬಹುದು. ಇಲ್ಲವಾದಲ್ಲಿ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಜೋಡಿಯನ್ನು ಮುಂದುವರಿಸುವುದು ಉತ್ತಮ ಆಯ್ಕೆಯಾಗಿದೆ ಎಂದು ಮಾಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ.