ICC Champions Trophy 2025: ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯ ವಹಿಸಿಕೊಂಡಿರುವ ಚಾಂಪಿಯನ್ಸ್ ಟ್ರೋಫಿ-2025ಕ್ಕೆ ಸಂಬಂಧಿಸಿದಂತೆ ಇಂದು ದೊಡ್ಡ ಅಪ್‌ಡೇಟ್ ಹೊರಬಿದ್ದಿದೆ. ಈ ಪಂದ್ಯಾವಳಿಯನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸಲಾಗುತ್ತದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಖಚಿತಪಡಿಸಿದೆ.
ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯಲ್ಲಿ ಭಾರತ ತಂಡದ ಪಂದ್ಯಗಳನ್ನು ಪಾಕಿಸ್ತಾನದ ಬದಲು ತಟಸ್ಥ ಸ್ಥಳದಲ್ಲಿ ನಡೆಸಲಾಗುತ್ತದೆ ಎಂದು ಐಸಿಸಿ ತಿಳಿಸಿದೆ. ಐಸಿಸಿಯೊಂದಿಗಿನ ಎಲ್ಲಾ ಕ್ರಿಕೆಟ್ ಮಂಡಳಿಗಳ ಸಭೆಯ ನಂತರ ಹೈಬ್ರಿಡ್ ಮಾದರಿಗೆ ಐಸಿಸಿ ಒಪ್ಪಿಗೆ ನೀಡಿದೆ. ಆದಾಗ್ಯೂ, ಈ ಟೂರ್ನಿಯ ಹೋಸ್ಟಿಂಗ್ ಹಕ್ಕು ಸಂಪೂರ್ಣವಾಗಿ ಪಾಕಿಸ್ತಾನಕ್ಕೆ ಇರಲಿದೆ.
JUST IN: ICC issues update on Champions Trophy 2025 venue.
— ICC (@ICC) December 19, 2024
Details 👇https://t.co/aWEFiF5qeS
ಭದ್ರತಾ ದೃಷ್ಟಿಯಿಂದಾಗಿ ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳುವುದಿಲ್ಲ. ಅಲ್ಲದೇ ಭಾರತದ ಪಂದ್ಯಗಳನ್ನು ಹೈಬ್ರಿಡ್ ಮಾದರಿಯಲ್ಲಿ ನಡೆಸುವಂತೆ ಬಿಸಿಸಿಐ ತಿಳಿಸಿತ್ತು. ಇದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಆರಂಭದಿಂದಲೂ ಒಪ್ಪಿಗೆ ಸೂಚಿಸಲು ಹಿಂದೇಟು ಹಾಕಿತ್ತು. ಹೈಬ್ರಿಡ್ ಮಾದರಿಗೂ ವಿರೋಧ ವ್ಯಕ್ತಪಡಿಸಿತ್ತು. ಹೈಬ್ರಿಡ್ ಮಾದರಿಗೆ ಒಪ್ಪದಿದ್ದರೆ ಟೂರ್ನಿಯಲ್ಲೂ ಭಾಗಿಯಾಗಲ್ಲ ಎಂದು ಭಾರತ ಖಡಕ್ ಪ್ರತಿಕ್ರಿಯೆ ನೀಡಿತ್ತು. ಈ ಎಲ್ಲಾ ಚರ್ಚೆಗಳ ನಂತರ ಅಂತಿಮವಾಗಿ ಹೈಬ್ರಿಡ್ ಮಾದರಿಗೆ ಐಸಿಸಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಇನ್ನು ಶೀಘ್ರದಲ್ಲೇ ಪಂದ್ಯಗಳ ವೇಳಾಪಟ್ಟಿ ಪ್ರಕಟವಾಗಲಿದೆ.
ಈ ಈವೆಂಟ್‌ನಲ್ಲಿ ಆತಿಥೇಯ ಪಾಕಿಸ್ತಾನದ ಜೊತೆಗೆ ಅಫ್ಘಾನಿಸ್ತಾನ, ಆಸ್ಟ್ರೇಲಿಯಾ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿ 8 ತಂಡಗಳು ಭಾಗವಹಿಸಲಿವೆ.
2024ರಿಂದ 2027ರವರೆಗೆ ಹೈಬ್ರಿಡ್ ಮಾದರಿ ಅನ್ವಯ: ಪಾಕಿಸ್ತಾನ ಕೂಡ ಭಾರತದಲ್ಲಿ ಐಸಿಸಿ ಟೂರ್ನಿ ಅಥವಾ ಇನ್ನಾವುದೇ ಪಂದ್ಯವನ್ನು ಆಡಲು ನಿರಾಕರಿಸಿರುವ ಕಾರಣ 2024ರಿಂದ 2027ರ ಅವಧಿಯಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ನಡೆಯಲಿರುವ ಎಲ್ಲಾ ಐಸಿಸಿ ಈವೆಂಟ್‌ಗಳು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ ಐಸಿಸಿ ತಿಳಿಸಿದೆ.
2025ರಲ್ಲಿ ಭಾರತದಲ್ಲಿ ನಡೆಯಲಿರುವ ಮಹಿಳಾ ಕ್ರಿಕೆಟ್ ವಿಶ್ವಕಪ್ ಮತ್ತು 2026ರಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಕೂಡ ಹೈಬ್ರಿಡ್ ಮಾದರಿಯಲ್ಲಿಯೇ ನಡೆಯಲಿದೆ. 2026ರ ಟಿ20 ವಿಶ್ವಕಪ್ ಅನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನ ತಂಡ ಟಿ20 ವಿಶ್ವಕಪ್‌ನಲ್ಲಿ ಶ್ರೀಲಂಕಾದಲ್ಲಿ ತನ್ನ ಪಂದ್ಯವನ್ನು ಆಡಲಿದೆ.
2028ರಲ್ಲಿ ನಡೆಯುವ ಮಹಿಳಾ ಟಿ20 ವಿಶ್ವಕಪ್‌ನ ಆತಿಥ್ಯ ಹಕ್ಕನ್ನು ಪಾಕಿಸ್ತಾನ ಪಡೆದುಕೊಂಡಿದ್ದು ಇದೂ ಕೂಡ ಹೈಬ್ರಿಟ್ ಮಾದರಿಯಲ್ಲಿಯೇ ನಡೆಯುವ ಸಾಧ್ಯತೆ ದಟ್ಟವಾಗಿದೆ.
ಭಾರತದ ಪಂದ್ಯಗಳು ಎಲ್ಲಿ?: 2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಪಾಕಿಸ್ತಾನ ಮತ್ತು ಯುಎಇನಲ್ಲಿ ನಡೆಯಲಿವೆ. ಭಾರತದ ಪಂದ್ಯಗಳನ್ನು ದುಬೈ ಮೈದಾನದಲ್ಲಿ ನಡೆಸಲಾಗುತ್ತದೆ ಎಂದು ಕಳೆದ ವಾರ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿತ್ತು.
ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧ ಫಾಲೋ-ಆನ್ ಭೀತಿಯಿಂದ ಪಾರಾದ ಭಾರತ: ಟೆಸ್ಟ್ ಕ್ರಿಕೆಟ್‌ನಲ್ಲಿ 'ಫಾಲೋ-ಆನ್ ಅಂದ್ರೇನು?